More

    ಪಟ್ಟಣಗಳತ್ತ ಬರುವ ಪ್ರವೃತ್ತಿ ನಿಲ್ಲಲಿ

    ಧಾರವಾಡ: ಚೀನಾದಲ್ಲಿ ಕರೋನಾ ವೈರಸ್​ಗೆ ಜನಸಂಖ್ಯೆಯೇ ಕಾರಣ ಎಂದಿದೆ. ಹೀಗಾಗಿ ಚೀನಾಕ್ಕೆ ಆಗಮಿಸಿದ್ದ ಸುತ್ತಲಿನ ಹಳ್ಳಿಗಳ ಜನರಿಗೆ ಮರಳಿ ತಮ್ಮ ಊರುಗಳಿಗೆ ತೆರಳಲು ಸೂಚಿಸಿದೆ. ಇಂತಹ ಸ್ಥಿತಿ ಮುಂದಿನ 20 ವರ್ಷದಲ್ಲಿ ಭಾರತಕ್ಕೂ ಬರಬಹುದು. ಜನ ತಮ್ಮ ಗ್ರಾಮಗಳಲ್ಲೇ ಇದ್ದು ಸಾಧನೆ ಮಾಡಬೇಕು. ಹಳ್ಳಿ ಬಿಟ್ಟು ಪಟ್ಟಣದತ್ತ ಮುಖ ಮಾಡುವ ಪ್ರವೃತ್ತಿ ನಿಲ್ಲಬೇಕು ಎಂದು ಸ್ವಯಂ ನಿವೃತ್ತಿ ಪಡೆದ ಐಪಿಎಸ್ ಅಧಿಕಾರಿ ಅಣ್ಣಾ ಮಲೈ ಅಭಿಪ್ರಾಯಪಟ್ಟರು.

    ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿನ ಶ್ರೀ ರಾಮಕೃಷ್ಣ ಮಂದಿರದ ವಾರ್ಷಿಕೋತ್ಸವ ನಿಮಿತ್ತ ಇಲ್ಲಿನ ಕಲಾಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಯುವ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, 2011ರ ವರದಿ ಪ್ರಕಾರ ಭಾರತದಲ್ಲಿ ಶೇ. 17ರಷ್ಟು ಜನ ತಮ್ಮ ಹಳ್ಳಿಗಳನ್ನು ಬಿಟ್ಟು ನಗರದತ್ತ ಮುಖ ಮಾಡಿದ್ದಾರೆ. ಮುಂದಿನ 2025ಕ್ಕೆ ಈ ಸಂಖ್ಯೆ ಶೇ. 25ಕ್ಕೆ ಏರಿಕೆಯಾಗಬಹುದು ಎಂದು ಕಳವಳ ವ್ಯಕ್ತಪಡಿಸಿದರು.

    ಶಿಕ್ಷಣ ಪಡೆದ ನಂತರದಲ್ಲಿ ತೆಗೆದುಕೊಳ್ಳುವ ನಿರ್ಧಾರದಿಂದ ದೇಶಕ್ಕೆ ಸ್ಪಲ್ಪವಾದರೂ ಪ್ರಯೋಜನವಾಗಬೇಕು. ಅಂದಾಗ ಮಾತ್ರ ಕಲಿತ ಶಿಕ್ಷಣಕ್ಕೆ ಬೆಲೆ ಸಿಗುತ್ತದೆ ಎಂದು ವಿವೇಕಾನಂದರು ಹೇಳಿದ್ದಾರೆ. ಅದೇ ರೀತಿಯಲ್ಲಿ ಇಂದಿನ ವಿದ್ಯಾರ್ಥಿಗಳು ಉತ್ತಮ ನಿರ್ಧಾರ ಕೈಗೊಂಡು ಉತ್ತಮ ಜೀವನ ನಡೆಸುವ ಜತೆಗೆ ದೇಶಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂದು ಛಲ ಹೊಂದಿರಬೇಕು ಎಂದರು.

    ವಿಜಯವಾಣಿ ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಜೀವನದಲ್ಲಿ ಸಾಧನೆ ಮಾಡಲು ಮೊದಲು ಇಚ್ಛಾಶಕ್ತಿ ಬೇಕು. ಅದು ನಮ್ಮಲ್ಲಿ ಅಡಗಿರುವ ಅದ್ಭುತ ಶಕ್ತಿ. ಹೊಟ್ಟೆಗೆ ಆಹಾರವಿದ್ದಂತೆ ಮನಸ್ಸಿಗೆ 5 ಇಂದ್ರಿಯಗಳು (ಕೈ, ನಾಲಿಗೆ, ಕಣ್ಣು, ಕಿವಿ, ಚರ್ಮ) ಆಹಾರ ನೀಡುತ್ತವೆ. ಈ ಇಂದ್ರಿಯಗಳು ನೀಡಿದ ಆಹಾರದಿಂದ ಮನಸ್ಸು ಆಲೋಚನೆ ಮಾಡುತ್ತಿದೆ. ಒಂದು ವೇಳೆ ಇಂದ್ರಿಯಗಳನ್ನು ಮನಸೋ ಇಚ್ಛೆ ಬಿಟ್ಟರೆ ಮನಸ್ಸು ಎಂದಿಗೂ ಹತೋಟಿಗೆ ಬರುವುದಿಲ್ಲ ಎಂದರು.

    ವಿಲಾಸಿ ಜೀವನದಿಂದ ಹೊರಬರುವುದೇ ಸಾಧನೆಯ ಮೊದಲ ಹೆಜ್ಜೆ. ಇದರ ಜತೆಗೆ ನಾವು ಯಾವ ರೀತಿಯಲ್ಲಿ ನಡೆದುಕೊಳ್ಳಬೇಕು ಎಂದು ನಮಗೆ ನಾವೇ ಒಂದು ಚೌಕಟ್ಟು ಹಾಕಿಕೊಳ್ಳಬೇಕು. ಇಚ್ಛಾಶಕ್ತಿಯನ್ನು ಕ್ರಿಯಾಶಕ್ತಿಯನ್ನಾಗಿ ಪರಿವರ್ತನೆ ಮಾಡಿದ ವ್ಯಕ್ತಿ ನಿಶ್ಚಿತವಾಗಿ ಗೆಲುವು ಸಾಧಿಸುತ್ತಾನೆ. ಇಲ್ಲವಾದಲ್ಲಿ ಇಚ್ಛಾಶಕ್ತಿ ಇದ್ದರೂ ಯಾವುದೇ ಪ್ರಯೋಜನವಾಗುವುದಿಲ್ಲ ಎಂದರು.

    ಸ್ವಾಮಿ ವಿವೇಕಾನಂದರು ಜೀವನದಲ್ಲಿನ ಎಲ್ಲ ಸವಾಲು ಸ್ವೀಕರಿಸಿ ಅವುಗಳನ್ನು ಸಮರ್ಥವಾಗಿ ಎದುರಿಸಿ ಸಾಧನೆ ಮಾಡಿದ್ದಾರೆ. ನಾವು ಗಳಿಸಿದ್ದು ರಾಷ್ಟ್ರಕ್ಕೆ ಸಮರ್ಪಣೆ ಆಗದಿದ್ದರೆ ಗಳಿಕೆಗೆ ಮಹತ್ವವೇ ಇರುವುದಿಲ್ಲ. ರಾಷ್ಟ್ರದ ಗೌರವವನ್ನು ನಾವು ಹೆಚ್ಚಿಸುವ ಕೆಲಸ ಮಾಡಬೇಕೆ ಹೊರತು, ನಾಶ ಮಾಡುವ ಕೆಲಸ ಮಾಡಬಾರದು ಎಂದರು. ಮೋಹನಕುಮಾರ ಭಸ್ಮೆ ಮಾತನಾಡಿದರು. ಧಾರವಾಡ ವಿವೇಕಾನಂದ ಆಶ್ರಮದ ಶ್ರೀ ವಿಜಯಾನಂದ ಸರಸ್ವತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ದಾನಪ್ಪ ಕಬ್ಬೇರ, ವಿವಿಧ ಆಶ್ರಮದ ಸ್ವಾಮೀಜಿಗಳು, ವಿದ್ಯಾರ್ಥಿಗಳು, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts