More

    ನೀರಿನ ಸಂರಕ್ಷಣೆ ಜಾಗೃತಿ ಕಾರ್ಯಾಗಾರ

    ದಾವಣಗೆರೆ: ಪರಿಸರ ಪ್ರಜ್ಞೆ ಮರೆತಿರುವ ಕಾರಣಕ್ಕೆ ಮಣ್ಣಿನ ಸವಕಳಿ ಮತ್ತು ನೀರಿನ ಕೊರತೆ ಎದುರಾಗುತ್ತಿದೆ. ಮುಂದಿನ ದಿನಗಳಲ್ಲಿ ನಾವು ದುಬಾರಿ ಬೆಲೆ ತೆರುವ ದಿನಗಳು ದೂರವಿಲ್ಲ ಎಂದು ಕತ್ತಲಗೆರೆಯ ಕೃಷಿ ತೋಟಗಾರಿಕೆ ಸಂಶೋಧನಾ ಕೇಂದ್ರದ ವಿಜ್ಞಾನಿ ಸರ್ವಜ್ಞ ಬಿ ಸಾಲಿಮಠ ಆತಂಕ ವ್ಯಕ್ತಪಡಿಸಿದರು.
    ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿವಿ, ಕತ್ತಲಗೆರೆ ಕೇಂದ್ರ ವಿಸ್ತರಣೆ ಶಿಕ್ಷಣ ಘಟಕ , ಕುಕ್ಕುವಾಡದ ಸ್ಥಳೀಯ ಆಂಜನೇಯ ಸ್ವ ಸಹಾಯ ಸಂಘ, ಬಸವೇಶ್ವರ ಪುರುಷ ಸ್ವ ಸಹಾಯ ಸಂಘದ ಸಹಯೋಗದಲ್ಲಿ ತಾಲೂಕಿನ ಹೊನ್ನಮರಡಿ ಗ್ರಾಮದಲ್ಲಿ ವಿಶ್ವ ಪರಿಸರ ದಿನ ಅಂಗವಾಗಿ ಶುಕ್ರವಾರ ರೈತರಿಗೆ ಹಮ್ಮಿಕೊಂಡಿದ್ದ ಮಣ್ಣು ಮತ್ತು ನೀರಿನ ಸಂರಕ್ಷಣೆ -ಜಾಗೃತಿ ಕಾರ್ಯಾಗಾರದಲ್ಲಿ ಮಾತನಾಡಿದರು.
    ಹೊಲ-ತೋಟದ ಸುತ್ತ ಬದುಗಳನ್ನು ಏರಿಸಿ ಮಣ್ಣಿನ ಫಲವತ್ತತೆ ಹೆಚ್ಚಿಸುವ ಹಾಗೂ ಸವಕಳಿ ತಡೆಯುವ ಗಿಡ ಮರಗಳನ್ನು ಬೆಳೆಸಬೇಕು. ಅದರ ಎಲೆಗಳು ಸಾವಯವ ಗೊಬ್ಬರವಾಗಲಿದೆ. ಅಂತರ್ಜಲ ಹೆಚ್ಚಲಿದೆ. ಮಣ್ಣಿನ ಫಲವತ್ತತೆ ಚಿನ್ನದ ಸಮಾನ. ಚಿನ್ನ ಸಿಗಬಹುದು, ಗುಣಮಟ್ಟದ ಮಣ್ಣು ಸಿಗದು. ಈ ಬಗ್ಗೆ ರೈತರು ಜಾಗೃತಿ ವಹಿಸಬೇಕು ಎಂದು ಹೇಳಿದರು.
    ಕತ್ತಲಗೆರೆ ಕೃಷಿ ಸಂಶೋಧನಾ ಕೇಂದ್ರದ ಪ್ರಾಚಾರ್ಯ ಡಾ.ಬಿ.ಎಂ.ಆನಂದಕುಮಾರ್ ಮಾತನಾಡಿ ಭದ್ರಾ ಅಚ್ಚುಕಟ್ಟು ಪ್ರದೇಶದ ಭತ್ತದ ಗದ್ದೆಗಳಲ್ಲಿ ಯಥೇಚ್ಛ ನೀರು ಪೋಲು ಮಾಡಬಾರದು. ಒಂದೆರಡು ಇಂಚು ನೀರು ನಿಂತರೆ ಸಾಕು, ಅದನ್ನು ಸರಿಯಾಗಿ ನಿರ್ವಹಣೆ ಮಾಡಿದಲ್ಲಿ ಕೊನೆ ಭಾಗದ ರೈತರು ಸಹ ವಿವಿಧ ಬೆಳೆಗಳನ್ನು ಬೆಳೆಯಬಹುದು ಎಂದರು.
    ಕಡಿಮೆ ಖರ್ಚಿನಲ್ಲಿ ಮಳೆ ನೀರು, ಕೊಳವೆಬಾವಿ ಜಲ ಮರುಪೂರಣ ಮಾಡುವ ವಿಭಿನ್ನ ರೀತಿಯ ಸರಳ ಪದ್ಧತಿಯನ್ನು ರೈತರೇ ಅಳವಡಿಸಿ ಕೊಳ್ಳಬಹುದು ಎಂದು ಹೇಳಿದರು.
    ಕಾರ್ಯಾಗಾರದಲ್ಲಿ ಭಾಗಿಯಾದ ರೈತರು, ಮಹಿಳೆಯರಿಗೆ ಹಲಸಿನ ಹಣ್ಣಿನ ಗಿಡಗಳನ್ನು ವಿತರಿಸಲಾಯಿತು. ಪ್ರಗತಿಪರ ರೈತ ಹೊನ್ನಮರಡಿ ಕೆ.ಎಂ.ಚಂದ್ರಶೇಖರಯ್ಯ ಕಾರ್ಯಕ್ರಮ ಉದ್ಘಾಟಿಸಿದರು.
    ಜಿಲ್ಲಾ ಪ್ರಗತಿಪರ ರೈತ ಪ್ರಶಸ್ತಿ ಪುರಸ್ಕೃತ ಕೆ.ಟಿ.ಚಂದ್ರಶೇಖರ್, ಬೇಸಾಯ ತಜ್ಞ ಡಾ.ಎ.ವೈ.ಹೂಗಾರ್, ಡಾ.ರುದ್ರೇಗೌಡ, ನಿವೃತ್ತ ಸಬ್ ರಿಜಿಸ್ಟ್ರಾರ್ ಮಲ್ಲಿಕಾರ್ಜುನಪ್ಪ, ಪ್ರಗತಿಪರ ರೈತ ಎಚ್.ಕೆ. ಮಾಧವ್ ಇದ್ದರು. ಡಾ.ಗಂಗಪ್ಪ ಗೌಡ ಪ್ರಾಸ್ತಾವಿಕ ಮಾತನಾಡಿದರು. ವಿಜ್ಞಾನಿ ಡಾ.ನಿರಂಜನಕುಮಾರ್ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts