More

    ಪಾರಂಪರಿಕ ದಸರಾ ಆಚರಣೆ ದುರ್ಗಾಂಬಿಕಾ ಟ್ರಸ್ಟ್ ಅಸ್ತು

    ದಾವಣಗೆರೆ: ಕೋವಿಡ್ ಪೂರ್ವದಲ್ಲಿದ್ದಂತೆ ಈ ಬಾರಿ ಅದ್ದೂರಿಯಾಗಿ ಪಾರಂಪರಿಕ ದಸರಾ ಆಚರಿಸಲು ನಗರದೇವತೆ ಶ್ರೀ ದುರ್ಗಾಂಬಿಕಾದೇವಿ ದೇವಸ್ಥಾನ ಟ್ರಸ್ಟ್ ನಿರ್ಧರಿಸಿದೆ.
    ಟ್ರಸ್ಟ್‌ನ ಗೌರವಾಧ್ಯಕ್ಷ, ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆಯಲ್ಲಿ ದೇವಸ್ಥಾನದ ಪ್ರಸಾದ ನಿಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.
    ಸೆ.26ರಂದು ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಿ, ಅ.6ರವರೆಗೆ ನಿತ್ಯವೂ ದೇವಿಗೆ ಅಭಿಷೇಕ, ಪೂಜೆ, ವಿವಿಧ ಅಲಂಕಾರ ಕೈಗೊಳ್ಳಲು ಹಾಗೂ ಅ .6ರಂದು ದೇವಸ್ಥಾನ ಆವರಣದಲ್ಲಿ ಸಾಮೂಹಿಕ ವಿವಾಹ ಆಯೋಜಿಸಲು ಸಭೆ ತೀರ್ಮಾನಿಸಿತು.
    ಪಂಚಾಮೃತ ಅಭಿಷೇಕಕ್ಕೆ 200 ರೂ., ಕುಂಭಾಭಿಷೇಕಕ್ಕೆ 100 ರೂ, ಕಳಸ ಪೂಜೆಗೆ 50 ರೂ. ದರ ನಿಗದಿಪಡಿಸಲಾಯಿತು. ಶ್ರೀದೇವಿಯ ತುರ್ತು ದರ್ಶನಕ್ಕೆ ಹಿಂದಿನ ಬಾರಿಯಂತೆ 310 ರೂ. ದರ ಉಳಿಸಿಕೊಳ್ಳುವ ಪ್ರಸ್ತಾಪಕ್ಕೆ ಸಭೆ ಸಮ್ಮತಿಸಿತು. ಇದಕ್ಕೆ ಅನುಮೋದಿಸಿದ ಗೌರವಾಧ್ಯಕ್ಷರು ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಸೂಚಿಸಿದರು.
    ದೇವಸ್ಥಾನದ ಕಳೆದ ವರ್ಷದ ಲೆಕ್ಕ ಪತ್ರ ಹಾಗೂ ಮಳಿಗೆಗಳ ಕಾಮಗಾರಿ ವಿವರವನ್ನು ಮಂಡಿಸಲಾಯಿತು. ಕಳೆದ ವರ್ಷದ ದಸರೆ ಹಾಗೂ ಕಾರ್ತಿಕೋತ್ಸವ ಸೇರಿ ಒಟ್ಟು 2.54 ಕೋಟಿ ರೂ. ವೆಚ್ಚವನ್ನು ಸಭೆ ಅನುಮೋದಿಸಿತು.
    ನಗರದೇವತೆ ದೇವಸ್ಥಾನಕ್ಕೆ ರಾಜಗೋಪುರ ನಿರ್ಮಿಸಬೇಕು, ಹೊಸ ಕಾರ್ಯದರ್ಶಿ ನೇಮಿಸಬೇಕೆಂಬ ಸಲಹೆ ಕೇಳಿಬಂದಿತು. ದುರ್ಗಾಂಬಿಕಾ ಜಾತ್ರೆ ವೇಳೆ ಬಣ್ಣ ಬಳಿದಿದ್ದಕ್ಕೆ ಪಾಲಿಕೆಯಿಂದ ಹಣ ಪಾವತಿಯಾಗಿಲ್ಲ. ಹಾಗಾಗಿ ಧರ್ಮದರ್ಶಿ ಸಮಿತಿಯಿಂದಲೇ ಭರಿಸಬೇಕೆಂಬ ಮಾತು ಕೇಳಿಬಂದಿತು. ಆಯುಕ್ತರೊಂದಿಗೆ ಮಾತನಾಡಿ ಬಗೆಹರಿಸುವುದಾಗಿ ಎಸ್ಸೆಸ್ ತಿಳಿಸಿದರು.
    ದೇವಸ್ಥಾನ ಸಮಿತಿಯಿಂದ ಶಿವಾಲಿ ಚಿತ್ರಮಂದಿರ ರಸ್ತೆ ಹಾಗೂ ಕೊಂಡಜ್ಜಿ ರಸ್ತೆಯಲ್ಲಿ ನಿರ್ಮಿಸಲಾದ 32 ಮಳಿಗೆ ಕಾಮಗಾರಿ ಕಳಪೆಯಾಗಿದ್ದರೂ ಗುತ್ತಿಗೆದಾರ ಹಾಗೂ ಇಂಜಿನಿಯರ್ ವಿರುದ್ಧ ಶಿಸ್ತುಕ್ರಮ ಆಗದಿರುವ ವಿಚಾರ ಮುನ್ನೆಲೆಗೆ ಬಂದಿತು.
    ಕರಿಗಾರ್ ಬಸಪ್ಪ, ಯಶವಂತರಾವ್ ಜಾಧವ್, ರಾಜನಹಳ್ಳಿ ಶಿವಕುಮಾರ್ ವಿಷಯ ಪ್ರಸ್ತಾಪಿಸಿದರು. ವಿಧಾನಸಭೆ ಅಧಿವೇಶನ ಮುಗಿದ ಬಳಿಕ ಈ ವಿಚಾರದ ಬಗ್ಗೆ ಮರುಪರಿಶೀಲಿಸಿ ಅಂತಿಮ ನಿರ್ಧಾರ ಕೈಗೊಳ್ಳೋಣ ಎಂದು ಶಾಮನೂರು ಶಿವಶಂಕರಪ್ಪ ಸ್ಪಷ್ಟಪಡಿಸಿದರು.
    ಸಭೆಯಲ್ಲಿ ಸದಸ್ಯರಾದ ಯಜಮಾನ್ ಮೋತಿ ವೀರಣ್ಣ, ಅಥಣಿ ವೀರಣ್ಣ, ಗೌಡ್ರ ಚನ್ನಬಸಪ್ಪ, ಬಿ.ಎಚ್.ವೀರಭದ್ರಪ್ಪ, ಜೆ.ಕೆ. ಕೊಟ್ರಬಸಪ್ಪ, ಎಚ್.ಬಿ.ಗೋಣೆಪ್ಪ, ಉಮೇಶ್ ಸಾಳಂಕಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts