More

    ನೀರಿನ ಮೀಟರ್ ಅಳವಡಿಕೆ ಬೇಡ

    ಜಯಪುರ: ಕಡಿಮೆ ನೀರು ಕೊಟ್ಟು ಹೆಚ್ಚು ತೆರಿಗೆ ವಿಧಿಸುವ ಕೇಂದ್ರ ಸರ್ಕಾರದ ಅವೈಜ್ಞಾನಿಕ ಜಲಜೀವನ್ ಮಿಷನ್ ಯೋಜನೆ ಮಲೆನಾಡಿನ ಗ್ರಾಮಗಳಿಗೆ ಅಗತ್ಯವಿಲ್ಲ ಎಂದು ಸಾಮಾಜಿಕ ಹೋರಾಟಗಾರ ಡಿ.ಬಿ.ರಾಜೇಂದ್ರ ಹೇಳಿದರು. ಜಲಜೀವನ್ ಮಿಷನ್ ಯೋಜನೆ ಕಾಮಗಾರಿ ವಿರುದ್ಧ ಮಕ್ಕಿಕೊಪ್ಪ ಗ್ರಾಮಸ್ಥರು ಜಯಪುರ ಗ್ರಾಪಂ ಎದುರು ಸೋಮವಾರ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಮಕ್ಕಿಕೊಪ್ಪ ಬಡಾವಣೆಗಳಲ್ಲಿ ಜಲಜೀವನ್ ಯೋಜನೆ ಕಾಮಗಾರಿಗಾಗಿ ರಸ್ತೆಗಳನ್ನು ಅಗೆದು ಹಾಳುಮಾಡಿದ್ದಾರೆ. ಕಳಪೆ ಗುಣಮಟ್ಟದ ಪೈಪುಗಳನ್ನು ಅಳವಡಿಸಿದ್ದಾರೆ ಎಂದು ಆರೋಪಿಸಿದರು.

    ಜಲಜೀವನ್ ಯೋಜನೆ ಮೂಲಕ ನೀರಿಗೂ ಮೀಟರ್ ಅಳವಡಿಸಿ ಭಾರಿ ತೆರಿಗೆ ಸಂಗ್ರಹಿಸುವ ಯೋಜನೆ ರೂಪಿಸಲಾಗಿದೆ. ಮಲೆನಾಡಿನಲ್ಲಿ ನೀರಿಗೆ ಕೊರತೆ ಇಲ್ಲ. ಮಕ್ಕಿಕೊಪ್ಪದಲ್ಲಿ ಉತ್ತಮ ನೀರಿನ ವ್ಯವಸ್ಥೆ ಇದ್ದರೂ ಅವೈಜ್ಞಾನಿಕ ಯೋಜನೆ ತಂದು ಗ್ರಾಮಸ್ಥರನ್ನು ತೊಂದರೆಗೆ ಸಿಲುಕಿಸುವ ಕೆಲಸವನ್ನು ಜಯಪುರ ಗ್ರಾಪಂ ಮಾಡಿದೆ ಎಂದು ದೂರಿದರು.

    ಗ್ರಾಪಂ ಈ ಹಿಂದಿನ ಬೋರ್ಡ್ ಸೋಲಾರ್ ಯೋಜನೆ ಮೂಲಕ ನೀರಿನ ವ್ಯವಸ್ಥೆಗಾಗಿ 5 ಲಕ್ಷ ರೂ. ಇರಿಸಿದ್ದು, ಈ ಯೋಜನೆ ಅನುಷ್ಠಾನಗೊಳಿಸುವ ಬದಲು ಅವೈಜ್ಞಾನಿಕವಾಗಿ ಜಲಜೀವನ್ ಯೋಜನೆ ಮೂಲಕ ಮೀಟರ್ ಅಳವಡಿಸಿ ಜನರಿಗೆ ಮೋಸ ಮಾಡುತ್ತಿದೆ. ಯಾವ ಕಾರಣಕ್ಕೂ ನೀರಿಗೆ ಮೀಟರ್ ಅಳವಡಿಸಲು ಬಿಡುವುದಿಲ್ಲ ಎಂದರು. ಸ್ಥಳಕ್ಕೆ ಆಗಮಿಸಿದ ಪಿಡಿಒ ಶಿವಕುಮಾರ್, ನೀರಿಗಾಗಿ ಹಾಕಿರುವ ಮೀಟರ್​ಗಳನ್ನು ತೆರವುಗೊಳಿಸಲಾಗುವುದು. ರಸ್ತೆ ಹಾಳು ಮಾಡಿರುವ ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ. ನೀರಿಗಾಗಿ ಸೋಲಾರ್ ಮೋಟಾರ್ ಅಳವಡಿಕೆಗೆ ಮುಂದಿನ ಸಭೆಯಲ್ಲಿ ರ್ಚಚಿಸಲಾಗುವುದು ಎಂದು ತಿಳಿಸಿದ ನಂತರ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts