More

    ಪಂಪ್‌ಸೆಟ್ ವಿದ್ಯುತ್‌ಗೆ ಆಧಾರ್ ಜೋಡಣೆ ಬೇಡ -ಎಚ್.ಆರ್. ಬಸವರಾಜಪ್ಪ ಹೇಳಿಕೆ -ರೈತ ಸಂಘ ಗ್ರಾಮ ಘಟಕ ಉದ್ಘಾಟನೆ

    ದಾವಣಗೆರೆ: ರೈತರು ಯಾವುದೇ ಕಾರಣಕ್ಕೂ ಪಂಪ್‌ಸೆಟ್ ವಿದ್ಯುತ್‌ಗೆ ಆಧಾರ್ ಕಾರ್ಡ್ ಜೋಡಣೆ ಮಾಡಿಸಬಾರದು ಎಂದು ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷ ಎಚ್.ಆರ್. ಬಸವರಾಜಪ್ಪ ಹೇಳಿದರು.
    ಚನ್ನಗಿರಿ ತಾಲೂಕು ಹಿರೇಕೋಗಲೂರು ಗ್ರಾಮದಲ್ಲಿ ಇತ್ತೀಚೆಗೆ ರೈತ ಸಂಘ ಹಾಗೂ ಹಸಿರುಸೇನೆ ನೂತನ ಗ್ರಾಮ ಘಟಕ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
    ಕೇಂದ್ರ ಸರ್ಕಾರ ವಿದ್ಯುತ್ ಅನ್ನು ಖಾಸಗೀಕರಣ ಮಾಡಲು ಹೊರಟಿದ್ದು ಇದರಿಂದ ಬೆಸ್ಕಾಂ ಕಂಪನಿ ಕೈ ತಪ್ಪಲಿದೆ. ಸಂಬಂಧಿಸಿದ ಅಧಿಕಾರಿಗಳು ವಿದ್ಯುತ್‌ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸುವಂತೆ ಪ್ರತಿದಿನ ಮನೆ ಬಾಗಿಲಿಗೆ ಬಂದು ಪೀಡಿಸುತ್ತಿದ್ದಾರೆ. ಯಾರೂ ಮಾಡಿಸಬೇಡಿ ಎಂದು ತಿಳಿಸಿದರು.
    ರೈತರು ಬೆಳೆದ ಬೆಳೆಗಳನ್ನು ಸರ್ಕಾರವೇ ಖರೀದಿಸಬೇಕು. 10 ಕೆಜಿ ಅಕ್ಕಿಯ ಬದಲಾಗಿ 5 ಕೆಜಿ ಅಕ್ಕಿಯ ಜತೆ ಉತ್ತರ ಕರ್ನಾಟಕದವರಿಗೆ 3 ಕೆ.ಜಿ ಜೋಳ, ದಕ್ಷಿಣ ಕರ್ನಾಟಕದವರಿಗೆ 3 ಕೆಜಿ ರಾಗಿ ಹಾಗೂ 2 ಕೆ.ಜಿ ಸಿರಿಧಾನ್ಯ ಕೊಡಬೇಕು ಎಂದು ಒತ್ತಾಯಿಸಿದರು.
    ಸಂಘದ ರಾಜ್ಯ ಕಾರ್ಯಾಧ್ಯಕ್ಷ ಕುರುವ ಗಣೇಶಪ್ಪ ಮಾತನಾಡಿ, ಬರಗಾಲವೆಂದು ಎದೆಗುಂದಿ ಯಾವೊಬ್ಬ ರೈತರು ಆತ್ಮಹತ್ಯೆಗೆ ಶರಣಾಗಬೇಡಿ. ಎಷ್ಟೇ ಸಾಲ ಇದ್ದರೂ ನಿರಂತರ ಹೋರಾಟದಿಂದ ಸರ್ಕಾರದ ಗಮನಸೆಳೆದು ಸಾಲ ಮನ್ನಾ ಮಾಡಲು ಹೋರಾಟ ನಡೆಸೋಣ ಎಂದು ಹೇಳಿದರು.
    ರಾಜ್ಯ ಉಪಾಧ್ಯಕ್ಷ ಹೊನ್ನೂರು ಮುನಿಯಪ್ಪ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಗ್ರಾಮೀಣರು ಮತ್ತು ರೈತಾಪಿ ವರ್ಗದ ಜನರನ್ನು ಕೇಂದ್ರೀಕರಿಸಿ ಯೋಜನೆಗಳನ್ನು ರೂಪಿಸುತ್ತವೆ. ಆದರೆ, ಯೋಜನೆಗಳ ಪ್ರಯೋಜನವನ್ನು ರೈತರಿಗೆ ತಲುಪಿಸಲು ಮತ್ತು ಸಮಸ್ಯೆ ಆಲಿಸುವಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ದೂರಿದರು.
    ಜಿಲ್ಲಾಧ್ಯಕ್ಷ ಮರುಳಸಿದ್ದಪ್ಪ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಸುಮಾ ಶಿವಕುಮಾರ್, ಜಿಲ್ಲಾ ಕಾರ್ಯಾಧ್ಯಕ್ಷ ಹೊನ್ನೂರು ರಾಜು, ಜಿಲ್ಲಾ ಕಾರ್ಯದರ್ಶಿ ಸಂತೋಷ ನಾಯ್ಕ, ಅಣ್ಣಪ್ಪ ಕಣಿವೆಬಿಳಚಿ, ಮಹಿಳಾ ಘಟಕ ಅಧ್ಯಕ್ಷೆ ಕುಮಧ್ವತಿ, ಹಸಿರುಸೇನೆ ಜಿಲ್ಲಾ ಸಂಚಾಲಕ ಎಂ.ಅಭಿಲಾಷ್, ಚನ್ನಗಿರಿ ತಾಲೂಕು ಅಧ್ಯಕ್ಷ ಮಲ್ಲಾಳ್ ತಿಪ್ಪಣ್ಣ, ಮಾಯಕೊಂಡ ಬೀರಪ್ಪ, ಬಸಮ್ಮ ಕೋಟೆ, ರವಿ ಹಳ್ಳಿ, ಸಂತೋಷ ಮಲಹಾಳ್, ಪ್ರಧಾನ ಕಾರ್ಯದರ್ಶಿ ಮಲ್ಲೇನಳ್ಳಿ ನಾಗರಾಜ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts