More

    ನೆರೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಿ – ರಂಭಾಪುರಿ ಜಗದ್ಗುರು

    ಹುಕ್ಕೇರಿ (ಬೆಳಗಾವಿ): ಕಳೆದ ವರ್ಷ ಹಾಗೂ ಈ ವರ್ಷವೂ ಅತಿವೃಷ್ಟಿಯಿಂದಾಗಿ ಉತ್ತರ ಕರ್ನಾಟಕದ ಬಹುಭಾಗ ನೆರೆ ಹಾವಳಿಗೆ ತುತ್ತಾಗಿದ್ದು, ಸಂತ್ರಸ್ತರಿಗೆ ಸಕಾಲಕ್ಕೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಒತ್ತಾಯಿಸಿದರು.

    ಹುಕ್ಕೇರಿ ತಾಲೂಕಿನ ಬಡಕುಂದ್ರಿಯ ಹೊಳೆಮ್ಮ ದೇವಸ್ಥಾನದಲ್ಲಿ ನೆರೆ ಸಂತ್ರಸ್ತರಿಗೆ ಮಂಗಳವಾರ ಆಹಾರ ವಿತರಿಸಿ ಮಾತನಾಡಿ, ಅತಿವೃಷ್ಟಿಯಿಂದ ಸಾಕಷ್ಟು ಜನ ಮನೆ ಕಳೆದುಕೊಂಡಿದ್ದಾರೆ. 2019ರಲ್ಲಿ ಹಿರಣ್ಯಕೇಶಿ ನದಿ ಪಾತ್ರದಲ್ಲಿ ನೆರೆ ಹಾವಳಿ ಹೆಚ್ಚಾಗಿ ನದಿ ಪಾತ್ರದ ಜನರು ಅಪಾರ ತೊಂದರೆ ಅನುಭವಿಸಬೇಕಾಯಿತು. ಆ ನೋವು ಮರೆಯುವ ಮುನ್ನ ಮತ್ತೆ ನೆರೆ ಆವರಿಸಿದೆ. ಪ್ರಕೃತಿ ಮುನಿಸಿಕೊಂಡರೆ ಯಾರೂ ಏನೂ ಮಾಡಲಾಗದು. ಹೀಗಾಗಿ ಸರ್ಕಾರ ಸಂಭವಿಸಿರುವ ಪ್ರವಾಹ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಅರ್ಹ ಫಲಾನುಭವಿಗಳಿಗೆ ಅಗತ್ಯ ಸವಲತ್ತು ದೊರೆಯಬೇಕು ಎಂದು ಹೇಳಿದರು.

    ಬೆಲ್ಲದ ಬಾಗೇವಾಡಿ ಅರ್ಬನ್ ಬ್ಯಾಂಕ್ ಅಧ್ಯಕ್ಷ ಪವನ ಕತ್ತಿ ಮಾತನಾಡಿ, ಭಕ್ತರು ಸಂಕಷ್ಟದಲ್ಲಿದ್ದಾಗ ಸ್ಪಂದಿಸಿ ಸಾಂತ್ವನ ಹೇಳುವುದರ ಜತೆಗೆ ಬದುಕಿನ ಭರವಸೆ ತುಂಬುವುದು ನಮ್ಮ ನೆಲದ ಸಂಸ್ಕೃತಿ. ಆ ನಿಟ್ಟಿನಲ್ಲಿ ರಂಭಾಪುರಿ ಶ್ರೀಗಳು ಸ್ಮರಣೀಯ ಕೆಲಸ ಮಾಡುತ್ತಿದ್ದಾರೆ. ಆ ಮೂಲಕ ರಾಜ್ಯಾದ್ಯಂತ ಮನೆಮಾತಾಗಿದ್ದಾರೆ ಎಂದರು.

    ಹುಕ್ಕೇರಿ ಶ್ರೀ ಗುರುಶಾಂತೇಶ್ವರ ಹಿರೇಮಠದ ಚಂದ್ರಶೇಖರ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಅರ್ಚಕ ಎಚ್.ಎಲ್. ಪೂಜೇರಿ, ಮಹಾವೀರ ಉದ್ಯೋಗ ಸಮೂಹ ಸಂಸ್ಥೆ ಅಧ್ಯಕ್ಷ ಮಹಾವೀರ ನಿಲಜಗಿ, ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆ ಅಧ್ಯಕ್ಷ ಅಶೋಕ ಪಾಟೀಲ, ಸತ್ತೆಪ್ಪ ನಾಯಿಕ, ಅಕ್ಷರ ದಾಸೋಹ ಇಲಾಖೆ ಅಧಿಕಾರಿ ಶ್ರೀಶೈಲ ಹಿರೇಮಠ ಇತರರಿದ್ದರು.

    ಬಿಎಸ್‌ವೈ ಸಮರ್ಥ ನಾಯಕ: ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ದಿನದಿಂದ ಅನೇಕ ರೀತಿಯ ಸಂಕಷ್ಟಗಳನ್ನು ಎದುರಿಸಿದರು. ಕರೊನಾ, ಪ್ರವಾಹ ಸೇರಿದಂತೆ ಇನ್ನಿತರ ಸಂದಿಗ್ಧ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಯಡಿಯೂರಪ್ಪ ಅವರು ಕ್ಲಿಷ್ಟಕರ ಸಮಸ್ಯೆಗಳನ್ನು ಸಮಯೋಚಿತ ನಿರ್ಧಾರಗಳ ಮೂಲಕ ಬಗೆ ಹರಿಸಿದ್ದಾರೆ. ಮುಂಬರುವ ಮುಖ್ಯಮಂತ್ರಿಯೂ ಎಲ್ಲರ ಪ್ರೀತಿ, ವಿಶ್ವಾಸ ಗಳಿಸಿ ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಾರೆಂಬ ವಿಶ್ವಾಸವಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಹೇಳಿದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts