More

    ಪಡಗಾನೂರನಲ್ಲಿ ಕಾಲುವೆಗೆ ಕನ್ನ, ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ

    ದೇವರಹಿಪ್ಪರಗಿ: ಗ್ರಾಮೀಣ ಕೆರೆಗಳಿಗೆ ನೀರು ಪೂರೈಸುವ ಕಾಲುವೆ ಒಡೆದು, ಪಡಗಾನೂರ ಗ್ರಾಮ ವ್ಯಾಪ್ತಿಯಲ್ಲಿನ ಕಲ್ಲು ಕ್ರಶರ್‌ಗಳ ಮಾಲೀಕರು ಅನಧಿಕೃತವಾಗಿ ನೀರು ಪಡೆಯುತ್ತಿರುವ ಪ್ರದೇಶಕ್ಕೆ ಇಂಗಳಗಿ ಗ್ರಾಮದ ರೈತರು ತೆರಳಿ ಆಕ್ರೋಶ ವ್ಯಕ್ತಪಡಿಸಿದರು.

    ತಾಲೂಕಿನ ಇಂಗಳಗಿ ಗ್ರಾಮದ ರೈತರು ತಮ್ಮ ಕೆರೆಗೆ ನೀರು ಪೂರೈಸುವ ಕಾಲುವೆಗೆ ಗುರುವಾರ ತೆರಳಿ ವಾಸ್ತವಿಕ ಸ್ಥಿತಿ ಪರಿಶೀಲಿಸಿ ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗೆ ಮಾಹಿತಿ ನೀಡಿ ವಾಗ್ವಾದ ನಡೆಸಿದರು. ತಾಲೂಕು ಆಡಳಿತ ಹಾಗೂ ಜನಪ್ರತಿನಿಧಿಗಳ ವಿರುದ್ಧ ಗ್ರಾಮಸ್ಥರು ಹರಿಹಾಯ್ದರು.

    ರೈತರಾದ ಸಂತೋಷ ಬಿರಾದಾರ, ಮಂಜುನಾಥ ಕೊಕಟನೂರ ಮಾತನಾಡಿ, ಪಡಗಾನೂರ ಗ್ರಾಮದ ಪ್ರಭಾವಿ ನಾಯಕರು, ವಿವಿಧ ಕ್ರಶರ್‌ಗಳು ಅಕ್ರಮವಾಗಿ ನೀರು ಪಡೆಯುತ್ತಿವೆ. ಇದನ್ನು ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳು ನೋಡಿದ್ದರು ಸಹ ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ. ಈ ಕುರಿತು ಪ್ರಶ್ನಿಸಿದರೆ ಅಧಿಕಾರಿ ರೈತರೊಂದಿಗೆ ಬೇಕಾಬಿಟ್ಟಿಯಾಗಿ ಮಾತನಾಡುತ್ತಾರೆ.

    ಜನ, ಜಾನುವ್ಟ್ಠಾಗಳಿಗೆ ಕುಡಿಯುವ ನೀರು ಅಗತ್ಯವಾದ ಹಿನ್ನೆಲೆಯಲ್ಲಿ ಕೆರೆಗಳಿಗೆ ನೀರು ಪೂರೈಸಲಾಗುತ್ತಿದೆ. ರೈತರು ಜಮೀನುಗಳಿಗೆ ನೀರು ಪಡೆದರೆ ಅವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಎಚ್ಚರಿಕೆ ನೀಡಿದ್ದಾರೆ. ಇಲ್ಲಿ ನೋಡಿದರೆ ಅವರದೇ ಪಕ್ಷದ ನಾಯಕರು ಹಾಗೂ ಕಲ್ಲು ಕ್ರಶರ್ ಮಾಲೀಕರು ತಮ್ಮ ಕಲ್ಲುಗಣಿಗಳಿಗೆ ನೀರು ಹರಿಸಿಕೊಳ್ಳುತ್ತಿದ್ದಾರೆ. ಇವರ ಮೇಲೆ ಯಾವುದೇ ಕಾನೂನು ಕ್ರಮ ಇಲ್ಲವೇ? ಸಾಮಾನ್ಯರಿಗೊಂದು ನ್ಯಾಯ, ಇವರಿಗೊಂದು ನ್ಯಾಯವೇ ಹೇಗೆ ? ಎಂದು ಹರಿಹಾಯ್ದರು.

    ಜಿಲ್ಲಾ ಆಡಳಿತ ಕಾಲುವೆ ಮೂಲಕ ಕ್ರಶರ್‌ಗಳು ನೀರು ಪಡೆಯುವುದನ್ನು ತಡೆಯಬೇಕು. ಕ್ರಶರ್ ಮಾಲೀಕರಿಗೆ ಈ ಕುರಿತು ನೋಟಿಸ್ ನೀಡಬೇಕು. ಜನತೆ ಹಾಗೂ ರೈತರ ಹಿತ ಕಾಯದೇ ಬೇಕಾಬಿಟ್ಟಿಯಾಗಿ ಕಾಲುವೆ ಒಡೆದು ನೀರು ಪಡೆಯುವವರ ಮೇಲೆ ಕಾನೂನು ಕ್ರಮ ವಹಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆಗೆ ಮುಂದಾಗುವುದು ಅನಿವಾರ್ಯ ಎಂದು ಗ್ರಾಮಸ್ಥರು ಎಚ್ಚರಿಸಿದರು.

    ರೈತರಾದ ಅರುಣ ಹುಗ್ಗಿ, ಸಿದ್ದಪ್ಪ ತಳವಾರ, ಸಂಗು ಪೂಜಾರಿ, ಸಂತೋಷ ಇಂಡಿ, ಶಂಕರಗೌಡ ಬಿರಾದಾರ, ಶಿವು ಕೊಣ್ಣೂರ, ಸಂಜೀವ ಗೊಡ್ಯಾಳ, ಮಂಜುನಾಥ ಚೌಧರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts