More

    ಪಿಎಂ ಆವಾಸ್ ಯೋಜನೆಯಡಿ 395 ಮನೆ

    ಹಾನಗಲ್ಲ: ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಜಿಲ್ಲೆಗೆ 2804 ಮನೆಗಳು ಮಂಜೂರಾಗಿವೆ. ಹಾನಗಲ್ಲ ತಾಲೂಕಿಗೆ 395 ಮನೆಗಳು ಲಭ್ಯವಾಗಿದ್ದು, ಇದರಲ್ಲಿ 269 ಮನೆಗಳ ನಿರ್ವಣಕ್ಕೆ ಅನುಮೋದನೆ ನೀಡಲಾಗಿದೆ ಎಂದು ಶಾಸಕ ಸಿ.ಎಂ. ಉದಾಸಿ ಹೇಳಿದರು.

    ಪಟ್ಟಣದ ತಾಪಂ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಾಲೂಕಿನ ಉಪ್ಪುಣಸಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಪ್ಪುಣಸಿ, ಗುಡ್ಡದಮುಳಥಳ್ಳಿ, ಮುಳಥಳ್ಳಿ ಗ್ರಾಮಗಳ ವಸತಿ ರಹಿತ 26 ಫಲಾನುಭವಿಗಳಿಗೆ ಕಾರ್ಯಾದೇಶ ಪತ್ರ ವಿತರಿಸಿ ಅವರು ಮಾತನಾಡಿದರು.

    ಮನೆ ನಿರ್ವಣಕ್ಕೆ ಸಾಮಾನ್ಯ ಫಲಾನುಭವಿಗಳಿಗೆ 1.20 ಲಕ್ಷ ರೂ. ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ 1.70 ಲಕ್ಷ ರೂ. ಸಹಾಯಧನವನ್ನು 4 ಹಂತಗಳಲ್ಲಿ ವಿತರಿಸಲಾಗುತ್ತದೆ. ಫಲಾನುಭವಿಗಳ ಖಾತೆಗೆ ಆಧಾರ್ ಸಂಖ್ಯೆ ಜೋಡಣೆ, ಕಾಮಗಾರಿ ಜಿಪಿಎಸ್ ಕೈಗೊಂಡ ಮೇಲೆ ಹಣ ಜಮಾ ಆಗಲಿದೆ. ಕಾರ್ಯಾದೇಶ ಪಡೆದುಕೊಂಡ ಫಲಾನುಭವಿಗಳು ಕೂಡಲೆ ತಳಪಾಯ ಹಾಕಿ, ಜಿಪಿಎಸ್ ಮಾಡುವಂತೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದರು.

    ಜಿಲ್ಲೆಯಲ್ಲಿ 72,384 ವಸತಿ ರಹಿತ ಕುಟುಂಬ ಗುರುತಿಸಲಾಗಿದೆ. ಹಾನಗಲ್ಲ ತಾಲೂಕಿನಲ್ಲಿ 17,385 ಕುಟುಂಬ ಗುರುತಿಸಲಾಗಿದೆ ಎಂದರು.

    ಉಪ್ಪುಣಸಿ ಗ್ರಾಪಂ ಅಧ್ಯಕ್ಷೆ ಅಮೃತಾ ಹರಟಿ, ಸದಸ್ಯರಾದ ಶಂಕರ ಯಲಿಗೊಂಡರ, ಎಸ್.ಎಸ್. ಭಜಂತ್ರಿ, ಪಿಡಿಒ ಎಸ್.ಎಂ. ಸಾತೇನಹಳ್ಳಿ, ಮುಖಂಡರಾದ ಡಾ.ಸುನೀಲ ಹಿರೇಮಠ, ಶಿವಲಿಂಗಪ್ಪ ತಲ್ಲೂರ, ಸಿದ್ದಲಿಂಗಪ್ಪ ಶಂಕ್ರಿಕೊಪ್ಪ, ಹಸಿನಾಬಿ ನಾಯ್ಕನವರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts