More

    ಪರೀಕ್ಷಾರ್ಥಿಗಳಿಗೆ ಮಾಸ್ಕ್ ತಯಾರಿಕೆ

    ಚಿಕ್ಕಬಳ್ಳಾಪುರ : ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಪೂರೈಸುವ ಮಾಸ್ಕ್‌ಗಳ ತಯಾರಿಕೆಯಲ್ಲಿ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ತೊಡಗಿಕೊಂಡಿದ್ದಾರೆ.

    ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿದ್ದ ಪರೀಕ್ಷೆ ಜೂ.25ರಿಂದ ಪ್ರಾರಂಭವಾಗಿ ಜು.4ರವರೆಗೂ ನಡೆಯಲಿದೆ. ಇದೇ ವೇಳೆ ಪರೀಕ್ಷಾರ್ಥಿಗಳಿಗೆ ಮಾಸ್ಕ್ ಪೂರೈಸಬೇಕೆಂಬ ಶಿಕ್ಷಣ ಇಲಾಖೆಯ ಮನವಿಗೆ ಸ್ಪಂದಿಸಿರುವ ಸ್ಕೌಟ್ಸ್ ಆ್ಯಂಡ್ ಗೈಡ್ಸ್, ಈಗಾಗಲೇ ರೇಂಜರ್ಸ್‌, ರೋವರ್ಸ್‌ (ವಿದ್ಯಾರ್ಥಿಗಳ) ಮೂಲಕ ತಯಾರಿಕೆಯಲ್ಲಿ ತೊಡಗಿದೆ.
    ಇಷ್ಟೇ ಅಲ್ಲದೆ ಸ್ಥಳೀಯ ಜನಪ್ರತಿನಿಧಿಗಳು ಮತ್ತು ದಾನಿಗಳಿಂದ ಉಚಿತ ಮಾಸ್ಕ್, ಶಿಕ್ಷಣ ಇಲಾಖೆಯಿಂದ ಸ್ಯಾನಿಟೈಜರ್ ಮತ್ತು ಡಿಜಿಟಲ್ ಥರ್ಮಲ್ ಸ್ಕ್ಯಾನರ್ ವ್ಯವಸ್ಥೆ ಒದಗಿಸಲಾಗುತ್ತಿದೆ.

    ಪ್ರಸಕ್ತ ಸಾಲಿನಲ್ಲಿ 7,949 ಬಾಲಕರು ಮತ್ತು 7,527 ಬಾಲಕಿಯರು ಸೇರಿ 15,476 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ ಸರ್ಕಾರಿ ಶಾಲೆ ವಿದ್ಯಾರ್ಥಿಗಳು 6,969 ಮಂದಿ, ಅನುದಾನಿತ ಶಾಲೆಯ 2,916, ಖಾಸಗಿ ಶಾಲೆ 5006, ವಸತಿ ಶಾಲೆಯ 585 ಮಂದಿ ಇದ್ದಾರೆ. ಇವರೆಲ್ಲರಿಗೂ ಮಾಸ್ಕ್ ಪೂರೈಸಬೇಕಾಗಿದೆ.

    ಕಾರ್ಯನಿರತ ವಿದ್ಯಾರ್ಥಿಗಳು : ಈಗಾಗಲೇ ಸ್ಕೌಟ್ಸ್ ಆ್ಯಂಡ್ ಗೈಡ್ಸ್‌ನ ವಿದ್ಯಾರ್ಥಿಗಳಿಗೆ ಕನಿಷ್ಠ 30 ಮಾಸ್ಕ್ ತಯಾರಿಸಲು ಗುರಿ ನಿಗದಿಪಡಿಸಲಾಗಿದೆ. ಇದಕ್ಕಿಂತಲೂ ಹೆಚ್ಚು ತಯಾರಿಸಿ ಕೊಡುವ ಮೂಲಕ ಅನೇಕರು ಉತ್ಸಾಹ ತೋರುತ್ತಿದ್ದಾರೆ. ಇದರ ಜತೆಗೆ ಸ್ಥಳೀಯ ಬಟ್ಟೆ ವ್ಯಾಪಾರಿಗಳು ಕರೊನಾ ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟ ಅನುಭವಿರುವುದರ ನಡುವೆಯೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮಾಸ್ಕ್ ತಯಾರಿಕೆಗೆ ಅಗತ್ಯವಿರುವ ಬಟ್ಟೆಯನ್ನು ಉಚಿತವಾಗಿ ನೀಡುತ್ತಿದ್ದಾರೆ, ಇದರ ಜತೆಗೆ ಸ್ಥಳೀಯ ಶಾಸಕರು, ವಿವಿಧ ಸಂಘ ಸಂಸ್ಥೆಗಳು ಮತ್ತು ದಾನಿಗಳು ಸಹ ಕೈ ಜೋಡಿಸಿದ್ದಾರೆ.

    ಮುಂಜಾಗ್ರತೆಯ ಪರೀಕ್ಷೆ : ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳ ಅನುಷ್ಠಾನದ ಮೂಲಕ ನಡೆಸುವುದಾಗಿ ಶಿಕ್ಷಣ ಇಲಾಖೆ ತಿಳಿಸಿದೆ. ಕಡ್ಡಾಯವಾಗಿ ಮಾಸ್ಕ್ ಧರಿಸುವಿಕೆ, ಸ್ಯಾನಿಟೈಜರ್ ಬಳಕೆ, ಸಾಮಾಜಿಕ ಅಂತರ ಕಾಪಾಡುವಿಕೆ ಮತ್ತು ಪರೀಕ್ಷಾ ಕೇಂದ್ರಗಳ ಸಂಖ್ಯೆ ಹೆಚ್ಚಳ, ಆಯಾ ಶಾಲೆಯಲ್ಲಿ ಪರೀಕ್ಷೆ ಬರೆಸುವ, ವಿದ್ಯಾರ್ಥಿಗಳಿಗೆ ಕೇಂದ್ರಗಳಿಗೆ ಯಾವುದೇ ಸಮಸ್ಯೆ ಇಲ್ಲದೇ ಬರಲು ಸೂಕ್ತ ವ್ಯವಸ್ಥೆಯ ಮೂಲಕ ಸುಗಮವಾಗಿ ಪರೀಕ್ಷೆ ನಡೆಸಲಾಗುತ್ತದೆ.

    ಆತಂಕ ಇದ್ದೇಇದೆ! : ಮಾರ್ಚ್‌ನಲ್ಲಿ ನಡೆಯಬೇಕಾಗಿದ್ದ ಪರೀಕ್ಷೆಯು ಲಾಕ್‌ಡೌನ್ ಹಿನ್ನೆಲೆಯಲ್ಲಿ ಜೂನ್ ಕೊನೇ ವಾರಕ್ಕೆ ಮುಂದೂಡಲ್ಪಟ್ಟಿದೆ. ಇದಕ್ಕೂ ಮೊದಲು ಪರೀಕ್ಷೆ ನಡೆಸಬೇಕೇ? ಇಲ್ಲವೇ ಎಲ್ಲರನ್ನೂ ಒಂದು ಮಾನದಂಡದ ಅನುಸಾರ ಉತ್ತೀರ್ಣಗೊಳಿಸಬೇಕೋ? ಇನ್ನು ಪರೀಕ್ಷೆ ಮತ್ತಷ್ಟು ವಿಳಂಬವಾಗಿ ನಡೆಸಿದರೆ ಒಳಿತೇ ಎನ್ನುವುದು ಚರ್ಚೆಗ್ರಾಸವಾಗಿದ್ದು ಬಹುತೇಕರಿಂದ ಪರೀಕ್ಷೆ ನಡೆಸಲು ಅಭಿಪ್ರಾಯ ವ್ಯಕ್ತವಾಗಿತ್ತು, ಪರೀಕ್ಷೆ ಬರೆಯುತ್ತಿರುವ ಸಂದರ್ಭದಲ್ಲಿ ಕರೊನಾ ಸೋಂಕು ಹರಡಿದರೆ ಏನು ಗತಿ ಎಂಬ ಆತಂಕವೂ ವ್ಯಕ್ತವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts