More

    ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ, ನೀತಿ ಸಂಹಿತೆ ಜಾರಿ

    ಹಾವೇರಿ: ಪಶ್ಚಿಮ ಪದವೀಧರ ಕ್ಷೇತ್ರದಿಂದ ವಿಧಾನಪರಿಷತ್​ಗೆ ಘೊಷಣೆಯಾಗಿರುವ ಚುನಾವಣೆಗೆ ಇಂದಿನಿಂದ ಚುನಾವಣಾ ಅಧಿಸೂಚನೆ ಜಾರಿಗೊಂಡಿದೆ. ಜಿಲ್ಲೆಯಾದ್ಯಂತ ಪಾರದರ್ಶಕ ಚುನಾವಣೆಗೆ ಜಿಲ್ಲಾಡಳಿತ ಎಲ್ಲ ಸಿದ್ಧತೆಯನ್ನು ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರ ತಿಳಿಸಿದರು.

    ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾವೇರಿ, ಗದಗ, ಉತ್ತರಕನ್ನಡ ಹಾಗೂ ಧಾರವಾಡ ಜಿಲ್ಲೆಗಳನ್ನು ಒಳಗೊಂಡಿರುವ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣಾ ಅಧಿಕಾರಿಯಾಗಿ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರು, ಸಹಾಯಕ ಚುನಾವಣಾಧಿಕಾರಿಗಳಾಗಿ ನಾಲ್ಕು ಜಿಲ್ಲೆಗೆಳ ಜಿಲ್ಲಾಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ. ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲು ಸ್ಥಳ ನಿಗಧಿಪಡಿಸಲಾಗಿದೆ. ಧಾರವಾಡದಲ್ಲೇ ಮತ ಎಣಿಕೆಯೂ ಜರುಗಲಿದೆ ಎಂದರು.

    ಅ. 1ರಂದು ಅಧಿಸೂಚನೆ ಹೊರಡಿಸಲಾಗಿದ್ದು, ಇಂದಿನಿಂದಲೇ ನಾಮಪತ್ರ ಸಲ್ಲಿಕೆ ಆರಂಭಗೊಂಡಿದೆ. ನಾಮಪತ್ರ ಸಲ್ಲಿಕೆಗೆ 8-10-2020ಕೊನೆಯ ದಿನ. 9-10-2020ರಂದು ನಾಮಪತ್ರಗಳ ಪರಿಶೀಲನೆ, 12-10-2020ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. 28-10-2020ರಂದು ಮತದಾನ ನಡೆಯಲಿದ್ದು, 2-11-2020ರಂದು ಮತ ಎಣಿಕೆ ಕಾರ್ಯ ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯಲಿದೆ. ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಕೇವಲ ಎರಡು ಜನರಿಗೆ ಹಾಗೂ ಎರಡು ವಾಹನಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಪ್ರಚಾರ ಕಾರ್ಯಕ್ಕಾಗಿ ವಾಹನಗಳ ಮತ್ತು ಸಭೆ-ಸಮಾರಂಭಗಳ ಅನುಮತಿಯನ್ನು ಜಿಲ್ಲಾಧಿಕಾರಿಗಳಿಂದ ಪಡೆಯಬಹುದು ಎಂದರು.

    ಜಿಲ್ಲೆಯಲ್ಲಿ ಮತದಾನಕ್ಕಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. 37ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ತಾಲೂಕಾ ಮತ್ತು ಹೋಬಳಿ ಕೇಂದ್ರದಲ್ಲಿ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಮತಗಟ್ಟೆಗಳಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಮತಗಟ್ಟೆ ಅಧಿಕಾರಿ, ಸಹಾಯಕ ಮತಗಟ್ಟೆ ಅಧಿಕಾರಿ ಹಾಗೂ ಸಿಬ್ಬಂದಿ ಸೇರಿ 209 ಜನರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಎಸ್​ಒಪಿ ಮಾರ್ಗಸೂಚಿಯಂತೆ ಪ್ರತಿ ಮತಗಟ್ಟೆಗೂ ಸ್ಯಾನಿಟೈಸರ್, ಮಾಸ್ಕ್ ಹಾಗೂ ಪಲ್ಸ್ ಆಕ್ಸಿಮೀಟರ್​ಗಳನ್ನು ಒದಗಿಸಲಾಗುವುದು. ಈ ಕಾರ್ಯಕ್ಕೆ ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ನೋಡಲ್ ಅಧಿಕಾರಿಗಳೆಂದು ನೇಮಿಸಲಾಗಿದೆ. ಪ್ರತಿ ತಾಲೂಕಿಗೆ ಮಾದರಿ ನೀತಿ ಸಂಹಿತೆ ಅನುಷ್ಟಾನ ತಂಡಗಳನ್ನು ರಚಿಸಲಾಗಿದೆ. ಈಗಾಗಲೇ ಎಲ್ಲ ಪ್ರವಾಸಿಮಂದಿರಗಳನ್ನು ವಶಕ್ಕೆ ಪಡೆಯಲಾಗಿದೆ. ಬಂಟಿಂಗ್ ಮತ್ತು ಬ್ಯಾನರ್​ಗಳನ್ನು ತೆರವುಗೊಳಿಸಲು ಕ್ರಮವಹಿಸಲಾಗಿದೆ. ನಿಗಮ ಮಂಡಳಿಗಳ ಅಧ್ಯಕ್ಷರಿಗೆ ನೀಡಲಾಗಿದ್ದ ವಾಹನಗಳನ್ನು ವಶಕ್ಕೆ ಪಡೆಯಲು ಸೂಚಿಸಲಾಗಿದೆ ಎಂದರು.

    ಕೋವಿಡ್ ಸೋಂಕಿತರಿಗೆ, ದಿವ್ಯಾಂಗ ಹಾಗೂ 80ವರ್ಷಕ್ಕಿಂತ ಮೇಲ್ಪಟ್ಟ ಮತದಾರರಿಗೆ ಅಂಚೆ ಮೂಲಕ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ. ಈ ಅವಕಾಶ ಪಡೆಯಲು ಚುನಾವಣಾ ಅಧಿಸೂಚನೆ ಪ್ರಕಟವಾದ 5ದಿನಗಳೊಳಗಾಗಿ ತಮ್ಮ ವ್ಯಾಪ್ತಿಯ ಸಹಾಯಕ ಚುನಾವಣಾಧಿಕಾರಿಗಳಿಗೆ(ಜಿಲ್ಲಾಧಿಕಾರಿಗಳಿಗೆ) ನಮೂನೆ 12-ಡಿ ಮೂಲಕ ಕೋರಿಕೆ ಸಲ್ಲಿಸಬೇಕು. ಈ ಕೋರಿಕೆಯ ಜೊತೆಗೆ ಸಕ್ಷಮ ಪ್ರಾಧಿಕಾರದಿಂದ ಪಡೆದ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಲಗತ್ತಿಸಬೇಕು ಎಂದರು.

    ಜಿಲ್ಲೆಯಲ್ಲಿ 16,052 ಪುರುಷ, 7,218 ಮಹಿಳಾ ಹಾಗೂ 4 ಇತರೆ ಮತದಾರರು ಸೇರಿ 23,274 ಮತದಾರರಿದ್ದಾರೆ. ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್ ಕಾರ್ಯವು ಜಿಲ್ಲೆಯ ಎಲ್ಲ ತಹಸೀಲ್ದಾರ್​ಗಳ ಕಚೇರಿಯಲ್ಲಿ ನಡೆಯಲಿದೆ. ಪ್ರತಿ ಮತದಾರರಿಗೆ ಮಾಸ್ಕ್ ಹಾಗೂ ಪ್ರತ್ಯೇಕ ನೇರಳೆ ಬಣ್ಣದ ಸ್ಕೆಚ್​ಪೆನ್ ಒದಗಿಸಲಾಗುವುದು. ಚುನಾವಣಾ ಸಿಬ್ಬಂದಿಗೆ ಎರಡು ಹಂತದಲ್ಲಿ ತರಬೇತಿ ನೀಡಲಾಗುವುದು. ಮೊದಲ ಹಂತದಲ್ಲಿ ಕೇವಲ ಪಿಆರ್​ಒ ಹಾಗೂ ಎಪಿಆರ್​ಒಗಳಿಗೆ ಮತ್ತು 2ನೇ ಹಂತದಲ್ಲಿ ತಂಡದ ಎಲ್ಲ ಸದಸ್ಯರಿಗೆ ನೀಡಲಾಗುವುದು. ಈ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲ ತಾಲೂಕು ಕೇಂದ್ರಗಳಲ್ಲಿ ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗಿದೆ. ನೀತಿ ಸಂಹಿತೆ ತಂಡಗಳನ್ನು ರಚಿಸಿ ನಿಗಾ ವಹಿಸಲಾಗಿದೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ 08375-249102 ಕಂಟ್ರೋಲ್ ರೂಂ ಸ್ಥಾಪಿಸಲಾಗಿದೆ ಎಂದರು.

    ಎಸ್​ಪಿ ಕೆ.ಜಿ. ದೇವರಾಜ್ ಮಾತನಾಡಿ, ಚುನಾವಣಾ ಅಕ್ರಮಗಳ ತಡೆಗೆ ಸೂಕ್ತ ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಮತಗಟ್ಟೆಗಳಿಗೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗುತ್ತಿದೆ. ಚೆಕ್​ಪೋಸ್ಟ್ ವ್ಯವಸ್ಥೆ ಇರುವುದಿಲ್ಲ ಎಂದರು. ಜಿಪಂ ಸಿಇಒ ರಮೇಶ ದೇಸಾಯಿ, ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ, ಚುನಾವಣಾ ತಹಸೀಲ್ದಾರ್ ಪ್ರಶಾಂತ ನಾಲವಾರ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts