More

    ಪರಿಶುದ್ಧ ಮನಸ್ಸುಗಳಲ್ಲಿ ದೇವರು ನೆಲೆ

    ಹಾಸನ : ಶ್ರದ್ಧೆ ಹಾಗೂ ಭಕ್ತಿಯೊಂದಿಗೆ ಮನಸ್ಸು ಪರಿಶುದ್ಧವಾಗಿದ್ದವರ ಆತ್ಮದಲ್ಲಿಯೇ ದೇವರು ನೆಲೆಸಿರುತ್ತಾನೆ ಎಂದು ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀಶಂಭುನಾಥಸ್ವಾಮೀಜಿ ಅಭಿಪ್ರಾಯಪಟ್ಟರು.

    ಚನ್ನರಾಯಪಟ್ಟಣ ತಾಲೂಕಿನ ಉಳ್ಳಾವಳ್ಳಿ ಗ್ರಾಮದಲ್ಲಿ ಜೀರ್ಣೋದ್ಧಾರಗೊಂಡಿರುವ ಶ್ರೀಹುಚ್ಚಮ್ಮದೇವಿ ದೇಗುಲವನ್ನು ಗುರುವಾರ ಲೋಕಾರ್ಪಣೆಗೊಳಿಸಿ ಮಾತನಾಡಿ, ಸನ್ಮಾರ್ಗದ ನಡೆ ಹಾಗೂ ಮಾಡುವ ಉತ್ತಮ ಕೆಲಸವೇ ದೇವರು ಎಂದು ಆಶೀರ್ವಚನ ನೀಡಿದರು.


    ಮನುಷ್ಯ ಅದೆಷ್ಟೇ ಅತ್ಯಾಧುನಿಕ ಆವಿಷ್ಕಾರ ಮಾಡಿದರೂ ಅದರ ಹಿಂದೆ ದೇವರ ಶಕ್ತಿ ಇದ್ದೇ ಇರುತ್ತದೆ. ಒಬ್ಬ ವೈದ್ಯ ರೋಗಿಯೊಬ್ಬನಿಗೆ ಚಿಕಿತ್ಸೆ ಮಾಡುವ ಮೊದಲು ದೇವರ ಮೇಲೆ ಭಾರ ಹಾಕಿಯೇ ತನ್ನ ಕರ್ತವ್ಯ ನಿರ್ವಹಿಸುತ್ತಾನೆ ಎಂದರು.


    ಮೊಬೈಲ್ ಮೂಲಕ ಮಾತನಾಡುವ ಶಬ್ದ ತರಂಗಗಳು ಎಲ್ಲಿಯೋ ದೂರದಲ್ಲಿರುವ ಮತ್ತೊಬ್ಬರಿಗೆ ಯಾವುದೇ ತಂತಿಯ ಸಂಪರ್ಕವಿಲ್ಲದೆ ತಲುಪುತ್ತವೆ. ಟಿವಿ ಹಾಗೂ ರೇಡಿಯೋಗಳೂ ದೇಶ-ವಿದೇಶದ ಮೂಲೆಯ ಸಂಗತಿಗಳನ್ನು ಬಿತ್ತರಿಸುತ್ತವೆ. ಇದರ ಹಿಂದೆ ಒಂದು ಶಕ್ತಿ ಅಡಗಿದೆ, ಆ ಶಕ್ತಿಯೇ ದೇವರು ಎಂದರು.


    ದೇವರ ಅನುಗ್ರಹವಿಲ್ಲದೆ ಇಲ್ಲಿ ಒಂದು ಹುಲ್ಲುಕಡ್ಡಿಯೂ ಅಲುಗಾಡಲು ಸಾಧ್ಯವಿಲ್ಲ. ದೇವರೇ ಇಲ್ಲ ಎನ್ನುವ ನಾಸ್ತಿಕನಿಗೂ ಗೊತ್ತು, ಇಲ್ಲ ಎನ್ನುವುದರೊಳಗೆಯೇ ಇದೆ ಎಂಬುದು. ನಾಸ್ತಿಕನೊಬ್ಬ ಮನೆ ಕಟ್ಟಬೇಕಾದರೆ ವಾಸ್ತು ಇಲ್ಲದೆ ನಿರ್ಮಿಸುವುದಿಲ್ಲ, ಅಂದಮೇಲೆ ಅವನೂ ಒಬ್ಬ ಆಸ್ತಿಕನೇ ಆಗಿರುತ್ತಾನೆ ಎಂದರು.


    ಇದಕ್ಕೂ ಮೊದಲು ಶ್ರೀಗಳು ಶ್ರೀಹುಚ್ಚಮ್ಮದೇವಿಗೆ ವಿಶೇಷ ಪೂಜೆ ಸಲ್ಲಿಸಿ ಪೂರ್ಣಾಹುತಿ ನೆರವೇರಿಸಿದರು. ಶ್ರೀಕ್ಷೇತ್ರ ಕಬ್ಬಳಿ ಶಾಖಾ ಮಠದ ಶ್ರೀಶಿವಪುತ್ರನಾಥಸ್ವಾಮೀಜಿ, ಎಪಿಎಂಸಿ ಮಾಜಿ ಅಧ್ಯಕ್ಷ ವಳಗೇರಹಳ್ಳಿ ಮಂಜೇಗೌಡ, ಉಳ್ಳಾವಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts