More

    ಪರಿಷತ್ ಚುನಾವಣೆ 2023ರ ದಿಕ್ಸೂಚಿ: ಶಾಸಕ ಕೆ.ಆರ್.ರಮೇಶ್‌ಕುಮಾರ್ ಹೇಳಿಕೆ

    ಶ್ರೀನಿವಾಸಪುರ: ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಮುಂಚೂಣಿಯಲ್ಲಿದ್ದು, ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯ ಗೆಲುವು 2023ರ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ಶಾಸಕ ಕೆ.ಆರ್.ರಮೇಶ್‌ಕುಮಾರ್ ಹೇಳಿದರು.

    ಪಟ್ಟಣದ ರಾಜಧಾನಿ ಮ್ಯಾಂಗೋ ಮಂಡಿಯಲ್ಲಿ ಸೋಮವಾರ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿ, ಆಸೆ-ಆಮಿಷಗಳಿಗೆ ಒಳಗಾಗದೆ ನಿಷ್ಠೆಯಿಂದ ಕೆಲಸ ಮಾಡಿ ನಮ್ಮ ಗೌರವ ಉಳಿಸಿಕೊಳ್ಳಬೇಕು ಎಂದು ನುಡಿದರು.

    ನನ್ನ 19ನೇ ವಯಸ್ಸಿನಲ್ಲಿ ಇಂದಿರಾ ಗಾಂಧಿಯವರ ಪ್ರೇರಣೆ, ದೇವರಾಜ ಅರಸು ವ್ಯಕ್ತಿತ್ವ ಕಂಡು ಕೆ.ಎಚ್. ರಂಗನಾಥ್ ಮಾರ್ಗದರ್ಶನದಲ್ಲಿ ಕಾಂಗ್ರೆಸ್ ಅಪ್ಪಿಕೊಂಡಿದ್ದೆ. ಅರಸು ಕಾಂಗ್ರೆಸ್ ಬಿಟ್ಟಾಗ 25 ವರ್ಷ ಕಾಂಗ್ರೆಸ್‌ನಿಂದ ಹೊರಗಿದ್ದೆ. ಇಂದು ಮತ್ತೆ ಇಂದಿರಾಗಾಂಧಿ ಕಾಂಗ್ರೆಸ್‌ನ್ನು ಈ ನೆಲದಲ್ಲಿ ಉಳಿಸಿ ಅವರ ಆಶಯಗಳನ್ನು ಜನರಿಗೆ ತಲುಪಿಸಬೇಕಾಗಿದೆ ಎಂದರು.

    7 ವರ್ಷಗಳಿಂದ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಮೋದಿ ರೈತರಿಗಾಗಿ ಏನೂ ಮಾಡಿಲ್ಲ. ತ್ರಿವಳಿ ತಲಾಕ್ ಕಾನೂನು ಜಾರಿಗೆ ತಂದು ದೇಶಕ್ಕೆ ಏನು ಕೊಡುಗೆ ನೀಡಿದ್ದೀರಿ ಎಂದು ಕೇಂದ್ರದ ವಿರುದ್ಧ ಹರಿದಾಯ್ದರು.

    ಮುಳಬಾಗಿಲು ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ, ಕಳೆದ ಲೋಕಸಭೆ ಚುನಾವಣೆಯಲ್ಲಿ ನಾನು, ಚಿಂತಾಮಣಿಯ ಸುಧಾಕರರೆಡ್ಡಿ ಬಿಜೆಪಿಗೆ ಬೆಂಬಲ ನೀಡಿದ್ದು ಸತ್ಯ. ಕಾಂಗ್ರೆಸ್‌ನ ಕೆಲವರು ಏನಾದರೂ ಮಾಡುವುದಾದರೆ ನನ್ನ ಮತ್ತು ಸುಧಾಕರ್ ವಿರುದ್ಧ ಮಾಡಿ. ಅನಿಲ್ ವಿರುದ್ಧ ಯಾವುದೇ ಕುತಂತ್ರ ಮಾಡಬೇಡಿ ಎಂದರು.

    ವಿಧಾನ ಪರಿಷತ್ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಬ್ಯಾಲಹಳ್ಳಿ ಗೋವಿಂದೇಗೌಡ ಮೊಟ್ಟಮೊದಲ ಬಾರಿಗೆ ಶ್ರೀನಿವಾಸಪುರ ಪ್ರಚಾರ ಸಭೆಯಲ್ಲಿ ಕಾಣಿಸಿಕೊಂಡು ಸಭೆಯ ಆರಂಭದಲ್ಲೆ ಮಾತನಾಡಿ ಸಭೆಯಿಂದ ನಿರ್ಗಮಿಸಿದರು.

    ಅಭ್ಯರ್ಥಿ ಅನಿಲ್ ಕುಮಾರ್, ಎಂಎಲ್‌ಸಿ ನಜೀರ್ ಅಹಮದ್, ಕೆಪಿಸಿಸಿ ವೀಕ್ಷಕ ಬಾಲಾಜಿ ನಂದಗೋಪಾಲ್, ಜಿಪಂ ಮಾಜಿ ಅಧ್ಯಕ್ಷ ಜನ್ನಘಟ್ಟ ವೆಂಕಟಮುನಿಯಪ್ಪ, ಎಂ.ಶ್ರೀನಿವಾಸನ್, ಸದಸ್ಯರಾದ ಮ್ಯಾಕಲ ನಾರಾಯಣಸ್ವಾಮಿ, ಗೋವಿಂದಸ್ವಾಮಿ, ಕೋಚಿಮುಲ್ ಮಾಜಿ ಅಧ್ಯಕ್ಷರಾದ ಬ್ಯಾಟಪ್ಪ, ಕೆ.ಆರ್. ವೆಂಕಟಶಿವಾರೆಡ್ಡಿ, ನಿರ್ದೇಶಕ ಹನುಮೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ, ವೆಂಕಟರೆಡ್ಡಿ ಇತರರು ಉಪಸ್ಥಿತರಿದ್ದರು.

    ಗಮನ ಸೆಳೆದ ಇಂದಿರಾ: ದೇಶ, ರಾಜ್ಯ ಕಾಂಗ್ರೆಸ್ ಕುರಿತು ವಿಭಿನ್ನ ನಿಲುವು ತಳೆದು ಇಂದಿರಾಗಾಂಧಿ ಕಾಂಗ್ರೆಸ್‌ನ್ನು ನೆಲದಲ್ಲಿ ಉಳಿಸಬೇಕೆಂದು ಪ್ರತಿಪಾದಿಸುತ್ತಿರುವ ಶಾಸಕ ಕೆ.ಆರ್.ರಮೇಶ್ ಕುಮಾರ್ ಚುನಾವಣಾ ಪ್ರಚಾರ ಸಭೆಯ ಬ್ಯಾನರ್‌ನಲ್ಲಿ ಎಐಸಿಸಿಯಿಂದ ಹಿಡಿದು ಕೆಪಿಸಿಸಿ ನಾಯಕರು, ಸಿಎಲ್‌ಪಿ ನಾಯಕ, ಅವಳಿ ಜಿಲ್ಲೆಯ ಕಾಂಗ್ರೆಸ್ ಶಾಸಕರು, ಮುಖಂಡರ ಭಾವಚಿತ್ರಕ್ಕೆ ಕೋಕ್ ನೀಡಿ ಹಸ್ತ ಹಾಗೂ ಇಂದಿರಾ ಭಾವಚಿತ್ರವನ್ನಷ್ಟೇ ಹಾಕಿಸಿದ್ದು ಗಮನ ಸೆಳೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts