More

    ನೊಂದ ಮಹಿಳೆಯರ ನೆಚ್ಚಿನ ಸಖಿ

    ಹುಬ್ಬಳ್ಳಿ: ಮಹಿಳಾ ಪೊಲೀಸ್ ಠಾಣೆಯಲ್ಲಿ ಆರಂಭಿಸಲಾಗಿರುವ ‘ಸಖಿ ಒನ್ ಸ್ಟಾಫ್ ಸೆಂಟರ್’ ನೊಂದ ಮಹಿಳೆಯರ ಕಣ್ಣೀರು ಒರೆಸುವ ಕೆಲಸ ಮಾಡುತ್ತಿದೆ. 2 ವರ್ಷಗಳಲ್ಲಿ ಬರೋಬ್ಬರಿ 752 ಕುಟುಂಬಗಳಿಗೆ ಸಾಂತ್ವನ ಹೇಳಿದೆ. ಈ ಮೂಲಕ ನೊಂದ ಮಹಿಳೆಯರ ನೆಚ್ಚಿನ ‘ಸಖಿ’ಯಾಗಿ ಹೊರಹೊಮ್ಮಿದೆ.

    ಕೇಂದ್ರ ಸರ್ಕಾರವು ನಿರ್ಭಯಾ ನಿಧಿ ಯೋಜನೆಯಡಿ 2019ರಲ್ಲಿ ದೇಶದ ಮಹಿಳಾ ಪೊಲೀಸ್ ಠಾಣೆಗಳಲ್ಲಿ ಸಖಿ ಒನ್ ಸ್ಟಾಫ್ ಸೆಂಟರ್​ಗಳನ್ನು ಆರಂಭಿಸಿದೆ. ಹುಬ್ಬಳ್ಳಿ ಸೇರಿ ರಾಜ್ಯದ ಐದು ಮಹಿಳಾ ಪೊಲೀಸ್ ಠಾಣೆಗಳಲ್ಲಿ ಸಖಿ ಕೇಂದ್ರಗಳನ್ನು 2019ರ ಮಾರ್ಚ್ ನಲ್ಲಿ ಆರಂಭಿಸಲಾಗಿದೆ. ಹುಬ್ಬಳ್ಳಿ – ಧಾರವಾಡ ಪೊಲೀಸ್ ಕಮಿಷನರೇಟ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಸಖಿಯ ಮೇಲುಸ್ತುವಾರಿ ನೋಡಿಕೊಳ್ಳುತ್ತದೆ. ಸಂತ್ರಸ್ತ ಮಹಿಳೆಯರು ಮತ್ತು ಮಕ್ಕಳ ನೆರವಿಗಾಗಿ ಇಬ್ಬರು ಆಪ್ತ ಸಂದರ್ಶಕರನ್ನು ನೇಮಿಸಲಾಗಿದೆ.

    ಸಖಿ ಒನ್ ಸ್ಟಾಫ್ ಸೆಂಟರ್​ನಲ್ಲಿ 2019ರಲ್ಲಿ ಒಟ್ಟು 204 ಪ್ರಕರಣಗಳು ದಾಖಲಾಗಿದ್ದವು. ಇದರಲ್ಲಿ 184 ಪ್ರಕರಣಗಳು ಇತ್ಯರ್ಥಗೊಂಡಿವೆ. 2020ರಲ್ಲಿ ಒಟ್ಟು 485 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 446 ಇತ್ಯರ್ಥಗೊಂಡಿವೆ. 2021ರ ಜನವರಿಯಲ್ಲಿ 42 ಪ್ರಕರಣಗಳು ದಾಖಲಾಗಿದ್ದು, 32 ಇತ್ಯರ್ಥಗೊಂಡಿವೆ. 10 ಪ್ರಕರಣಗಳು ಬಾಕಿ ಇದೆ. ಫೆಬ್ರವರಿಯಲ್ಲಿ (ಈವರೆಗೆ) 21 ಪ್ರಕರಣಗಳು ದಾಖಲಾಗಿದ್ದು, 17 ಪ್ರಕರಣಗಳು ಇತ್ಯರ್ಥಗೊಂಡಿವೆ.

    ಒಂದೇ ಸೂರಿನಡಿ ಕಾನೂನು, ವೈದ್ಯಕೀಯ ನೆರವು ನೀಡುವುದು ಈ ಕೇಂದ್ರದ ಉದ್ದೇಶವಾಗಿದೆ. ಮಾನಸಿಕ ಮತ್ತು ದೈಹಿಕ ದೌರ್ಜನ್ಯ, ನಿಂದನೆ, ಲೈಂಗಿಕ ಕಿರುಕುಳ, ಹಲ್ಲೆ ಮತ್ತಿತರ ಸಮಸ್ಯೆಗಳಿಗೆ ತುತ್ತಾದ ಮಹಿಳೆಯರಿಗೆ ಸಖಿ ನೆರವಾಗುತ್ತಿದೆ. ಸಾಮಾಜಿಕ ಕಾರ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಸಮಾಲೋಚಕರು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಲ್ಲಿ ಪರಿಹಾರ ಕೇಳಿಬರುವ ಮಹಿಳೆಯರಿಗೆ ಮೂರು ಹಂತಗಳಲ್ಲಿ ಆಪ್ತ ಸಮಾಲೋಚನೆ ನಡೆಸುತ್ತಾರೆ. ಒಂದೇ ದಿನದಲ್ಲಿ ಹಲವು ಪ್ರಕರಣಗಳನ್ನು ಇತ್ಯರ್ಥಗೊಳಿಸಿದ ಉದಾಹರಣೆಗಳೂ ಇವೆ.

    ಹೀಗಿದೆ ಸಹಾಯಹಸ್ತ: ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ಸಖಿ ಕೆಲಸ ನಿರ್ವಹಿಸುತ್ತದೆ. ವರದಕ್ಷಿಣೆ ಕಿರುಕುಳ, ವಿಚ್ಛೇದನ, ಅತ್ಯಾಚಾರ, ಲೈಂಗಿಕ ಕಿರುಕುಳ, ಅನೈತಿಕ ಸಂಬಂಧ , ಗಂಡ ಹಾಗೂ ಗಂಡನ ಮನೆಯವರಿಂದ ಕಿರುಕುಳ, ಕಚೇರಿಯಲ್ಲಿ ಕಿರುಕುಳ ಮುಂತಾದ ಪ್ರಕರಣಗಳಲ್ಲಿ ಸಹಾಯ ಕೋರಿ ಬರುವವರಿಗೆ ಸಖಿ ಸಾಂತ್ವನ ಹೇಳುತ್ತದೆ. ಅಗತ್ಯ ಕಾನೂನು ಸಲಹೆ, ಸಹಕಾರ ನೀಡುತ್ತದೆ.

    ತಾಯಿ- ಮಕ್ಕಳ ಬದುಕಿಸಿದ್ದ ಸ್ನೇಹಿತೆ !: ಲಾಕ್​ಡೌನ್ ಸಂದರ್ಭದಲ್ಲಿ ನಗರದ ಕುಡುಕ ಗಂಡನೊಬ್ಬ ಕಂಠಪೂರ್ತಿ ಕುಡಿದು ಬಂದು ಹೆಂಡತಿ ಮೇಲೆ ಹಲ್ಲೆ ಮಾಡಿ ರಂಪಾಟ ಮಾಡಿದ್ದ. ಆತನ ಕಾಟ ತಾಳಲಾರದೇ ಆತನ ಹೆಂಡತಿ ಮೂವರು ಪುಟ್ಟ ಮಕ್ಕಳೊಂದಿಗೆ ಮಹಿಳಾ ಠಾಣೆಯ ಸಖಿ ಕೇಂದ್ರಕ್ಕೆ ರಾತ್ರಿ 9 ಗಂಟೆಗೆ ಬಂದಿದ್ದಳು. ಆಕೆಯ ಕಷ್ಟ ಆಲಿಸಿದ ಸಖಿ ಸಿಬ್ಬಂದಿ ಆಕೆಯನ್ನು ಮನೆಗೆ ವಾಪಸ್ ಕಳುಹಿಸದೇ ನವನಗರದ ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಿದ್ದರು. ಆ ರಾತ್ರಿಯೇ ಆಕೆಯ ಕುಡುಕ ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಹೆಂಡತಿ, ಮಕ್ಕಳಿಗೆ ವಿಷ ಹಾಕಿ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಆತ ಯೋಚಿಸಿದ್ದ ಎಂಬುದು ನಂತರ ತಿಳಿದಿತ್ತು. ಈ ರೀತಿ ಸಖಿ ತಾಯಿ- ಮಕ್ಕಳ ಜೀವ ಉಳಿಸಿದ ಆಪ್ತ ಸ್ನೇಹಿತೆಯಾಗಿದೆ.

    ನೊಂದ ಮಹಿಳೆಯರಿಗೆ ಸಾಂತ್ವನ ಹೇಳುತ್ತೇವೆ. ಅವರ ಕುಟುಂಬದವರನ್ನು ಕರೆಸಿ ತಿಳಿವಳಿಕೆ ನೀಡಿ ಅವರ ಜೀವನ ಹೊಂದಾಣಿಕೆ ಮಾಡುವ ಕೆಲಸವನ್ನು ಮಾಡುತ್ತೇವೆ.
    | ರಾಮಚಂದ್ರ ಕಟ್ಟಿಮನಿ ಸಮಾಲೋಚಕ

    ಗೆಳೆತನ ಹೆಚ್ಚಲು ಬೇಕು ಸೌಲಭ್ಯ: ಸಖಿ ಒನ್ ಸ್ಟಾಫ್ ಸೆಂಟರ್​ನಲ್ಲಿ ಇಬ್ಬರು ಆಪ್ತ ಸಮಾಲೋಚಕರು, ಇಬ್ಬರು ವಕೀಲರು, ಒಬ್ಬರು ವೈದ್ಯರು ಇರಬೇಕು ಎಂಬ ನಿಯಮವಿದೆ. ಆದರೆ, ಸದ್ಯ ಇಬ್ಬರು ಆಪ್ತ ಸಮಾಲೋಚಕರನ್ನು ಮಾತ್ರ ನೇಮಿಸಲಾಗಿದೆ. ಹಾಲುಣಿಸುವ ತಾಯಂದಿರಿಗಾಗಿ ಪ್ರತ್ಯೇಕ ಕೊಠಡಿ, ಮಕ್ಕಳಿಗೆ ಆಟಿಕೆ ಸಾಮಾನುಗಳು, ಅಗತ್ಯವಿದ್ದಲ್ಲಿ ಮಹಿಳೆಯರಿಗೆ ಆಶ್ರಯ ನೀಡಬೇಕೆಂಬ ನಿಯಮವಿದೆ. ಇಷ್ಟೆಲ್ಲ ಸೌಲಭ್ಯಗಳನ್ನು ಒದಗಿಸುವ ಮೂಲಕ ಸಖಿ ಮಹಿಳೆಯರಿಗೆ ಮತ್ತಷ್ಟು ಆಪ್ತೆಯಾಗಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts