More

    ಪಕ್ಷೇತರರೇ ನಿರ್ಣಾಯಕರು!

    ಹಾವೇರಿ: ನಗರ ಸ್ಥಳೀಯ ಸಂಸ್ಥೆಗಳ ಸದಸ್ಯರ ಆಯ್ಕೆ ನಡೆದು ಒಂದೂವರೆ ವರ್ಷದ ಬಳಿಕ ನಗರಸಭೆಯಲ್ಲಿ ಸದಸ್ಯರು ಆಡಳಿತದ ಚುಕ್ಕಾಣಿ ಹಿಡಿಯುವ ಕಾಲ ಕೂಡಿಬಂದಿದೆ. ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

    ಈ ಹಿಂದೆ ಘೊಷಣೆಯಾಗಿದ್ದ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿಯನ್ನು ಬದಲಾಯಿಸುವಂತೆ ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದ ಪರಿಣಾಮ ಒಂದೂವರೆ ವರ್ಷದಿಂದ ರಾಜ್ಯದ ಅನೇಕ ಸ್ಥಳೀಯ ಸಂಸ್ಥೆಗಳಿಗೆ ಆಡಳಿತ ಮಂಡಳಿಯೇ ರಚನೆಯಾಗಿರಲಿಲ್ಲ. ಇದರಲ್ಲಿ ಜಿಲ್ಲೆಯ ಹಾವೇರಿ, ರಾಣೆಬೆನ್ನೂರ ನಗರಸಭೆ, ಹಿರೇಕೆರೂರ, ಗುತ್ತಲ ಪಪಂ, ಹಾನಗಲ್ಲ ಪುರಸಭೆಗಳಿಗೆ 2018ರ ಆಗಸ್ಟ್​ನಲ್ಲಿಯೇ ಚುನಾವಣೆ ನಡೆದು ಸೆಪ್ಟೆಂಬರ್ 3ರಂದು ಫಲಿತಾಂಶ ಘೊಷಣೆಯಾಗಿತ್ತು. ಅಂದಿನಿಂದ ಈವರೆಗೂ ಸ್ಥಳೀಯ ಸಂಸ್ಥೆಗಳಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಅಂತಿಮಗೊಳ್ಳದೇ ಆಡಳಿತ ಮಂಡಳಿ ರಚನೆಯಾಗಿರಲಿಲ್ಲ. ಇದೀಗ ಮೀಸಲಾತಿ ಅಂತಿಮಗೊಂಡಿರುವುದರಿಂದ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಲ್ಲಿ, ಕೈ, ಕಮಲ ಪಕ್ಷದಲ್ಲಿ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ.

    ಜಿಲ್ಲಾ ಕೇಂದ್ರ ಹಾವೇರಿ ನಗರಸಭೆಯ ಅಧ್ಯಕ್ಷ ಸ್ಥಾನವು ಸಾಮಾನ್ಯ ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನವು ಹಿಂದುಳಿದ ವರ್ಗ ಅ ಮಹಿಳೆಗೆ ಮೀಸಲಾಗಿದೆ. ಒಟ್ಟು 31 ಸದಸ್ಯ ಬಲದ ನಗರಸಭೆಯಲ್ಲಿ, ಕಾಂಗ್ರೆಸ್ 15 ಸ್ಥಾನ ಗಳಿಸಿದ್ದರೆ, ಬಿಜೆಪಿ 9, ಪಕ್ಷೇತರರು 7 ಸ್ಥಾನಗಳಲ್ಲಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಅತಿ ಹೆಚ್ಚು ಸ್ಥಾನ ಗಳಿಸಿದ್ದರೂ ಆಡಳಿತ ಚುಕ್ಕಾಣಿ ಹಿಡಿಯಲು ಇನ್ನೂ ಇಬ್ಬರು ಸದಸ್ಯರ ಬೆಂಬಲದ ಕೊರತೆ ಎದುರಿಸುತ್ತಿದೆ. ಪಕ್ಷೇತರರಾಗಿ ಆಯ್ಕೆಯಾಗಿರುವ 7 ಸದಸ್ಯರಲ್ಲಿ ಬಹುತೇಕರು ಬಿಜೆಪಿ ಬಂಡಾಯ ಅಭ್ಯರ್ಥಿಗಳಿದ್ದು, ಅವರೆಲ್ಲರೂ ಮರಳಿ ಬಿಜೆಪಿಯತ್ತ ಮುಖ ಮಾಡಲು ನಿರ್ಧರಿಸಿದರೆ ಮಾತ್ರ ಬಿಜೆಪಿ ಅಧಿಕಾರಕ್ಕೇರುವ ಸಾಧ್ಯತೆಗಳಿವೆ. ಪಕ್ಷೇತರರು ಬಿಜೆಪಿಯತ್ತ ಮರಳಿದರೆ ಬಿಜೆಪಿಯ ಒಟ್ಟು ಬಲ 16ಕ್ಕೇರಲಿದೆ. ಇದರ ಜೊತೆಗೆ ಶಾಸಕರು, ಸಂಸದರು ಬಿಜೆಪಿಯವರೇ ಇರುವುದರಿಂದ ಸುಲಭವಾಗಿ ನಗರಸಭೆಯನ್ನು ಕಮಲದ ತೆಕ್ಕೆಗೆ ಪಡೆಯಬಹುದು. ಆದರೆ, ಪಕ್ಷೇತರರಲ್ಲಿ ಇಬ್ಬರಿಂದ ಮೂವರು ಕಾಂಗ್ರೆಸ್​ನತ್ತ ವಾಲಿದರೆ ಕಮಲಕ್ಕೆ ಅಧಿಕಾರ ತಪ್ಪುವುದು ನಿಶ್ಚಿತ.

    ಆಕಾಂಕ್ಷಿಗಳು ಚುರುಕು

    ಮೀಸಲಾತಿ ಪ್ರಕಟಗೊಳ್ಳುತ್ತಿದ್ದಂತೆ ಕೈ, ಕಮಲ ಪಕ್ಷದಲ್ಲಿನ ಆಕಾಂಕ್ಷಿಗಳಲ್ಲಿ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿದ್ದು, ಪಕ್ಷೇತರ ಸದಸ್ಯರ ಮನವೊಲಿಕೆ ಕಸರತ್ತು ಆರಂಭಿಸಿದ್ದಾರೆ. ಬಿಜೆಪಿಯಿಂದ ಬಂಡಾಯವೆದ್ದು ನಗರಸಭೆಗೆ ಆಯ್ಕೆಯಾಗಿರುವ ಸದಸ್ಯರು ಮರಳಿ ಬಿಜೆಪಿಗೆ ಹೋಗದಂತೆ ತಡೆಯಲು ನಾನಾ ತಂತ್ರಗಾರಿಕೆಯನ್ನು ಈಗಾಗಲೇ ಕಾಂಗ್ರೆಸ್ ಮುಖಂಡರು ನಡೆಸಿದ್ದಾರೆ. ರಾಜ್ಯ, ಕೇಂದ್ರದಲ್ಲಿ ನಮ್ಮದೇ ಸರ್ಕಾರವಿದ್ದು, ಬಿಜೆಪಿ ಅಧಿಕಾರಕ್ಕೆ ಬಂದರೆ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದು ಬಿಜೆಪಿ ನಾಯಕರು ಪಕ್ಷೇತರರನ್ನು ಮರಳಿ ಸೆಳೆಯಲು ಕಸರತ್ತು ನಡೆಸಿದ್ದಾರೆ. ಚುನಾವಣೆಗೆ ದಿನಾಂಕ ನಿಗದಿಯಾದ ನಂತರ ರಾಜಕೀಯ ಚದುರಂಗದಾಟ ಹೇಗೆ ನಡೆಯುತ್ತದೆ ಎಂಬುದು ಸದ್ಯ ಕುತೂಹಲ ಮೂಡಿಸಿದೆ.

    ಗುಟ್ಟು ಬಿಡದ ಸದಸ್ಯರು

    ಕಾಂಗ್ರೆಸ್​ನಲ್ಲಿ ಸದ್ಯ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಬಿಜೆಪಿಯಲ್ಲಿ ಗಿರೀಶ ತುಪ್ಪದ ಸೇರಿ ಹಲವರು ಆಕಾಂಕ್ಷಿಗಳಾಗಿದ್ದಾರೆ. ಪಕ್ಷೇತರ ಸದಸ್ಯರಲ್ಲಿಯೂ ಕೆಲವರು ಗುಂಪು ಮಾಡಿಕೊಂಡಿದ್ದು, ನಮಗೆ ಅಧ್ಯಕ್ಷ ಸ್ಥಾನ ಕೊಟ್ಟರೆ ಬೆಂಬಲ ಸೂಚಿಸುವ ತಂತ್ರಗಾರಿಕೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ, ನಗರಸಭೆಯಲ್ಲಿ ಮುಂದಿನ ರಾಜಕೀಯ ಬೆಳವಣಿಗೆಗಳ ಕುರಿತು ಪ್ರತಿಕ್ರಿಯೆ ನೀಡಲು ಸದಸ್ಯರು ಸದ್ಯ ಹಿಂದೇಟು ಹಾಕುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts