More

    ಪರಿಹಾರ ವಿತರಣೆಯಲ್ಲಿ ಗೋಲ್‍ಮಾಲ್

    ಶಿವಪ್ರಭು ಈಸರಗೊಂಡ ಉಪ್ಪಿನಬೆಟಗೇರಿ

    ಕಳೆದ ಆಗಸ್ಟ್​ನಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಧಾರವಾಡ ತಾಲೂಕಿನಲ್ಲಿ ಹಲವು ಮನೆಗಳು ಕುಸಿದಿದ್ದು, ಕುಟುಂಬಗಳು ಅಕ್ಷರಶಃ ನಲುಗಿವೆ. ಇಂತಹ ಅತಿವೃಷ್ಟಿ ಸಂತ್ರಸ್ತರಿಗೆ ಪರಿಹಾರ ವಿತರಿಸುವ ಸಂದರ್ಭದಲ್ಲಿ ಭಾರಿ ಗೋಲ್‍ಮಾಲ್ ನಡೆದಿದೆ ಎನ್ನುವ ಆರೋಪಗಳು ಕೇಳಿಬಂದಿವೆ.

    ಭಾರಿ ಮಳೆಯಿಂದ ಉಪ್ಪಿನಬೆಟಗೇರಿ, ಕರಡಿಗುಡ್ಡ, ಹನುಮನಕೊಪ್ಪ, ಹನುಮನಾಳ, ಪುಡಕಲಕಟ್ಟಿ, ತಿಮ್ಮಾಪುರ, ಮರೇವಾಡ, ಯಾದವಾಡ, ಕಲ್ಲೇ, ಹಾರೋಬೆಳವಡಿ, ಕಬ್ಬೇನೂರ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಮನೆ ಕುಸಿದು ಜನ ತೊಂದರೆ ಅನುಭವಿಸಿದ್ದಾರೆ. ಸಂಪೂರ್ಣ ಮನೆ ಕಳೆದುಕೊಂಡವರನ್ನು ಎ ವರ್ಗ ಎಂದು ನಮೂದಿಸಿ 5 ಲಕ್ಷ ರೂ. ಪರಿಹಾರ, ಭಾಗಶಃ ಕುಸಿದ ಮನೆಗಳನ್ನು ಬಿ ವರ್ಗಕ್ಕೆ ಸೇರಿಸಿ ಒಂದು ಲಕ್ಷ ರೂ. ಹಾಗೂ ಅಲ್ಪ ಹಾನಿಯಾದ ಮನೆಗಳನ್ನು ಸಿ ವರ್ಗಕ್ಕೆ ಸೇರಿಸಿ 50 ಸಾವಿರ ರೂ. ಪರಿಹಾರ ನೀಡಲಾಗುತ್ತಿದೆ. ಆದರೆ, ಅಧಿಕಾರಿಗಳು ಭಾರಿ ಅಕ್ರಮವೆಸಗಿದ್ದು, ಸಂಪೂರ್ಣ ಕುಸಿದ ಮನೆಗಳನ್ನು ಸಿ ವರ್ಗದಲ್ಲಿ ಸೇರಿಸಿ, ಭಾಗಶಃ, ಅಲ್ಪ ಕುಸಿದ ಮನೆಗಳನ್ನು ಎ ವರ್ಗಕ್ಕೆ ಸೇರಿಸಿದ್ದಾರೆ ಎಂದು ಸಂತ್ರಸ್ತರು ದೂರಿದ್ದಾರೆ.

    ಡಿಸೆಂಬರ್ 19ರಂದು ಉಪ್ಪಿನಬೆಟಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಮನೆಗಳ ಪರಿಶೀಲನೆಗೆ ಬಂದಿದ್ದ ಅಧಿಕಾರಿಗಳನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದರು. ಗ್ರಾಮ ಲೆಕ್ಕಾಧಿಕಾರಿ ಹಣ ಪಡೆದು ತಮಗೆ ಬೇಕಾದವರಿಗೆ ಎ ಮತ್ತು ಬಿ ವರ್ಗ ನೀಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದರು.

    5 ಲಕ್ಷ ರೂ. ಪಡೆಯಬೇಕಾದರೆ ಸರ್ಕಾರ ನಿಗದಿಪಡಿಸಿದ ಐದು ಹಂತಗಳನ್ನು ಪೂರ್ಣಗೊಳಿಸಬೇಕು. ಪೂರ್ಣ ಪ್ರಮಾಣದ ಹಣ ಪಡೆಯಬೇಕೆಂದರೆ ಇಡೀ ಮನೆಯನ್ನೇ ನೆಲಸಮಗೊಳಿಸಿ, ಹೊಸದಾಗಿ ನಿರ್ವಿುಸಬೇಕು. ಇಲ್ಲವೆ ಸಿ ವರ್ಗದಲ್ಲಿ ನೀಡಲಾಗುವ 50 ಸಾವಿರ ರೂ. ಪರಿಹಾರ ಪಡೆದುಕೊಂಡು ಮನೆಗಳಲ್ಲಿ ಹಾಳಾದ ಗೋಡೆಗಳನ್ನು ದುರಸ್ತಿ ಮಾಡಿಕೊಳ್ಳಬೇಕು. ಈ ನಿಯಮದಿಂದ ಕಂಗಾಲಾಗಿರುವ ಬಿ ವರ್ಗದ ಸಂತ್ರಸ್ತರು ಸಿ ವರ್ಗದ ಪರಿಹಾರ ಪಡೆಯೋಣವೇ ಅಥವಾ ಪೂರ್ತಿ ಮನೆ ಬೀಳಿಸಿ ಐದು ಲಕ್ಷ ರೂ. ಪಡೆಯೋಣವೇ ಎಂಬ ಗೊಂದಲಕ್ಕೆ ಸಿಲುಕಿದ್ದಾರೆ. ಆದರೆ, ಸರ್ಕಾರದ ನಿಯಮದ ಪ್ರಕಾರ ನಿಗದಿತ ಐದು ಹಂತಗಳಲ್ಲಿ ನಿರ್ಮಾಣ ಮಾಡುವ ಮನೆಗಳ ಜಿಪಿಎಸ್ ಆಧಾರಿತ ಫೋಟೋಗಳನ್ನು ಅಪ್​ಲೋಡ್ ಮಾಡಿದ ನಂತರ 5 ಲಕ್ಷ ರೂ. ಪರಿಹಾರ ಕೈಸೇರಲಿದೆ ಎಂದು ಅಧಿಕಾರಿಗಳು ಈಗಾಗಲೆ ತಿಳಿಸಿದ್ದಾರೆ.

    ಪ್ರವಾಹ ಉಂಟಾದಾಗ ಸ್ಥಳೀಯ ಶಾಸಕರು ಮತ್ತು ಅಧಿಕಾರಿಗಳು ಕೆಲವು ಮನೆಗಳಿಗೆ ಭೇಟಿ ನೀಡಿ ಸಾಂಕೇತಿಕವಾಗಿ ಕೆಲವರಿಗೆ ಪರಿಹಾರದ ಚೆಕ್ ನೀಡಿದ್ದರು. ನಂತರ ಅಧಿಕಾರಿಗಳು ಸಮೀಕ್ಷೆ ನಡೆಸಿದ್ದು, ಈಗ ಬಂದಿರುವ ಪರಿಹಾರದಲ್ಲಿ ಭಾರಿ ವ್ಯತ್ಯಾಸವಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದು ಪರಿಹಾರ ಕಾರ್ಯ ಕೈಗೊಂಡಿದ್ದಾರೆ ಎಂಬ ದೂರುಗಳು ಕೇಳಿಬಂದಿವೆ.

    ಸಮಸ್ಯೆಗೆ ಸ್ಪಂದಿಸಿಲ್ಲ: ಡಿ. 26ರಂದು ಉಪ್ಪಿನಬೆಟಗೇರಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಎದುರು ಸಂತ್ರಸ್ತರು ಅಳಲು ತೋಡಿಕೊಂಡರೂ ಅವರು ಸ್ಪಂದಿಸಿಲ್ಲ. ಅಧಿಕಾರಿಗಳು ಹೇಳಿದ ಮನೆಗಳಿಗೆ ಮಾತ್ರ ಭೇಟಿ ನೀಡಿ ಪರಿಶೀಲಿಸಿದರು. ಸರ್ಕಾರ ಬಿಡುಗಡೆ ಮಾಡಿದ ಹಣದಲ್ಲಿ ಫಲಾನುಭವಿಗಳು ಮನೆ ನಿರ್ವಿುಸಿಕೊಳ್ಳುತ್ತಿರುವ ಬಗ್ಗೆ ಪರಿಶೀಲಿಸಲು ಬಂದಿರುವುದಾಗಿ ಹೇಳಿದರೆ ಹೊರತು, ಸಂತ್ರಸ್ತರು ಹೇಳಿದ ಮನೆಗಳಿಗೆ ಭೇಟಿ ನೀಡದೆ ಮರಳಿದರು.

    ಗ್ರಾಮದಲ್ಲಿ ಮಳೆಯಿಂದ ಬಿದ್ದಿರುವ ಮನೆಗಳನ್ನು ಅಧಿಕಾರಿಗಳು ಸರಿಯಾಗಿ ಪರಿಶೀಲಿಸದೆ ವಾಸವಿಲ್ಲ ಎಂದು ವರದಿ ನೀಡಿದ್ದಾರೆ. ಇತ್ತೀಚೆಗೆ ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳಿಗೆ ಮನೆ ವಾಸದ ಬಗ್ಗೆ ಪರಿಶೀಲಿಸುವಂತೆ ಕೇಳಿಕೊಂಡರೂ ಗಮನ ನೀಡಲಿಲ್ಲ. | ನಾಮದೇವ ಓರಣಕರ, ಗ್ರಾಮಸ್ಥ, ಉಪ್ಪಿನಬೆಟಗೇರಿ

    ಉಪ್ಪಿನಬೆಟಗೇರಿಯಲ್ಲಿ ಮಳೆಯಿಂದ ಬಿದ್ದ ಮನೆಗಳನ್ನು ಗ್ರಾಮಲೆಕ್ಕಾಧಿಕಾರಿ, ಪಿಡಿಒ ಪರಿಶೀಲಿಸಿದಾಗ ಅವುಗಳಲ್ಲಿ 175 ಮನೆಗಳು ವಾಸವಿಲ್ಲ ಎಂದು ದೃಢೀಕರಣ ನೀಡಿದ್ದಾರೆ. ಹೀಗಾಗಿ ಅವುಗಳಿಗೆ ಪರಿಹಾರ ಬಂದಿಲ್ಲ. ಈಗಾಗಲೆ ಅಧಿಕಾರಿಗಳು ನೀಡಿದ ವರದಿಯೇ ಫೈನಲ್ ಅಂತ ಪರಿಗಣಿಸಲಾಗಿದೆ. | ಸಂತೋಷಕುಮಾರ ಬಿರಾದಾರ ತಹಸೀಲ್ದಾರ್, ಧಾರವಾಡ

    ಮಳೆಯಿಂದ ಹಾನಿಯಾದ ಮನೆಗಳಿಗೆ ಸರ್ಕಾರದಿಂದ ಸಾಕಷ್ಟು ಪ್ರಮಾಣದಲ್ಲಿ ಹಣ ಬಿಡುಗಡೆ ಮಾಡಿಸಲಾಗಿದೆ. ಕೆಲವು ಸಂತ್ರಸ್ತರಿಗೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಸರಿಯಾಗಿ ಪರಿಹಾರ ಬಂದಿಲ್ಲ ಎಂಬ ದೂರುಗಳು ಬಂದಿವೆ. ಇದು ತಾಲೂಕಿನಾದ್ಯಂತ ಕೇಳಿ ಬಂದಿರುವ ಆರೋಪ. ಸದ್ಯದಲ್ಲೇ ಗ್ರಾಮಗಳಿಗೆ ಭೇಟಿ ನೀಡಿ ಸಂತ್ರಸ್ತರ ಜೊತೆ ರ್ಚಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. | ಅಮೃತ ದೇಸಾಯಿ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts