More

    ನೆರೆ ಸಂತ್ರಸ್ತರಿಗೆ ಶಾಶ್ವತ ಪರಿಹಾರ ನೀಡಿ


    ಗದಗ: ಮಲಪ್ರಭಾ ಹಾಗೂ ಬೆಣ್ಣೆಹಳ್ಳ ಪಾತ್ರದ ಜನರು ಪ್ರತಿವರ್ಷ ಪ್ರವಾಹಕ್ಕೆ ಸಿಲುಕಿಕೊಳ್ಳುತ್ತಿದ್ದು, ಜಿಲ್ಲೆಯ ನೆರೆ ಸಂತ್ರಸ್ಥರಿಗೆ ಶಾಶ್ವತ ಪರಿಹಾರ ಕಲ್ಪಿಸುವತ್ತ ಅಧಿಕಾರಿಗಳು ಹೆಚ್ಚು ಗಮನಹರಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ತಿಳಿಸಿದರು.

    ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲೆಯ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ವಿಡಿಯೋ ಕಾನ್ಪರೆನ್ಸ್​ನ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ಪ್ರತಿ ವರ್ಷ ಪ್ರವಾಹಕ್ಕೆ ಒಳಗಾಗುವ ಗ್ರಾಮಗಳನ್ನು ಗುರುತಿಸಿ ಶಾಶ್ವತ ಪರಿಹಾರ ಕಲ್ಪಿಸುವುದರ ಜತೆಗೆ ಇದರಿಂದಾಗುವ ನಷ್ಟವನ್ನು ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಪ್ರವಾಹದಿಂದ ಮುಳುಗಡೆಯಾಗಿರುವ ರೈತರ ಕೃಷಿ ಹಾಗೂ ತೋಟಗಾರಿಕೆ ಜಮೀನುಗಳ ಬೆಳೆ ಹಾನಿ ಕುರಿತು ಜಂಟಿ ಸಮೀಕ್ಷೆ ಕಾರ್ಯ ಜರಗುತ್ತಿದ್ದು ಈ ಸಮೀಕ್ಷೆಯಲ್ಲಿ ತಹಸೀಲ್ದಾರರು ಪಾಲ್ಗೊಂಡು ನಿಖರವಾದ ಸಮೀಕ್ಷೆ ಜರುಗಿಸಿ ಶೀಘ್ರ ವರದಿ ನೀಡಬೇಕು ಎಂದು ಸೂಚಿಸಿದರು.

    ಪ್ರಸಕ್ತ ಸಾಲಿನ ಬೆಳೆ ಸಮೀಕ್ಷಾ ಕಾರ್ಯ ಕೈಗೊಳ್ಳಲು ರೈತರಿಗೆ ಮೊಬೈಲ್ ಆಪ್ ಮೂಲಕ ಅವಕಾಶ ಒದಗಿಸಲಾಗಿದ್ದು ಈ ಕುರಿತು ರೈತರಲ್ಲಿ ಅಗತ್ಯ ಜಾಗೃತಿ ಮೂಡಿಸಿ ಯಾವುದೇ ರೈತ ಬೆಳೆ ಸಮೀಕ್ಷೆಯಿಂದ ವಂಚಿತರಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಕೃಷಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಕೋವಿಡ್ ಕೇರ್ ಕೇಂದ್ರಗಳಿಗೆ ತಹಸೀಲ್ದಾರರು ಆಗಾಗ ಭೇಟಿ ನೀಡಿ ಅಗತ್ಯ ಮೂಲ ಸೌಕರ್ಯಗಳ ಕುರಿತು ಪರಿಶೀಲಿಸಬೇಕು. ನಿಯಮಿತವಾಗಿ ಕೋವಿಡ್ ಕೇರ್ ಕೇಂದ್ರಗಳಲ್ಲಿರುವ ಪ್ರತಿಯೊಬ್ಬರ ಆರೋಗ್ಯ ತಪಾಸಣೆ ನಡೆಸಬೇಕು ಎಂದು ತಾಲೂಕು ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಆನಂದ ಕೆ. ಮಾತನಾಡಿ, ಕೋವಿಡ್ ಕೇರ್ ಸೆಂಟರ್​ನಲ್ಲಿ ಸೋಂಕಿತರಿಗೆ ನಿಯಮಾನುಸಾರ ಚಿಕಿತ್ಸೆ ನೀಡಿ, ಗುಣಮುಖರಾದ ತಕ್ಷಣ ಬಿಡುಗಡೆ ಮಾಡಬೇಕು. ಅಲ್ಲದೆ, ಆರೈಕೆ ಕೇಂದ್ರಗಳಲ್ಲಿ ಸೋಂಕಿತರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿ ಕೊಡಬೇಕು ಎಂದರು.

    ಅಪರ ಜಿಲ್ಲಾಧಿಕಾರಿ ಸತೀಶಕುಮಾರ ಎಂ., ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಎಸ್.ಎನ್. ರುದ್ರೇಶ, ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತ ಮನ್ಸೂರ್ ಅಲಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ ಬಸರಿಗಿಡದ ಉಪಸ್ಥಿತರಿದ್ದರು.

    ಜಿಲ್ಲೆಯಲ್ಲಿ ಯೂರಿಯಾ ರಸಗೊಬ್ಬರದ ಕೃತಕ ಅಭಾವ ಸೃಷ್ಟಿಸುವವರ ಹಾಗೂ ಅನಧಿಕೃತವಾಗಿ ದಾಸ್ತಾನು ಮಾಡುವವರ ಮೇಲೆ ನಿಗಾವಹಿಸಿ ರಸಗೊಬ್ಬರ ಹಂಚಿಕೆ ಸಂದರ್ಭದಲ್ಲಿ ನೂಕು ನೂಗ್ಗಲುಗಳಿಗೆ ಆಸ್ಪದೇ ನೀಡದಂತೆ ಕ್ರಮ ವಹಿಸಬೇಕು. ಕೃತಕ ಅಭಾವ ಹಾಗೂ ಅನಧಿಕೃತ ದಾಸ್ತಾನು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.

    | ಎಂ.ಸುಂದರೇಶ ಬಾಬು ಡಿ.ಸಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts