More

    ನಿಸ್ವಾರ್ಥ, ಪ್ರಾಮಾಣಿಕ ವೈದ್ಯರಾಗಿ ಹೊರಹೊಮ್ಮಿ

    ಚಿತ್ರದುರ್ಗ: ವೈದ್ಯಕೀಯ ವಿದ್ಯಾರ್ಥಿಗಳು ಭವಿಷ್ಯದಲ್ಲಿ ರಾಜ್ಯ, ರಾಷ್ಟ್ರ, ವಿಶ್ವಕ್ಕೆ ಕೀರ್ತಿ ತರುವ ನಿಟ್ಟಿನಲ್ಲಿ ನಿಸ್ವಾರ್ಥ, ಪ್ರಾಮಾಣಿಕ ಸೇವೆ ಸಲ್ಲಿಸುವ ಮೂಲಕ ಉತ್ತಮ ವೈದ್ಯರಾಗಿ ಹೊರಹೊಮ್ಮಬೇಕು ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಸಲಹೆ ನೀಡಿದರು.

    ಚಿತ್ರದುರ್ಗ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಿಂದ ತರಾಸು ರಂಗಮಂದಿರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 2023-24ನೇ ಶೈಕ್ಷಣಿಕ ಸಾಲಿನ ಎಂಬಿಬಿಎಸ್‌ಗೆ ಪ್ರವೇಶ ಪಡೆದ 150 ವಿದ್ಯಾರ್ಥಿಗಳು ವೈಟ್ ಕೋಟ್ ಧರಿಸುವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

    ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಪ್ರತಿ ಸಾವಿರ ಮಂದಿಗೆ ಒಬ್ಬ ವೈದ್ಯರಿರಬೇಕು. ಆದರೆ, ಭಾರತದಲ್ಲಿ 800 ಮಂದಿಗೊಬ್ಬರು ಇದ್ದಾರೆ. ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ 60 ಸಾವಿರ ವಿದ್ಯಾರ್ಥಿಗಳಿಗೆ ವೈದ್ಯಕೀಯ ಕ್ಷೇತ್ರಕ್ಕೆ ಪ್ರವೇಶಾವಕಾಶ ಕಲ್ಪಿಸಿದ್ದಾರೆ ಎಂದು ತಿಳಿಸಿದರು.

    ದೇಶದೊಳಗೆ ವೈದ್ಯಕೀಯ ಸೇವಾ ವೆಚ್ಚ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಇದಕ್ಕೆ ಮೌಲ್ಯಗಳ ಕುಸಿತ, ಸಾಮಾಜಿಕ ಕಳಕಳಿ ಇಲ್ಲದಿರುವುದೇ ಪ್ರಮುಖ ಕಾರಣ. ಯಾವುದೇ ವೃತ್ತಿಯಲ್ಲಿ ನೈತಿಕತೆ ಇರಬೇಕು. ಇಲ್ಲದಿದ್ದರೆ, ಅದಕ್ಕೆ ಗೌರವ ಲಭಿಸಲಾರದು ಎಂದು ಅಭಿಪ್ರಾಯಪಟ್ಟರು.

    ಎಂಎಲ್ಸಿ ಕೆ.ಎಸ್.ನವೀನ್ ಮಾತನಾಡಿ, ರೋಗಿಗಳ ಪ್ರಾಣ ಉಳಿಸುವ ನಿಟ್ಟಿನಲ್ಲಿ ಮಾನವೀಯತೆ, ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದಾಗ ಹೆಸರು, ಕೀರ್ತಿಯ ಜತೆಗೆ ಹಣವೂ ಸಿಗಲಿದೆ. ಯಾರೇ ಆಗಲಿ ಕೇವಲ ಹಣದ ಹಿಂದೆ ಹೋಗಬಾರದು ಎಂದು ಸಲಹೆ ನೀಡಿದರು.

    ಜಿಲ್ಲೆಯ ಜನರ, ಜನಪ್ರತಿನಿಧಿಗಳ ಅನೇಕ ವರ್ಷಗಳ ಹೋರಾಟದ ಫಲವಾಗಿ ಜಿಲ್ಲೆಗೆ ವೈದ್ಯಕೀಯ ಕಾಲೇಜು ಮಂಜೂರಾಗಿದೆ. ಇಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳು ವಿಶ್ವದೆಲ್ಲೆಡೆ ಚಿತ್ರದುರ್ಗದ ಕೀರ್ತಿ ಬೆಳಗಬೇಕು ಎಂದು ಆಶಿಸಿದರು.

    ಸಂಸ್ಥೆಯ ವಿಶೇಷಾಧಿಕಾರಿ ಡಾ.ಬಿ.ವೈ.ಯುವರಾಜ್ ಮಾತನಾಡಿ, ವೈಟ್ ಕೋಟ್ ಎಂಬುದು ವಿದ್ಯಾರ್ಥಿಗಳಿಗೆ ವೈದ್ಯಕೀಯ ವೃತ್ತಿ ಅಂಗೀಕಾರದ ವಿಧಿಯಾಗಿದೆ. ಅಲ್ಲದೆ, ವೃತ್ತಿಗೆ ಪ್ರವೇಶ ಸೂಚಿಸುವ ಸಂಕೇತವಾಗಿದೆ ಎಂದು ಹೇಳಿದರು. ಇದೇ ವೇಳೆ ವೈಟ್ ಕೋಟ್ ಧರಿಸಿದ ವಿದ್ಯಾರ್ಥಿಗಳಿಗೆ ಮಹರ್ಷಿ ಚರಕ ಶಪಥ ಬೋಧಿಸಿದರು.

    ಡಿಎಚ್‌ಒ ಡಾ.ಜಿ.ಪಿ.ರೇಣುಪ್ರಸಾದ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ, ಸಂಸ್ಥೆಯ ಮುಖ್ಯ ಲೆಕ್ಕಾಧಿಕಾರಿ ವಿ.ಮಹೇಶ್, ಉಪನ್ಯಾಸಕರಾದ ಡಾ.ಪ್ರಕಾಶ್, ಡಾ.ಸಾಗರ್, ಡಾ.ಶ್ರೀನಿವಾಸ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts