More

    ಪಪ್ಪಾಯಿ ಬೆಳೆ ನಾಶಪಡಿಸಿದ ರೈತ

    ರಾಣೆಬೆನ್ನೂರ: ತಾನು ಬೆಳೆದ ಪಪ್ಪಾಯಿ ಹಣ್ಣನ್ನು ಮಾರುಕಟ್ಟೆಗೆ ಸಾಗಿಸಲಾಗದೆ ಹಾಗೂ ವ್ಯಾಪಾರಸ್ಥರು ಖರೀದಿಗೆ ಬಾರದ ಕಾರಣ ರೈತನೊಬ್ಬ 500ಕ್ಕೂ ಅಧಿಕ ಪಪ್ಪಾಯಿ ಗಿಡಗಳನ್ನು ನೆಲಸಮಗೊಳಿಸಿದ ಘಟನೆ ತಾಲೂಕಿನ ವೈ.ಟಿ. ಹೊನ್ನತ್ತಿ ಗ್ರಾಮದಲ್ಲಿ ನಡೆದಿದೆ.

    ರೈತ ಗುಡ್ಡಪ್ಪ ರುದ್ರಪ್ಪ ಕುಲಕರ್ಣಿ ಎಂಬುವವರು ಕಳೆದ 9 ತಿಂಗಳ ಹಿಂದೆ ಮೂರು ಎಕರೆಯಲ್ಲಿ ಪಪ್ಪಾಯಿ ಬೆಳೆದಿದ್ದರು. ಫಸಲೂ ಉತ್ತಮವಾಗಿದೆ. ಆದರೆ, ಕರೊನಾ ಸೋಂಕು ತಡೆಗಟ್ಟುವ ಸಲುವಾಗಿ ಲಾಕ್​ಡೌನ್ ಘೊಷಿಸಿದ ಹಿನ್ನೆಲೆಯಲ್ಲಿ ಯಾರೊಬ್ಬರೂ ಪಪ್ಪಾಯಿ ಕೊಳ್ಳಲು ಬರುತ್ತಿಲ್ಲ. ಅಲ್ಲದೆ, ರೈತ ಗುಡ್ಡಪ್ಪ ಸ್ವತಃ ತಾನೇ ಮಾರುಕಟ್ಟೆಗೆ ಹೋಗಿ ಮಾರಾಟ ಮಾಡಲು ಮುಂದಾದರೂ ಯಾರೂ ಖರೀದಿಸುತ್ತಿಲ್ಲ. ಹೀಗಾಗಿ ಮನನೊಂದಿರುವ ಗುಡ್ಡಪ್ಪ ತಾನು ಬೆಳೆಸಿದ ಗಿಡಗಳನ್ನೇ ಕಡಿದು ಹಾಕಿ ಕಣ್ಣೀರಿಡುತ್ತಿದ್ದಾನೆ.

    ಲಕ್ಷಾಂತರ ರೂ. ನಷ್ಟ: ಒಂದು ಎಕರೆ ಪಪ್ಪಾಯಿ ಬೆಳೆಯಲು ಸಸಿ, ಗೊಬ್ಬರ, ಕೂಲಿ ಕಾರ್ವಿುಕರ ಖರ್ಚು ಸೇರಿ ಆರಂಭದಲ್ಲಿ 50 ಸಾವಿರ ರೂ. ಬೇಕು. ನಂತರ ಬೆಳೆ ನಿರ್ವಹಣೆಗೆ ಔಷಧ ಸಿಂಪಡಣೆಗೆ ಸಾವಿರಾರು ರೂ. ಖರ್ಚಾಗುತ್ತದೆ.

    ಬೆಳೆ ಖರೀದಿಸಲು ಚಿತ್ರದುರ್ಗ, ಸವದತ್ತಿ ಸೇರಿ ವಿವಿಧ ಕಡೆಯಿಂದ ವ್ಯಾಪಾರಸ್ಥರು ಬರುವವರಿದ್ದರು. ಆದರೆ, ಲಾಕ್​ಡೌನ್ ಹಿನ್ನೆಲೆಯಲ್ಲಿ ಯಾರೂ ಖರೀದಿಗೆ ಬರುತ್ತಿಲ್ಲ. ಆದ್ದರಿಂದ ರೈತ ಬೆಳೆ ನಾಶ ಪಡಿಸಿದ್ದು, ಲಕ್ಷಾಂತರ ರೂ. ನಷ್ಟ ಅನುಭವಿಸುವಂತಾಗಿದೆ.

    ಗಾಯದ ಮೇಲೆ ಬರೆ ಎಳೆದ ಕರೊನಾ: ಗುಡ್ಡಪ್ಪ 2018ರಲ್ಲಿಯೂ ಪಪ್ಪಾಯಿ ಬೆಳೆದಿದ್ದನು. ಆಗ ನೀರಿನ ಕೊರತೆ ಎದುರಾಗಿ ಬೆಳೆ ಸಂಪೂರ್ಣ ಒಣಗಿ ಹಾಳಾಗಿತ್ತು. 2019ರಲ್ಲಿ ಮತ್ತೆ ಪಪ್ಪಾಯಿ ಬೆಳೆದಾಗ ನಿರಂತರ ಮಳೆಯಿಂದ ಸಸಿ ಇದ್ದಾಗಲೇ ಬೆಳೆ ಹಾಳಾಗಿತ್ತು. ಇದರಿಂದ ಲಕ್ಷಾಂತರ ರೂ. ನಷ್ಟ ಅನುಭವಿಸಿದ್ದರೂ ಈ ಬಾರಿ ಮಳೆ ಉತ್ತಮವಾಗಿ ಆಗಿದೆ. ಬೋರ್​ವೆಲ್​ನಿಂದ ಉತ್ತಮ ನೀರು ಸಿಗುತ್ತದೆ ಎಂದು ನಂಬಿಕೊಂಡು ಗುಡ್ಡಪ್ಪ ಮತ್ತೊಂದು ಬಾರಿ ಪಪ್ಪಾಯಿ ಬೆಳೆದಿದ್ದರು. ಗುಡ್ಡಪ್ಪ ಅಂದುಕೊಂಡಂತೆ ಬೆಳೆ ಕೂಡ ಉತ್ತಮವಾಗಿಯೇ ಬಂದಿದೆ. ಆದರೆ ಕರೊನಾ ಹಿನ್ನೆಲೆಯಲ್ಲಿ ಖರೀದಿಸುವವರೇ ಇಲ್ಲದಂತಾಗಿದ್ದು, ಕರೊನಾ ಗುಡ್ಡಪ್ಪನಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

    ಪಪ್ಪಾಯಿ ಹಣ್ಣಾಗುವ ಮೊದಲೇ ಮಾರಾಟ ಮಾಡಬೇಕು. ನಾನು ಬೆಳೆದ ಪಪ್ಪಾಯಿ ಸರಿಯಾಗಿ ಹಣ್ಣಾಗುವ ಸಮಯದಲ್ಲೇ ಲಾಕ್​ಡೌನ್ ಎದುರಾಗಿದೆ. ಹೀಗಾಗಿ ಮಾರಾಟ ಮಾಡಲಾಗದೇ ನಾಶ ಪಡಿಸಿದ್ದೇನೆ. ಸರ್ಕಾರದಿಂದ ಸೂಕ್ತ ಪರಿಹಾರ ನೀಡಿದರೆ, ಮಾಡಿದ ಸಾಲ ತೀರಿಸಲು ಸ್ವಲ್ಪ ಸಹಕಾರಿಯಾಗುತ್ತದೆ.
    | ಗುಡ್ಡಪ್ಪ ಕುಲಕರ್ಣಿ, ಪಪ್ಪಾಯಿ ಬೆಳೆದ ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts