More

    ಪಾಸ್ ತಂದವರಿಗಷ್ಟೇ ತಾಡಪತ್ರಿ!

    ರಾಣೆಬೆನ್ನೂರ: ಸರ್ಕಾರ ರೈತರ ಅನುಕೂಲಕ್ಕಾಗಿ ಸಬ್ಸಿಡಿ ಹಣದಲ್ಲಿ ತಾಡಪತ್ರಿ ವಿತರಣೆ ಮಾಡುತ್ತಿದೆ. ಆದರೆ, ರೈತರು ಅವುಗಳನ್ನು ಪಡೆದುಕೊಳ್ಳಬೇಕಾದರೆ ತಾಪಂ, ಜಿಪಂ ಸದಸ್ಯರು ಹಾಗೂ ಸ್ಥಳೀಯ ಶಾಸಕರಿಂದ ಪಾಸ್ ತರಬೇಕಂತೆ…!

    ಇಲ್ಲಿಯ ರೈತ ಸಂಪರ್ಕ ಕೇಂದ್ರದಲ್ಲಿ ತಾಪಂ, ಜಿಪಂ ಸದಸ್ಯರಿಂದ ಹಾಗೂ ಶಾಸಕರಿಂದ ಪಾಸ್ ತಂದವರಿಗೆ ಮಾತ್ರ ತಾಡಪತ್ರಿ ವಿತರಣೆ ಮಾಡುತ್ತಿರುವುದು ಇತರ ರೈತರ ಆಕ್ರೋಶಕ್ಕೆ ಕಾರಣವಾಗಿದೆ.

    ನಿಯಮಾನುಸಾರ ಜಮೀನಿನ ಉತಾರ ಹಾಗೂ ಆಧಾರ್ ಕಾರ್ಡ್ ತೆಗೆದುಕೊಂಡು ಬರುವ ಎಸ್​ಸಿ, ಎಸ್​ಟಿ ರೈತರಿಗೆ 400 ರೂ.ಗೆ ಹಾಗೂ ಸಾಮಾನ್ಯ ವರ್ಗದವರಿಗೆ 1200 ರೂ. ತಾಡಪತ್ರಿ ವಿತರಿಸಬೇಕು. ಆದರೆ, ರೈತ ಸಂಪರ್ಕ ಕೇಂದ್ರದ ಸಿಬ್ಬಂದಿ ಜನಪ್ರತಿನಿಧಿಗಳಿಂದ ಪಾಸ್ ತಂದವರಿಗೆ ಮಾತ್ರ ನೀಡುತ್ತಿರುವುದು ರೈತರ ಕೆಂಗಣ್ಣಿಗೆ ಗುರಿಯಾಗಿದೆ.

    ತಾಲೂಕಿಗೆ ಪ್ರತಿ ವರ್ಷ 5 ಸಾವಿರಕ್ಕೂ ಅಧಿಕ ತಾಡಪತ್ರಿ ಬೇಡಿಕೆ ಇರುತ್ತದೆ. ಸರ್ಕಾರದಿಂದ ಈ ಬಾರಿ ಈವರೆಗೆ 1043 ತಾಡಪತ್ರಿ ಮಾತ್ರ ಸರಬರಾಜಾಗಿದೆ. ಆದ್ದರಿಂದ ತಾಪಂ, ಜಿಪಂ ಸದಸ್ಯರಿಗೆ ಈ ಬಗ್ಗೆ ಮಾಹಿತಿ ನೀಡಿ, ಅವರು ಯಾರಿಗೆ ಪಾಸ್ ಕೊಟ್ಟು ಕಳುಹಿಸುತ್ತಾರೋ ಅವರಿಗೆ ಮಾತ್ರ ನಾವು ತಾಡಪತ್ರೆ ನೀಡುತ್ತೇವೆ ಎಂದು ರೈತ ಸಂಪರ್ಕ ಕೇಂದ್ರದ ಸಿಬ್ಬಂದಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಜನಪ್ರತಿನಿಧಿಗಳು ತಮ್ಮ ಕ್ಷೇತ್ರದಲ್ಲಿ ಬೇಕಾದವರಿಗೆ ಮಾತ್ರ ಪಾಸ್ ಕೊಟ್ಟು ಕಳುಹಿಸುತ್ತಾರೆ. ಇತರ ರೈತರು ಏನು ಮಾಡಬೇಕು. ಪ್ರತಿ ವರ್ಷ ಇದೇ ರೀತಿ ಆಗುತ್ತಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಅರ್ಹ ರೈತರಿಗೆ ತಾಡಪತ್ರಿ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

    ಸರ್ಕಾರದ ಸಬ್ಸಿಡಿ ದರದಲ್ಲಿ ತಾಡಪತ್ರಿ ಕೇಳಲು ಬಂದರೆ ಶಾಸಕರಿಂದ ಅಥವಾ ತಾಪಂ, ಜಿಪಂ ಸದಸ್ಯರಿಂದ ಪಾಸ್ ತರಲು ಹೇಳುತ್ತಿದ್ದಾರೆ. 4 ವರ್ಷದಿಂದ ಇದೇ ರೀತಿ ಆಗುತ್ತಿದೆ. ಜನಪ್ರತಿನಿಧಿಗಳು ಅವರಿಗೆ ಬೇಕಾದವರಿಗೆ ಪಾಸ್ ಕೊಡುತ್ತಾರೆ. ನಮ್ಮಂಥವರು ಏನು ಮಾಡಬೇಕು. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು.
    | ಪ್ರಕಾಶ ಹೊನ್ನಳ್ಳಿ, ತಾಡಪತ್ರಿ ವಂಚಿತ ರೈತ


    ಸರ್ಕಾರದಿಂದ ತಾಡಪತ್ರಿ ಕಡಿಮೆ ಬಂದಿರುವ ಕಾರಣ ವಿತರಣೆಯಲ್ಲಿ ಸಮಸ್ಯೆ ಆಗಿದೆ. ಆದ್ದರಿಂದ ತಾಪಂ, ಜಿಪಂ ಹಾಗೂ ಶಾಸಕರು ಸೂಚಿಸುವ ರೈತರಿಗೆ ವಿತರಣೆ ಮಾಡಿದ್ದೇವೆ. ಎಲ್ಲ ರೈತರಿಗೆ ತಲುಪಿಸುವ ಹಿನ್ನೆಲೆಯಲ್ಲಿ ಹೆಚ್ಚಿನ ತಾಡಪತ್ರಿ ತರಿಸಲು ಶಾಸಕರಿಗೆ ಮನವಿ ಮಾಡಿದ್ದೇವೆ. ಬಂದ ಕೂಡಲೆ ಎಲ್ಲ ರೈತರಿಗೆ ನೀಡಲಾಗುವುದು.
    | ಎಂ.ಬಿ. ಗೌಡಪ್ಪಳವರ, ಸಹಾಯಕ ಕೃಷಿ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts