More

    ಪಠ್ಯವಾಗಲಿ ಸುಗಮಸಂಗೀತ -ಡಾ. ಕಿಕ್ಕೇರಿ ಕೃಷ್ಣಮೂರ್ತಿ ಆಶಯ   -ಕನ್ನಡ ಕುವರ-ಕುವರಿ ಪ್ರಶಸ್ತಿ ಪ್ರದಾನ

    ದಾವಣಗೆರೆ: ರಾಜ್ಯ ಸರ್ಕಾರ ಸುಗಮ ಸಂಗೀತವನ್ನು ಶಾಲಾ-ಕಾಲೇಜುಗಳಲ್ಲಿ ಪಠ್ಯಕ್ರಮವಾಗಿ ಅಳವಡಿಸಬೇಕೆಂದು ಆದರ್ಶ ಸುಗಮ ಸಂಗೀತ ಅಕಾಡೆಮಿ ಅಧ್ಯಕ್ಷ, ಗಾಯಕ ಡಾ. ಕಿಕ್ಕೇರಿ ಕೃಷ್ಣಮೂರ್ತಿ ಆಗ್ರಹಿಸಿದರು.
    ಎಸ್ಸೆಸ್ಸೆಲ್ಸಿ ಪರೀಕ್ಷೆಯ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದವರಿಗೆ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯಿಂದ ಇಲ್ಲಿನ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕನ್ನಡ ಕುವರ-ಕುವರಿ ಜಿಲ್ಲಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಸುಗಮ ಸಂಗೀತವು ಸಾಹಿತಿ, ಕವಿ, ಗಾಯಕ, ಸಂಗೀತ ನಿರ್ದೇಶಕ ಎಲ್ಲರನ್ನೂ ಸಂಯೋಜನೆ ಮಾಡಲಿದೆ. ಇದು ಸಾಹಿತ್ಯ, ಪ್ರಕೃತಿ, ಸಂಸ್ಕೃತಿ ಹಾಗೂ ಸಂಸ್ಕಾರದ ಸಮ್ಮಿಲನವಾಗಿದೆ. ಹಾಗಾಗಿ ಇದನ್ನು ಪಠ್ಯವಾಗಿ ನೀಡಿದಲ್ಲಿ ಮಕ್ಕಳಲ್ಲೂ ಸಂಸ್ಕೃತಿ-ಸಂಸ್ಕಾರ ಮೂಡಲಿದೆ ಎಂದು ಹೇಳಿದರು.
    ಸುಗಮ ಸಂಗೀತ ಪರಿಷತ್ತಿನ ಅಧ್ಯಕ್ಷ ವೈ,ಕೆ.ಮುದ್ದುಕೃಷ್ಣ ಅವರು ಅಮೆರಿಕಾದಲ್ಲಿ ಕರ್ನಾಟಕದ ಕಲಾವಿದರಿಗೆ ಸುಗಮ ಸಂಗೀತ ಹಾಡುವ ಅವಕಾಶ ಕಲ್ಪಿಸಿದರು. ಸಂಗೀತ ಕಾರ್ಯಕ್ರಮವನ್ನು ವಿದೇಶದಲ್ಲಿ ನೀಡಬಹುದು ಎಂಬುದು ಆಗಲೇ ಗೊತ್ತಾಯಿತು ಎಂದು ನೆನಪಿಸಿಕೊಂಡರು. ಭಾಷೆ, ನಾಡು ಉಳಿದರೇನೆ ನಮ್ಮ ಅಸ್ತಿತ್ವ ಎಂಬುದನ್ನು ಯಾರೂ ಮರೆಯಬಾರದು ಎಂದು ತಿಳಿಸಿದರು.
    ನೀವು ಸುಂದರವಾಗಿ ತಯಾರಾಗಿ ಬಂದಿದ್ದೀರಿ. ಇದೊಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಎನಿಸದೆ ವಧು-ವರರ ವೇದಿಕೆ ಎಂಬಂತಾಗಿದೆ. ಇದೆಲ್ಲದರ ಹಿಂದೆ ಪಾಲಕರ ಶ್ರಮವಿದೆ. ಅವರನ್ನು ಕಡೆಗಾಲದವರೆಗೂ ಆರೈಕೆ ಮಾಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಅಧ್ಯಕ್ಷ, ಹಿರಿಯ ಗಾಯಕ ವೈ.ಕೆ.ಮುದ್ದುಕೃಷ್ಣ, ಇಂದಿನ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಐಎಎಸ್, ಕೆಎಎಸ್, ವೈದ್ಯರು, ಇಂಜಿನಿಯರ್ ಮೊದಲಾದ ವೃತ್ತಿ ಅರಸಿ ಹೋಗಬಹುದು. ಆದರೆ ನಿಮ್ಮ ಪ್ರತಿಭೆಗೆ ಹುಮ್ಮಸ್ಸು ತುಂಬುವ ಇಂತಹ ವೇದಿಕೆಗಳು ಸಿಗುವುದಿಲ್ಲ. ಈ ಕಾರ್ಯಕ್ರಮದಿಂದ ಮುಂಬರುವ ದಿನದಲ್ಲಿ ಉತ್ತಮ ವ್ಯಕ್ತಿಯಾಗುವ ಪಣ ತೊಟ್ಟರೆ ಸಾರ್ಥಕತೆ ಬರಲಿದೆ ಎಂದರು.
    ನಮ್ಮ ಅವಧಿಯಲ್ಲಿ ಓದಿದವರು ಹಾಗೂ ಕನ್ನಡದಲ್ಲಿ ಹೆಚ್ಚು ಅಂಕ ಪಡೆದವರನ್ನು ಗುರುತಿಸುವ ಸಂದರ್ಭಗಳು ಇರಲಿಲ್ಲ. ಕಲಾಕುಂಚ ಈಗ ಈ ಕೆಲಸ ನಿರ್ವಹಿಸುತ್ತಿರುವುದು ಗಮನಾರ್ಹವಾದುದು ಎಂದು ಹೇಳಿದರು.
    ಹಿರಿಯ ಗಾಯಕ ನಗರ ಶ್ರೀನಿವಾಸ್ ಉಡುಪ ಮಾತನಾಡಿದರು. ಕಲಾಕುಂಚ ಸಂಸ್ಥೆ ಅಧ್ಯಕ್ಷ ಕೆ.ಎಚ್. ಮಂಜುನಾಥ್, ಮಹಿಳಾ ವಿಭಾಗದ ಅಧ್ಯಕ್ಷೆ ಹೇಮಾ ಶಾಂತಪ್ಪ ಪೂಜಾರಿ, ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ, ಜ್ಯೋತಿ ಗಣೇಶ ಶೆಣೈ ಇದ್ದರು. ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕಿರೀಟ ತೊಡಿಸಿ, ಪುಷ್ಪವೃಷ್ಟಿಯೊಂದಿಗೆ ಪದಕ, ಭುವನೇಶ್ವರಿ ಸ್ಮರಣಿಕೆ ನೀಡಿ ಪ್ರಶಸ್ತಿ ವಿತರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts