More

    ನೀರೆರಚಿ ಸಂಭ್ರಮಿಸಿದ ಕೋಟೆನಗರಿಯ ಜನ

    ಚಿತ್ರದುರ್ಗ: ಹಿಂದುಗಳ ಪವಿತ್ರ ಹಬ್ಬ ಯುಗಾದಿಯನ್ನು ಕೋಟೆನಗರಿ ಸೇರಿ ಜಿಲ್ಲಾದ್ಯಂತ ಉತ್ಸಾಹಭರಿತರಾಗಿ ಸ್ವಾಗತಿಸಿದ ಹಲವರು, ಸಂಪ್ರದಾಯದಂತೆ ಚಂದ್ರದರ್ಶನ ಪಡೆದ ಮರುದಿನ ನೀರೆರಚುವ ಆಟದಲ್ಲಿ ಉಲ್ಲಾಸದಿಂದ ಪಾಲ್ಗೊಂಡು ಸಂಭ್ರಮಿಸಿದರು.

    ಗುರುವಾರ ನಗರದ ವಿವಿಧ ಬಡಾವಣೆಗಳಲ್ಲಿ ಚಿಣ್ಣರು, ನಾರಿಯರು, ಯುವಕ-ಯುವತಿಯರು ಪರಸ್ಪರ ನೀರು ಎರಚಿ ಸಡಗರದಲ್ಲಿ ತೇಲಾಡಿ, ಕುಣಿದು ಹರ್ಷೋದ್ಗಾರ ವ್ಯಕ್ತಪಡಿಸಿದರು. ಹೊಸದಾಗಿ ನೆಂಟರಾದವರು ಅದರಲ್ಲೂ ಅತ್ತೆ, ಮಾವ, ಅಳಿಯ, ಸೊಸೆಯಂದಿರು ಹೆಚ್ಚಾಗಿ ಪಾಲ್ಗೊಳ್ಳುವುದೇ ಈ ಆಚರಣೆಯ ವಿಶೇಷ.

    ಜೋಗಿಮಟ್ಟಿ, ಕಬೀರಾನಂದಾಶ್ರಮ, ಹೊಳಲ್ಕೆರೆ, ಗೋಪಾಲಪುರ, ಧರ್ಮಶಾಲಾ ರಸ್ತೆ, ದೊಡ್ಡಪೇಟೆ, ಚಿಕ್ಕಪೇಟೆ, ಕೆಳಗೋಟೆ, ಕೋಳಿ ಬುರುಜನಹಟ್ಟಿ, ಬುರುಜನಹಟ್ಟಿ, ಮುನ್ಸಿಪಲ್, ದರ್ಜೆ ಕಾಲನಿ, ಗಾರೆಹಟ್ಟಿ, ಫಿಲ್ಟರ್ ಹೌಸ್, ಕೋಟೆ ಮಾರ್ಗ ಸೇರಿ ಗ್ರಾಮೀಣ ಭಾಗಗಳಲ್ಲೂ ಜನ ಬೆಳಗ್ಗೆ 8ರಿಂದ ಮಧ್ಯಾಹ್ನ 1ರವರೆಗೂ ನೀರೆರಚುವ ಆಟದಲ್ಲಿ ಮಗ್ನರಾಗಿದ್ದರು.

    ಸುಣ್ಣದ ಗುಮ್ಮಿ, ಕರುವಿನಕಟ್ಟೆ ವೃತ್ತ, ಉಜ್ಜಯಿನಿ ಮಠದ ರಸ್ತೆ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಯುವಸಮೂಹ ನೀರೆರಚುವ ಆಟದಲ್ಲಿ ತೊಡಗಿದ್ದರು. ನೆರೆಹೊರೆಯ ಮನೆಯವರಿಗೆ, ಸ್ನೇಹಿತರಿಗೂ ಎರಚಿ ಖುಷಿಪಟ್ಟರು. ದ್ವಿಚಕ್ರ ವಾಹನಗಳಲ್ಲಿ ಸಂಚರಿಸುತ್ತಿದ್ದ ಗೆಳೆಯರನ್ನು ತಡೆದು ನೀರೆರಚಾಡಿದರು. ಜಿಲ್ಲೆಯಲ್ಲಿ ಬರಗಾಲದ ನೀರಿನ ಬವಣೆಯ ನಡುವೆಯೂ ಹಬ್ಬದಾಟ ಹಲವೆಡೆ ಜೋರಾಗಿಯೇ ನಡೆಯಿತು.

    ಯುಗಾದಿ ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿಯೇ ಬರುವ ಕಾರಣ ನೀರೆರಚುವ ಆಟ ಸುಡು ಬಿಸಿಲಿನ ಮಧ್ಯೆ ದೇಹಕ್ಕೆ ತಂಪು ನೀಡಲಿದೆ ಎಂಬ ಉದ್ದೇಶಕ್ಕೆ ಪುರ್ವಜರು ಆಚರಿಸಿಕೊಂಡು ಬಂದಿರಬಹುದು ಎಂಬ ನಂಬಿಕೆಯೊಂದಿಗೆ ಈಗಲೂ ಪ್ರಚಲಿತದಲ್ಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts