More

    ಪಾಲಕರ ಆರೈಕೆ ಮಕ್ಕಳ ಕರ್ತವ್ಯ

    ಚಿತ್ರದುರ್ಗ: ನಮಗೆ ಜನ್ಮ ನೀಡಿ, ದೊಡ್ಡವನ್ನಾಗಿಸಿದ ಪಾಲಕರೇ ನಿಜವಾದ ಗುರುಗಳಾಗಿದ್ದು, ವೃದ್ಧಾಪ್ಯದಲ್ಲಿ ಅವರ ಆರೈಕೆ ನಮ್ಮ ಕರ್ತವ್ಯ ಆಗಿರುತ್ತದೆ ಎಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಹೇಳಿದರು.
    ನಗರದ ಕಬೀನಾರಾನಂದಾಶ್ರಮದಲ್ಲಿ 94ನೇ ಮಹಾಶಿವರಾತ್ರಿ ಮಹೋತ್ಸವಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿ, ಪ್ರೀತಿ-ವಾತ್ಸಲ್ಯದಿಂದ ಬೆಳೆಸುವ, ಬದುಕನ್ನು ಕಟ್ಟಿಕೊಳ್ಳಲು ನಮಗೆ ನೆರವಾಗಿರುವ ಪಾಲಕರನ್ನು ಉತ್ತಮ ರೀತಿಯಿಂದ ನೋಡಿಕೊಳ್ಳುವುದು ಮಕ್ಕಳ ಆದ್ಯ ಕರ್ತವ್ಯವಾಗಿದೆ ಎಂದರು.
    ಶ್ರೀ ಶಿವಲಿಂಗಾನಂದ ಸ್ವಾಮೀಜಿ ಅವರು, 1972ರಲ್ಲಿ ಪೀಠಾಧ್ಯಕ್ಷರಾದ ಬಳಿಕ ಶ್ರೀಮಠವನ್ನು ಸಾಕಷ್ಟು ಅಭಿವೃದ್ಧಿ ಪಡಿಸಿದ್ದಾರೆ. ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಅನಾಥಾಶ್ರಮ, ವೃದ್ಧಾಶ್ರಮ, ಗೋಶಾಲೆಗಳನ್ನು ಪ್ರಾರಂಭಿಸಿದ್ದಾರೆ. ಜಾತಿ, ಧರ್ಮವೆನ್ನದೆ ಶ್ರೀಮಠವನ್ನು ಜಾತ್ಯತೀತವಾಗಿ ಮುನ್ನಡೆಸಿಕೊಂಡು ಬರುತ್ತಿರುವ ಶ್ರೀಗಳ ಸೇವೆ ಅನನ್ಯವಾಗಿದೆ ಎಂದು ಹೇಳಿದರು.
    ಹುಬ್ಬಳ್ಳಿ ಜಡೆ ಸಿದ್ಧೇಶ್ವರ ಮಠದ ಶ್ರೀ ರಾಮಾನಂದ ಭಾರತಿ ಸ್ವಾಮೀಜಿ ಮಾತನಾಡಿ, ಗುರು ಮತ್ತು ಭಗವಂತನ ನಡುವೆ ವ್ಯತ್ಯಾಸಗಳಿವೆ. ಗುರು-ಭಗವಂತ, ಇವರಿಬ್ಬರಲ್ಲಿ ಯಾರು ಶ್ರೇಷ್ಠ ಎಂದರೆ ಗುರುವೇ ಶ್ರೇಷ್ಠ ಎಂದು ಹೇಳಬೇಕಾಗಿದೆ ಎಂದರು.
    ಇದಕ್ಕೆ ಕಾರಣ ಗುರು ಅಜ್ಞಾನವೆಂಬ ಕತ್ತಲನ್ನು ಹೋಗಲಾಡಿಸಿ ಜ್ಯೋತಿ ಎಂಬ ಜ್ಞಾನವನ್ನು ಬೆಳಗುತ್ತಾನೆ. ನಮ್ಮಲ್ಲಿರುವ ಅಜ್ಞಾನವನ್ನು ಹೋಗಲಾಡಿಸಲು ಭಗವಂತನಿಂದಲೂ ಸಾಧ್ಯವಿಲ್ಲ. ಗುರುವಿಲ್ಲದ ವಿದ್ಯೆ, ರಾಮನಿಲ್ಲದ ಅಯೋಧ್ಯೆಯಂತೆ ಎಂದು ಹೇಳಿದರು.
    ಬಾಗಲಕೋಟೆ ಅರಿಕೆರೆ ಶ್ರೀ ಕೌದೀಶ್ವರ ಮಠದ ಶ್ರೀ ಮಾಧವಾನಂದ ಸ್ವಾಮೀಜಿ ಮಾತನಾಡಿ, ಗುರುವಿಲ್ಲದೆ ನಮಗೆ ಜ್ಞಾನ ಸಿಗದು. ಒಳ್ಳೆಯ ಜ್ಞಾನಕ್ಕೆ, ಮೋಕ್ಷದ ಹಾದಿಗೆ ಗುರುವಿನ ಮಾರ್ಗದರ್ಶನ ಅಗತ್ಯ. ಮನುಷ್ಯನ ಜನ್ಮ ಅತ್ಯಂತ ಶ್ರೇಷ್ಠ. ಈ ಜನ್ಮವನ್ನು ಪಾವನ ಮಾಡಿಕೊಳ್ಳಲು, ಮುಕ್ತಿ ಪಡೆಯಲು ಗುರುವಿನ ಕೃಪೆ ಬೇಕಾಗುತ್ತದೆ ಎಂದರು.
    ಹುಬ್ಬಳ್ಳಿ ವಿಜಯಪುರ ಶಾಂತಾಶ್ರಮ ಷಣ್ಮುಖಾರೂಢಮಠದ ಶ್ರೀ ಅಭಿನವ ಸಿದ್ಧಾರೂಢ ಸ್ವಾಮೀಜಿ ಮಾತನಾಡಿ, ಲೌಕಿಕ ಬದುಕಿಗೆ ತಾಯಿಗಿಂತ ಮಿಗಿಲಾದ ಗುರುವಿಲ್ಲ. ಅಲೌಕಿಕ ಬದುಕಿಗೆ ಗುರುವೇ ದೊಡ್ಡವನು. ತಾಯಿ ಮಗುವನ್ನು ಪಾಲಿಸುವಂತೆ, ಗುರು ಅಲೌಕಿಕ ಬದುಕಿನಲ್ಲಿ ನಮಗೆ ಆತ್ಮ ಸಾಕ್ಷಾತ್ಕಾರದ ಮಾರ್ಗವನ್ನು ಕರುಣಿಸುತ್ತಾನೆ ಎಂದು ಹೇಳಿದರು.
    ಸಾನ್ನಿಧ್ಯ ವಹಿಸಿದ್ದ ಶ್ರೀ ಶಿವಲಿಂಗಾನಂದ ಸ್ವಾಮೀಜಿ ಆರ್ಶೀವಚನ ನೀಡಿದರು. ಮರ್ಚೆಂಟ್ ಬ್ಯಾಂಕ್ ಅಧ್ಯಕ್ಷ ಲಕ್ಷ್ಮೀಕಾಂತ್‌ರೆಡ್ಡಿ, ಉತ್ಸವ ಸಮಿತಿ ಅಧ್ಯಕ್ಷ ಕೆ.ಸಿ.ನಾಗರಾಜ್, ಉಪಾಧ್ಯಕ್ಷ ಪರಮೇಶ್, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನಯ್‌ತಿಮ್ಮಾಪೂರ, ಜಿಪಂ ಮಾಜಿ ಉಪಾಧ್ಯಕ್ಷ ದ್ಯಾಮೇಗೌಡರು ಇದ್ದರು.
    ವಿ.ಎಲ್.ಪ್ರಶಾಂತ್ ಸ್ವಾಗತಿಸಿದರು. ಸುಬ್ರಾಯ ಭಟ್ ವೇದಘೋಷ, ನಂದಿನಿ ಶಿವಪ್ರಕಾಶ್ ತಂಡದ ಕಲಾವಿದರು ನೃತ್ಯವೈವಿಧ್ಯ ಹಾಗೂ ವೆಂಕಟಾದ್ರಿ ಭಜನಾ ಮಂಡಳಿ ವರಲಕ್ಷ್ಮೀ ತಂಡದವರು ಭಜನಾ ಕಾರ‌್ಯಕ್ರಮವನ್ನು ನಡೆಸಿಕೊಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts