More

    ನ್ಯಾಯ ಕೋರಿ ಜಿಲ್ಲಾಡಳಿತ ಭವನದ ಎದುರು ಶಾಸಕಿ ಧರಣಿ

    ಕೋಲಾರ: ಕೆಜಿಎಫ್ ತಾಲೂಕಿನ ಶ್ರೀನಿವಾಸಸಂದ್ರ ಗ್ರಾಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಚುನಾವಣಾಧಿಕಾರಿ ಡಾ.ರಾಮು ಲೋಪ ಎಸಗಿದ್ದು, ಕಾನೂನು ಕ್ರಮ ಕೈಗೊಂಡು ನ್ಯಾಯ ಸಮ್ಮತವಾಗಿ ಚುನಾವಣೆ ನಡೆಸುವಂತೆ ಆಗ್ರಹಿಸಿ ಶಾಸಕಿ ರೂಪಕಲಾ ಶಶಿಧರ್ ಮತ್ತು ಗ್ರಾಪಂ ಸದಸ್ಯರು ಸೋಮವಾರ ಸಂಜೆ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು.

    ರೂಪಕಲಾ ಮಾತನಾಡಿ, ಚುನಾವಣೆ ನ್ಯಾಯಯುತವಾಗಿ ನಡೆದಿಲ್ಲ. ಪಕ್ಷಪಾತ ಮತ್ತು ಅಕ್ರಮ ನಡೆದಿವೆ. ಕಳೆದ 9ರಂದು ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಪ್ರಕ್ರಿಯೆ ರದ್ದುಪಡಿಸಿರುವುದಾಗಿ ಚುನಾವಣಾಧಿಕಾರಿ ರಾಮು ಪ್ರಕಟಿಸಿದ್ದರು. ಸೋಮವಾರ ಚುನಾವಣೆ ನಡೆಸಲು ಸದಸ್ಯರಿಗೆ ನೋಂದಾಯಿತ ಅಂಚೆ ಮೂಲಕ ನೋಟಿಸ್ ಜಾರಿ ಮಾಡಿದ್ದರು. ಆದರೆ ಸದಸ್ಯರಿಗೆ ಸರಿಯಾದ ಮಾಹಿತಿ ನೀಡದೆ ಮುಕ್ತ ಮತ್ತು ನ್ಯಾಯಸಮ್ಮತವಾಗಿ ಚುನಾವಣೆ ನಡೆಸಿಲ್ಲ. ಲೋಪದೋಷ ನಡೆದಿರುವ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದರು.

    ನ್ಯಾಯ ನಿರೀಕ್ಷೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಸದಸ್ಯರೊಂದಿಗೆ ಆಗಮಿಸಿದ್ದೇನೆ. ಚುನಾವಣಾಧಿಕಾರಿ ನೋಟಿಸ್ ಪ್ರಕಾರ ನಡೆದುಕೊಂಡಿಲ್ಲ. ಬೆಳಗ್ಗೆ 11 ಗಂಟೆಯಾದರೂ ನಾಮಪತ್ರ ಸ್ವೀಕರಿಸಲಿಲ್ಲ. ನಂತರ ಚುನಾವಣಾಧಿಕಾರಿ ಹಿಂದಿನ ನಡಾವಳಿ ಮತ್ತು ನೋಟಿಸ್ ಕೊಟ್ಟಿರುವುದನನ್ನು ರದ್ದು ಮಾಡಿರುವುದಾಗಿ ಪ್ರಕಟಿಸಿದ್ದಾರೆ. ಆದರೆ ಕಳೆದ ಭಾರಿ ಚುನಾವಣಾ ಪ್ರಕ್ರಿಯೆಲ್ಲಿನ ಲೋಪದೋಷಗಳಿಂದ ಆಯ್ಕೆಯನ್ನು ಲಾಟರಿ ಮೂಲಕ ಮಾಡಲಾಗಿತ್ತು. ಲೋಪದೋಷಗಳಿಂದ ಕೂಡಿದ್ದ ಅದೇ ಆಯ್ಕೆ ಪ್ರಕಟಿಸಿ ಚುನಾವಣಾ ಅಧಿಕಾರಿ ಹೊರ ನಡೆದರು ಎಂದರು.

    ಪದೇ ಪದೆ ನ್ಯಾಯಕ್ಕಾಗಿ ಬೀದಿಗಿಳಿದು ಹೋರಾಟ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಡಿಸಿ ಡಾ.ಸೆಲ್ವಮಣಿಗೆ ಮನವಿ ಸಲ್ಲಿಸಿದರು. ಚುನಾವಣಾ ಪ್ರಕ್ರಿಯೆಯ ವಿಡಿಯೋ ಮತ್ತು ದಾಖಲೆ ಪರಿಶೀಲಿಸಿ ಎರಡು ದಿನಗಳೊಳಗಾಗಿ ಕ್ರಮಕೈಗೊಳ್ಳುವುದಾಗಿ ಡಿಸಿ ಭರವಸೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts