More

    ಪಕ್ಷೇತರರೇ ಕಿಂಗ್​ವೆುೕಕರ್!

    ಹಾವೇರಿ: ಸ್ಥಳೀಯ ನಗರಸಭೆಗೆ ಸದಸ್ಯರಾಗಿ ಆಯ್ಕೆಯಾಗಿ ಬರೋಬ್ಬರಿ 25 ತಿಂಗಳಾದ ನಂತರ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಚುನಾವಣೆಗೆ ಅ. 31ರಂದು ಮುಹೂರ್ತ ನಿಗದಿಯಾಗಿದೆ. ಅತಂತ್ರ ನಗರಸಭೆಯ ಗದ್ದುಗೆಗೇರಲು ಕೈ, ಕಮಲದ ಸದಸ್ಯರ ನಡುವೆ ಪೈಪೋಟಿ ಚುರುಕುಗೊಂಡಿದೆ.

    ಹಾವೇರಿ ನಗರಸಭೆ ಒಟ್ಟು 31 ಸದಸ್ಯ ಬಲ ಹೊಂದಿದ್ದು, ನಗರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಆಯ್ಕೆ ಚುನಾವಣೆಯಲ್ಲಿ ಸ್ಥಳೀಯ ಶಾಸಕರು, ಸಂಸದರ ಮತವೂ ಲೆಕ್ಕಕ್ಕೆ ಬರಲಿದೆ. ಹೀಗಾಗಿ, ಅಧ್ಯಕ್ಷ, ಉಪಾಧ್ಯಕ್ಷರಾಯ್ಕೆಯಲ್ಲಿ ನಗರಸಭೆಯ ಒಟ್ಟು ಸದಸ್ಯ ಬಲ 33ಕ್ಕೇರಿಕೆಯಾಗಲಿದೆ. ಬಹುಮತ ಪಡೆಯಲು 17 ಸದಸ್ಯರ ಮ್ಯಾಜಿಕ್ ಸಂಖ್ಯೆಯ ಅನಿವಾರ್ಯತೆಯಿದೆ. 31 ಸದಸ್ಯರಲ್ಲಿ ಕಾಂಗ್ರೆಸ್ 15, ಬಿಜೆಪಿಯ 9, ಪಕ್ಷೇತರ 7 ಸದಸ್ಯರು ಇದ್ದಾರೆ. ಅಧ್ಯಕ್ಷ ಸ್ಥಾನವು ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದರೆ, ಉಪಾಧ್ಯಕ್ಷ ಸ್ಥಾನವು ಹಿಂದುಳಿದ ವರ್ಗ ಅ ಮಹಿಳೆಗೆ ಮೀಸಲಾಗಿದೆ.

    ಗದ್ದುಗೆ ಸಮೀಪ ಕಾಂಗ್ರೆಸ್: ನಗರಸಭೆಯಲ್ಲಿ ಬಹುಮತದ ಸಮೀಪವಿರುವ ಕಾಂಗ್ರೆಸ್ ಪಕ್ಷಕ್ಕೆ ಮ್ಯಾಜಿಕ್ ಸಂಖ್ಯೆ ಮುಟ್ಟಲು ಇಬ್ಬರು ಪಕ್ಷೇತರರ ಬೆಂಬಲ ಪಡೆಯುವುದು ಅನಿವಾರ್ಯವಾಗಿದೆ. ಇದಕ್ಕೆ ಕೈ ಮುಖಂಡರು ವೇದಿಕೆ ಸಿದ್ಧಗೊಳಿಸುತ್ತಿದ್ದಾರೆ. 7 ಪಕ್ಷೇತರ ಸದಸ್ಯರಲ್ಲಿ ಈಗಾಗಲೇ ಒಬ್ಬ ಸದಸ್ಯರನ್ನು ಕಾಂಗ್ರೆಸ್ ಸೆಳೆದುಕೊಂಡಿದೆ. ಇನ್ನೊಬ್ಬ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕಾರ್ಯವನ್ನು ಚುರುಕುಗೊಳಿಸಿದೆ.

    ಕಮಲಕ್ಕೂ ಇದೇ ಚಾನ್ಸ್: ಸ್ಥಳೀಯ ಶಾಸಕರು ಹಾಗೂ ಸಂಸದರು ಬಿಜೆಪಿಯವರೇ ಇರುವುದರಿಂದ ಬಿಜೆಪಿಯ ಸಂಖ್ಯಾಬಲ 11ಕ್ಕೇರಲಿದೆ. ಅಧಿಕಾರ ಗದ್ದುಗೆ ಹಿಡಿಯಲು ಬಿಜೆಪಿಗೆ 6 ಪಕ್ಷೇತರ ಸದಸ್ಯರ ಬೆಂಬಲ ಬೇಕು. ಆದರೆ, ಇಷ್ಟು ಸಂಖ್ಯೆಯಲ್ಲಿ ಪಕ್ಷೇತರ ಸದಸ್ಯರನ್ನು ಸೆಳೆಯುವುದು ಸಾಹಸದ ಕೆಲಸವೇ ಸರಿ. ಆದರೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿರುವುದರಿಂದ ನಗರಸಭೆ ಗದ್ದುಗೆಗೇರಲು ಸ್ವಲ್ಪ ಮಟ್ಟಿನಲ್ಲಿ ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗಿದೆ. ಇಬ್ಬರು ಪಕ್ಷೇತರ ಸದಸ್ಯರು ಈಗಾಗಲೇ ಬಿಜೆಪಿ ಜತೆ ಕೈಜೋಡಿಸಿದ್ದಾರೆ. ಇನ್ನುಳಿದ ನಾಲ್ವರ ಮನವೊಲಿಸಲು ಆಕಾಂಕ್ಷಿ ಅಭ್ಯರ್ಥಿಗಳು ಹರಸಾಹಸ ನಡೆಸಿದ್ದಾರೆ.

    ಉಪಾಧ್ಯಕ್ಷ ಸ್ಥಾನ: ಉಪಾಧ್ಯಕ್ಷ ಸ್ಥಾನವು ಹಿಂದುಳಿದ ಅ ವರ್ಗ ಮಹಿಳೆಗೆ ಮೀಸಲಾಗಿದೆ. ನಗರಸಭೆಯ 31 ವಾರ್ಡ್​ಗಳಲ್ಲಿ 3 ವಾರ್ಡ್​ಗಳು (15, 25, 26ನೇ ವಾರ್ಡ್​ಗಳು) ಹಿಂದುಳಿದ ಅ ವರ್ಗ ಮಹಿಳೆಗೆ ಮೀಸಲಾಗಿದ್ದವು. ಈ ಮೂರೂ ವಾರ್ಡ್​ಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು ಕಾಂಗ್ರೆಸ್ ಅಭ್ಯರ್ಥಿಗಳು ಸೋಲು ಕಂಡಿದ್ದಾರೆ. ಹೀಗಾಗಿ, ಉಪಾಧ್ಯಕ್ಷ ಸ್ಥಾನಕ್ಕೆ ಕೈನಲ್ಲಿ ಅಷ್ಟೊಂದು ಪೈಪೋಟಿಯಿಲ್ಲ. ಆದರೆ, ಸಾಮಾನ್ಯ ಮಹಿಳಾ ಸ್ಥಾನದಲ್ಲಿ ಗೆದ್ದು ಅ ವರ್ಗದ ಮೀಸಲಾತಿ ಹೊಂದಿರುವ ಇಬ್ಬರು ಸದಸ್ಯರಿದ್ದು, ಅವರು ಉಪಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸುವುದು ನಿಶ್ಚಿತವಾಗಿದೆ.

    ಸಂಜೀವಕುಮಾರ ಕೈ ಅಭ್ಯರ್ಥಿ

    ನಗರಸಭೆ ಅಧ್ಯಕ್ಷ ಸ್ಥಾನವು ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವುದರಿಂದ ಕಾಂಗ್ರೆಸ್​ನಿಂದ ಹಿಂದಿನ ಅವಧಿಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಸಂಜೀವಕುಮಾರ ನೀರಲಗಿ ಒಬ್ಬರೇ ಆಕಾಂಕ್ಷಿಯಾಗಿದ್ದಾರೆ. ನೀರಲಗಿ ಅವರು ಸತತ 2ನೇ ಬಾರಿಗೆ ನಗರಸಭೆಗೆ ಆಯ್ಕೆಯಾಗಿದ್ದಾರೆ. ಹಿಂದಿನ ಅವಧಿಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಸ್ವಭಾವದವರಾಗಿದ್ದಾರೆ. ಮಾಜಿ ಸಚಿವರಾದ ರುದ್ರಪ್ಪ ಲಮಾಣಿ, ಬಸವರಾಜ ಶಿವಣ್ಣನವರ ಆಪ್ತರಾಗಿದ್ದಾರೆ. ಹೀಗಾಗಿ, ಕೈ ಪಾಳಯ ಸಂಜೀವಕುಮಾರ ನೀರಲಗಿ ಅವರನ್ನು ಅಭ್ಯರ್ಥಿಯನ್ನಾಗಿಸುವುದು ಖಚಿತವಾಗಿದೆ. ಪಕ್ಷೇತರರು ಬೆಂಬಲ ಸೂಚಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

    ಬೆಳವಡಿ ಬಸಣ್ಣನಿಂದಲೂ ಪೈಪೋಟಿ

    20ನೇ ವಾರ್ಡ್​ನಿಂದ ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಬಸವರಾಜ (ಬಸಣ್ಣ) ಬೆಳವಡಿ ಬಿಜೆಪಿ ಜತೆ ಕೈ ಜೋಡಿಸಿದ್ದು, ಅವರನ್ನು ಅಧ್ಯಕ್ಷ ಸ್ಥಾನಕ್ಕೇರಿಸಲು ಬಿಜೆಪಿಯು ಉತ್ಸುಕತೆ ತೋರಿದೆ. ಬಿಜೆಪಿ ಟಿಕೆಟ್ ಸಿಗದೇ ಬಸವರಾಜ ಬೆಳವಡಿ ಜತೆ ಕೆಲವರು ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಅವರಲ್ಲಿ ಒಂದಿಬ್ಬರು ಬಸಣ್ಣ ಅಧ್ಯಕ್ಷರಾದರೆ ನಾವು ಬೆಂಬಲಿಸುತ್ತೇವೆ ಎಂಬ ಮೌಖಿಕ ಸಂದೇಶವನ್ನು ಬಿಜೆಪಿ ವರಿಷ್ಠರಿಗೆ ರವಾನಿಸಿದ್ದಾರೆ. ಹೀಗಾಗಿ, ಬಸಣ್ಣ ಅಖಾಡಕ್ಕಿಳಿದರೆ ಮ್ಯಾಜಿಕ್ ಸಂಖ್ಯೆಯಲ್ಲಿ ಪವಾಡ ನಡೆಯುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.

    ಟೂರ್ ಭಾಗ್ಯ

    ಕಾಂಗ್ರೆಸ್​ನ 15 ಹಾಗೂ ಮೂವರು ಪಕ್ಷೇತರರ ಸದಸ್ಯರೊಂದಿಗೆ ಕಾಂಗ್ರೆಸ್​ನ ಟೀಂ ಈಗಾಗಲೇ ಅನ್ಯ ಜಿಲ್ಲೆಗಳತ್ತ ಪ್ರವಾಸ ತೆರಳಿದೆ. ಅ. 31ರಂದು ಮತದಾನದ ವೇಳೆಗೆ ಅವರು ಮರಳಿ ಬರಲಿದ್ದಾರೆ ಎಂದು ತಿಳಿದುಬಂದಿದೆ.

    ಈಗಾಗಲೇ ಒಮ್ಮೆ ಸದಸ್ಯನಾಗಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದೇನೆ. ಈ ಅನುಭವದ ಆಧಾರದಲ್ಲಿ ಪಕ್ಷದ ಹಿರಿಯರು ಅವಕಾಶ ಕೊಡುವ ನಿರೀಕ್ಷೆಯಿದೆ. ಪಕ್ಷದ ವರಿಷ್ಠರು ಕೈಗೊಳ್ಳುವ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ.
    | ಸಂಜೀವಕುಮಾರ ನೀರಲಗಿ, ಕಾಂಗ್ರೆಸ್ ಪಕ್ಷದ ಆಕಾಂಕ್ಷಿ ಅಭ್ಯರ್ಥಿ

    ಬಿಜೆಪಿಯಿಂದ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದು, ವರಿಷ್ಠರಲ್ಲಿಯೂ ಮನವಿ ಮಾಡಿದ್ದೇನೆ. ಪಕ್ಷ ಅಧಿಕಾರಕ್ಕೇರಲು ಪಕ್ಷೇತರರ ಬೆಂಬಲ ಅವಶ್ಯವಿದ್ದು, ವರಿಷ್ಠರು ಪಕ್ಷೇತರರನ್ನು ಮನವೊಲಿಸುವ ಭರವಸೆ ನೀಡಿದ್ದಾರೆ. ಪಕ್ಷದ ನಾಯಕರು ಯಾವ ನಿರ್ಧಾರ ಕೈಗೊಳ್ಳುತ್ತಾರೋ ಅದರಂತೆ ನಡೆದುಕೊಳ್ಳುತ್ತೇನೆ.
    | ಬಸವರಾಜ ಬೆಳವಡಿ, ಬಿಜೆಪಿ ಆಕಾಂಕ್ಷಿ ಅಭ್ಯರ್ಥಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts