More

    ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಿ

    ಚಿಕ್ಕಬಳ್ಳಾಪುರ: ಮಕ್ಕಳ ಮೇಲಿನ ಶೋಷಣೆ ತಡೆ ಮತ್ತು ಹಕ್ಕುಗಳ ರಕ್ಷಣೆಗಾಗಿ ಇಲಾಖೆಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಅಶೋಕ್ ಜಿ.ಯರಗಟ್ಟಿ ಸೂಚಿಸಿದರು.

    ನಗರದ ಅಂಬೇಡ್ಕರ್ ಭವನದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ ಕೇಂದ್ರ ಗುರುವಾರ ಹಮ್ಮಿಕೊಂಡಿದ್ದ ಮಕ್ಕಳ ಹಕ್ಕುಗಳ ರಕ್ಷಣೆಯ ಜಿಲ್ಲಾಮಟ್ಟದ ಸಮಾಲೋಚನಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

    ಮಕ್ಕಳಹಿತ ಕಾಪಾಡುವುದು ಕೇವಲ ಸಂಬಂಧಿಕರಿಗೆ ಹಾಗೂ ಸಂಬಂಧಪಟ್ಟ ಇಲಾಖೆಗೆ ಸೀಮಿತವಾಗಿಲ್ಲ, ಅದು ಪ್ರತಿಯೊಬ್ಬರ ಜವಾಬ್ದಾರಿ, ಕಾನೂನಾತ್ಮಕವಾಗಿ ತಮ್ಮ ಕರ್ತವ್ಯ ನಿರ್ವಹಿಸಬೇಕು ಎಂದರು.

    ವಿವಿಧ ಇಲಾಖೆಯ ಅಧಿಕಾರಿಗಳು, ಮಕ್ಕಳ ಪಾಲಕರು ಸೇರಿ ಪ್ರತಿಯೊಬ್ಬರು ಮಕ್ಕಳ ಹಕ್ಕುಗಳ ರಕ್ಷಣೆಗೆ ವಿಶೇಷ ಆಸಕ್ತಿ ತೋರಿದಾಗ ಶೋಷಣೆ, ದೌರ್ಜನ್ಯ, ಕಿರುಕುಳ ಪ್ರಕರಣಗಳ ನಿಯಂತ್ರಣ ಸಾಧ್ಯ ಎಂದರು.

    ಎಳೆಯ ಮಗುವಿನಿಂದ ಹಿಡಿದು 18 ವರ್ಷದ ವರೆಗಿನ ಮಕ್ಕಳ ಹಕ್ಕುಗಳ ರಕ್ಷಣೆಯ ಜವಾಬ್ದಾರಿಯು ಸಮಾಜದ ಮೇಲಿದೆ. ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳುವ ಜತೆಗೆ ಬಾಲ್ಯವಿವಾಹ, ಬಾಲಕಾರ್ಮಿಕ ಸೇರಿ ಸಾಮಾಜಿಕ ಪಿಡುಗುಗಳಿಗೆ ಕಡಿವಾಣ ಹಾಕಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್.ದೇವರಾಜ್ ತಿಳಿಸಿದರು.

    ಪ್ರತಿಯೊಬ್ಬರು ಮಕ್ಕಳ ಮೂಲಭೂತ ಹಕ್ಕುಗಳ ರಕ್ಷಣೆ, ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ, ಮಕ್ಕಳಿಗೆ ಅನ್ವಯಿಸುವ ಕಾರ್ಮಿಕ ಕಾನೂನುಗಳ ಕಾಯ್ದೆ, ಬಾಲ್ಯವಿವಾಹ ನಿಷೇಧ ಕಾಯ್ದೆ ಸೇರಿ ವಿವಿಧ ಕಾಯ್ದೆಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದರು.

    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎನ್.ನಾರಾಯಣಸ್ವಾಮಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಜಿ.ಕೆ.ಲಕ್ಷ್ಮೀದೇವಮ್ಮ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರಾಮರಾಜೇ ಅರಸ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಕಿರಣ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts