More

    ನೂತನ ಡಿಸಿ ನಿತೇಶ ಪಾಟೀಲ ಅಧಿಕಾರ ಸ್ವೀಕಾರ

    ಧಾರವಾಡ: ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ 2012ರ ಐಎಎಸ್ ಬ್ಯಾಚ್​ನ ನಿತೇಶ ಕಲ್ಲನಗೌಡ ಪಾಟೀಲ ಅವರು ಮಂಗಳವಾರ ನಿರ್ಗಮಿತ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರಿಂದ ಅಧಿಕಾರ ಸ್ವೀಕರಿಸಿದರು.

    ನಿತೇಶ ಪಾಟೀಲ ಅವರು ಮೂಲತಃ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಕೆರೂಟಗಿ ಗ್ರಾಮದವರು. ಎಸ್​ಎಸ್​ಎಲ್​ಸಿವರೆಗೆ ವಿಜಯಪುರದಲ್ಲಿ ವ್ಯಾಸಂಗ ಮಾಡಿದ ಅವರು, ಬೆಂಗಳೂರಿನಲ್ಲಿ ಪಿಯುಸಿ, ಬಳಿಕ ಎನ್​ಐಟಿ ಅಲಹಾಬಾದ್​ನಲ್ಲಿ ಬಿಇ (ಕಂಪ್ಯೂಟರ್ ಸೈನ್ಸ್) ಪದವಿ ಪಡೆದರು. ಕೆಲಕಾಲ ಸಾಫ್ಟ್​ವೇರ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದ ಬಳಿಕ 2012ರಲ್ಲಿ ಯುಪಿಎಸ್​ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಭಾರತೀಯ ಆಡಳಿತ ಸೇವೆಗೆ ಆಯ್ಕೆಯಾದರು. ತರಬೇತಿ ಅವಧಿಯಲ್ಲಿ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಹಾಗೂ ಹಗರಿಬೊಮ್ಮನಹಳ್ಳಿ ತಹಸೀಲ್ದಾರರಾಗಿ ನಂತರ ಶಿವಮೊಗ್ಗ ಜಿಲ್ಲೆ ಸಾಗರದ ಉಪವಿಭಾಗಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಬಳಿಕ ಚಿತ್ರದುರ್ಗ ಜಿಪಂ ಸಿಇಒ ಆಗಿ ಸೇವೆ ಸಲ್ಲಿಸಿ, ವಾಣಿಜ್ಯ ತೆರಿಗೆ ಇಲಾಖೆಯ ಅಪರ ಆಯುಕ್ತರಾಗಿ ಕಾರ್ಯನಿರ್ವಹಿಸಿ ಈಗ ಧಾರವಾಡ ಜಿಲ್ಲಾಧಿಕಾರಿ ಹುದ್ದೆಗೆ ವರ್ಗಾವಣೆಗೊಂಡು ಬಂದಿದ್ದಾರೆ. ನಿರ್ಗಮಿತ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಸರ್ವಶಿಕ್ಷಣ ಅಭಿಯಾನದ ಯೋಜನಾ ನಿರ್ದೇಶಕಿ ಹುದ್ದೆಗೆ ಬೆಂಗಳೂರಿಗೆ ವರ್ಗವಾಗಿದ್ದು, ನಿತೇಶ ಪಾಟೀಲ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

    ಜಿಲ್ಲಾಧಿಕಾರಿ ವರ್ಗಾವಣೆ ಸರಿಯಲ್ಲ: ಕರೊನಾ ಹಾವಳಿ ಸೇರಿ ಜಿಲ್ಲೆಯಲ್ಲಿ ಸಂಭವಿಸಿದ ಘಟನೆಗಳನ್ನು ಸಮರ್ಥವಾಗಿ ನಿಭಾಯಿಸಿದ ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರನ್ನು ಈ ಸಂದರ್ಭದಲ್ಲಿ ವರ್ಗಾವಣೆ ಮಾಡಿರುವ ಸರ್ಕಾರದ ಕ್ರಮ ಸರಿಯಲ್ಲ ಎಂದು ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ ದೂರಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ದೀಪಾ ಚೋಳನ್ ಅವರು ಜಿಲ್ಲಾಧಿಕಾರಿಯಾಗಿ ಧಾರವಾಡಕ್ಕೆ ಆಗಮಿಸಿದ ನಂತರ ಕಚೇರಿಯಲ್ಲಿ ಶಿಸ್ತು, ಕೆಲಸದ ಸಮಯ ಪಾಲನೆ, ಜಿಲ್ಲಾಡಳಿತದ ಹಿಡಿತ, ಜನರಿಗೆ ಸ್ಪಂದನೆ, ಕರೊನಾ ಹಾವಳಿ ಮಧ್ಯೆಯೂ ಪಿಯುಸಿ ಪರೀಕ್ಷೆ ಯಶಸ್ವಿಗೊಳಿಸಿ, ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸೂಕ್ತ ವ್ಯವಸ್ಥೆ ಮಾಡಿದ್ದಾರೆ. ಜಿಲ್ಲೆಯ ಅಭಿವೃದ್ಧಿಗಾಗಿ ಕೆಲಸ ಮಾಡಿದ ಉತ್ತಮ ಅಧಿಕಾರಿಯನ್ನು ಕರೊನಾ ಮಹಾಮಾರಿ ಹತೋಟಿಗೆ ಬರುವವರೆಗೆ ಇಲ್ಲಿಯೇ ಮುಂದುವರಿಸಬೇಕಿತ್ತು ಎಂದು ಅಭಿಪ್ರಾಯಪಟ್ಟದ್ದಾರೆ.

    ನಿರ್ಗಮಿತ ಡಿಸಿ ದೀಪಾ ಚೋಳನ್​ಗೆ ಸನ್ಮಾನ: ಧಾರವಾಡ ಜಿಲ್ಲಾಧಿಕಾರಿ ಹುದ್ದೆಯಿಂದ ವರ್ಗಾವಣೆಗೊಂಡು ಸರ್ವ ಶಿಕ್ಷಣ ಅಭಿಯಾನ ನಿರ್ದೇಶಕರಾಗಿ ತೆರಳುತ್ತಿರುವ ದೀಪಾ ಚೋಳನ್ ಅವರನ್ನು ಹುಬ್ಬಳ್ಳಿ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಮಂಗಳವಾರ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೀಪಾ ಚೋಳನ್ ಅವರು 2 ವರ್ಷ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಕ್ಲಿಷ್ಟ ಸನ್ನಿವೇಶಗಳನ್ನು ಸಮರ್ಥವಾಗಿ ನಿಭಾಯಿಸಿದ ಹೆಗ್ಗಳಿಕೆ ಇವರದ್ದಾಗಿದೆ. ಧಾರವಾಡ ಕುಮಾರೇಶ್ವರ ಬಡಾವಣೆಯ ಕಟ್ಟಡ ದುರಂತ, ಪ್ರವಾಹ ಪರಿಸ್ಥಿತಿ ನಿರ್ವಹಣೆ ಇದಕ್ಕೆ ಉದಾಹರಣೆ ಎಂದರು. ಶಾಸಕರಾದ ಅರವಿಂದ ಬೆಲ್ಲದ, ಶಂಕರ ಪಾಟೀಲ ಮುನೇನಕೊಪ್ಪ, ಪ್ರದೀಪ ಶೆಟ್ಟರ್, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಇತರರಿದ್ದರು.

    ಸಾಕಷ್ಟು ಜನಪರ ಕೆಲಸ ಮಾಡಿದ್ದಾರೆ: ಧಾರವಾಡ ಜಿಲ್ಲಾಧಿಕಾರಿಯಾಗಿ ಕೆಲಸ ನಿರ್ವಹಿಸಿ ವರ್ಗಾವಣೆಗೊಂಡ ದೀಪಾ ಚೋಳನ್ ಅವರು ಕಳೆದ 2 ವರ್ಷಗಳ ಅವಧಿಯಲ್ಲಿ ಸಾಕಷ್ಟು ಜನಪರ ಕೆಲಸ ಮಾಡಿದ್ದಾರೆ ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಪ್ರಶಂಸೆ ವ್ಯಕ್ತಪಡಿಸಿದೆ. ಮಂಗಳವಾರ ಹುಬ್ಬಳ್ಳಿಯಲ್ಲಿ ಅವರನ್ನು ಭೇಟಿ ಮಾಡಿದ ಸಂಸ್ಥೆಯ ಅಧ್ಯಕ್ಷ ಮಹೇಂದ್ರ ಲದ್ದಡ ಹಾಗೂ ಉಪಾಧ್ಯಕ್ಷ ವಿನಯ ಜವಳಿ ಅಭಿನಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts