More

    ನಿಸರ್ಗದ ಮಡಿಲಲ್ಲಿ ವ್ಯಾಯಾಮ!

    ವಿಕ್ರಮ ನಾಡಿಗೇರ ಧಾರವಾಡ
    ನಗರದ ಐತಿಹಾಸಿಕ ಮತ್ತು ನೈಸರ್ಗಿಕ ಪರಂಪರೆ ಪ್ರತಿನಿಧಿಸುವ ಕೆಲಗೇರಿ ಕೆರೆ ನಶಿಸುತ್ತಿದೆ ಎಂಬ ಮಾತು ಕೇಳುತ್ತಲೇ ಇತ್ತು. ಇದೀಗ ಅಭಿವೃದ್ಧಿ ಕಾರ್ಯಗಳ ಮೂಲಕ ಕಾಯಕಲ್ಪ ನೀಡಲು ಸರ್ಕಾರ ಮುಂದಾಗಿದ್ದು, ಕೆಲ ದಿನಗಳಲ್ಲೇ ಕೆರೆಯ ಸಂಪೂರ್ಣ ಚಿತ್ರಣ ಬದಲಾಗಲಿದೆ.
    ಸರ್.ಎಂ. ವಿಶ್ವೇಶ್ವರಯ್ಯ ನಿರ್ವಿುಸಿರುವ ಈ ಕೆರೆ ಸುಮಾರು 170 ಎಕರೆ ಜಾಗದಲ್ಲಿ ಹರಡಿಕೊಂಡಿದೆ. ಕೆಲ ವರ್ಷಗಳ ಹಿಂದೆ ಕೆರೆ ಅಭಿವೃದ್ಧಿ ನಡೆಸಿ ವಾಯು ವಿಹಾರಿಗಳಿಗೆ ವಾಕಿಂಗ್ ಪಾಥ್ ನಿರ್ವಿುಸಲಾಗಿತ್ತು. ಇದೀಗ ಅದನ್ನು ಅಗಲಗೊಳಿಸಿ ಓಪನ್ ಜಿಮ್ ಸ್ಥಾಪಿಸಲಾಗುತ್ತಿದೆ. ಈ ಮೊದಲಿದ್ದ 10 ಅಡಿ ಅಗಲದ ವಾಕಿಂಗ್ ಪಾಥ್ ಅನ್ನು 30 ಅಡಿಗೆ ವಿಸ್ತರಿಸಲಾಗಿದೆ. ಸುಮಾರು 5 ಅಡಿ ಜಾಗದಲ್ಲಿ ಜಿಮ್ ಪರಿಕರ ಅಳವಡಿಕೆ, 4 ಅಡಿಯಲ್ಲಿ ಕಟ್ಟೆ ನಿರ್ವಣ, ಉಳಿದ ಜಾಗೆಯನ್ನು ವಾಯು ವಿಹಾರಕ್ಕೆ ಮೀಸಲಿಡಲಾಗಿದೆ.
    ಅಮೃತ ಯೋಜನೆಯ ಹಸಿರು ವಲಯ ಪ್ರದೇಶ ಅಭಿವೃದ್ಧಿ ಅಡಿ 2.05 ಕೋಟಿ ರೂ. ಅನುದಾನದಲ್ಲಿ ಕಾರ್ಯ ನಡೆದಿದೆ. 2019ರಲ್ಲೇ ಯೋಜನೆ ನೀಲಿನಕ್ಷೆ ಸಿದ್ಧಪಡಿಸಿ ಕೆಲಸ ಆರಂಭಿಸಲಾಗಿತ್ತು. ಆಗ ಕರೊನಾ ಮೊದಲ ಅಲೆ ಜೋರಾಗಿದ್ದ ಕಾರಣ ಕಾಮಗಾರಿ ಸ್ಥಗಿತವಾಗಿತ್ತು. ಈ ಸಮಯದಲ್ಲಿ ಶಾಸಕ ಅರವಿಂದ ಬೆಲ್ಲದ ಯೋಜನೆಯಲ್ಲಿ ಕೆಲ ಬದಲಾವಣೆ ಮಾಡಿ ಹೈಟೆಕ್ ಸ್ಪರ್ಶ ನೀಡಿದ್ದರು. ಬಳಿಕ ಆರಂಭವಾದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಅಂತಿಮ ಸ್ಪರ್ಶ ನೀಡುವ ಕೆಲಸ ನಡೆದಿದೆ. ಕೆಲ ದಿನಗಳಲ್ಲೇ ಜನರ ಬಳಕೆಗೆ ತೆರೆದುಕೊಳ್ಳಲಿದೆ.
    ಕೆರೆ ದಂಡೆ ಮೇಲೆ ವಾಯು ವಿಹಾರ ನಡೆಸುವ ಜನರ ವ್ಯಾಯಾಮಕ್ಕೆ ಕೆಲ ಪರಿಕರಗಳ ಜತೆಗೆ ಮಕ್ಕಳಿಗಾಗಿ ಆಟಿಕೆ ಸಾಧನಗಳನ್ನೂ ಅಳವಡಿಸಲಾಗಿದೆ.
    ಏನೇನಿದೆ?: ಈ ಜಿಮ್ಲ್ಲಿ ವಯಸ್ಕರ ವ್ಯಾಯಾಮಕ್ಕೆ ಕ್ರಾಸ್ ವಾಕರ್, ಲೆಗ್ ಪ್ರೆಸ್, ಸೈಕಲ್, ಸಿಟೆಡ್ ಚೆಸ್ಟ್ ಪ್ರೆಸ್, ಲೆಗ್ ಆಂಡ್ ಥೈ ಎಕ್ಸರ್​ಸೈಜ್, ಪುಲ್​ಅಪ್ ಚೇರ್ ಸೇರಿ ಇನ್ನೂ ಕೆಲ ಪರಿಕರಗಳನ್ನು 2 ಸೆಟ್​ಗಳಂತೆ ಅಳವಡಿಸಲಾಗಿದೆ. ಮಕ್ಕಳ ಆಟಕ್ಕಾಗಿ ಸೀಸಾ ಡಬಲ್, ಆರ್ಚ್ ಸ್ವಿಂಗ್, ಟು ವೇ ಸ್ಲೈಡ್, ಸ್ಟ್ಯಾಂಡಿಂಗ್ ಮೆರಿಗೋ ರೌಂಡ್, ಡಕ್ ಮೆರಿಗೋ ರೌಂಡ್ ಆಟದ ಪರಿಕರ ಅಳವಡಿಸಲಾಗಿದೆ. ವಾಕಿಂಗ್ ಪಾಥ್​ನಲ್ಲಿ ಸುಸಜ್ಜಿತ ವಿದ್ಯುತ್ ವ್ಯವಸ್ಥೆ, ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ವ್ಯಾಯಾಮದ ಬಳಿಕ ಕಟ್ಟೆ ಮೇಲೆ ಕುಳಿತು ಕೆರೆಯ ಸೌಂದರ್ಯ ಸವಿದು ಮನಸ್ಸು ಆಹ್ಲಾದಕರಗೊಳಿಸಿಕೊಳ್ಳಬಹುದು.
    ಇವುಗಳ ಜತೆಗೆ ಕೆರೆಗೆ ಹೊಲಸು ನೀರು ಸೇರದಂತೆ ಸಹ ಸೂಕ್ತ ವ್ಯವಸ್ಥೆ ಮಾಡಲಾಗುತ್ತಿದೆ. ಹೀಗೆ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕೆರೆ ಅಭಿವೃದ್ಧಿಗೆ ಸರ್ಕಾರ ಮುಂದಾಗಿರುವುದು ಸ್ಥಳೀಯರಲ್ಲಿ ಸಂತಸ ಮೂಡಿಸಿದೆ. ಆದರೆ, ಜನರು ಈ ಸೌಲಭ್ಯವನ್ನು ಎಷ್ಟರ ಮಟ್ಟಿಗೆ ಕಾಪಾಡಿಕೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

    ಜನರೂ ಸಾಥ್ ನೀಡಲಿ: ಜನರ ಬೇಡಿಕೆಯಂತೆ ಸರ್ಕಾರದ ಅನುದಾನದಲ್ಲಿ ಕೆರೆ ಅಭಿವೃದ್ಧಿ ಕಾರ್ಯ ನಡೆಸಲಾಗಿದೆ. ಇದರ ಪ್ರಯೋಜನ ಪಡೆಯುವ ಜನರ ಮೇಲೆ ಅಲ್ಲಿನ ವಸ್ತುಗಳನ್ನು ಕಾಯ್ದುಕೊಂಡು ಹೋಗುವ ಜವಾಬ್ದಾರಿಯೂ ಇದೆ. ಇದರಿಂದ ಇನ್ನಷ್ಟು ಕಡೆಗಳಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ನಡೆಯುವುದಲ್ಲದೆ, ಸರ್ಕಾರದ ಅನುದಾನವೂ ಸದ್ಬಳಕೆಯಾದಂತೆ ಎಂಬುದು ಅಧಿಕಾರಿಗಳ ಮಾತಾಗಿದೆ.</


    ಕೆರೆ ಅಭಿವೃದ್ಧಿ ಕಾರ್ಯ ನಡೆಸುತ್ತಿರುವುದು ಸಂತಸದ ಸಂಗತಿ. ಇದರಿಂದ ಈ ಭಾಗದ ಜನರ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ. ವಯಸ್ಕರು ಹಾಗೂ ಮಕ್ಕಳಿಗೆ ವ್ಯಾಯಾಮ ಮಾಡಲು ಪರಿಕರಗಳನ್ನು ಅಳವಡಿಸಿದ್ದಲ್ಲದೆ, ಕೆರೆಗೆ ಹೊಲಸು ನೀರು ಸೇರದಂತೆ ಸಹ ವ್ಯವಸ್ಥೆ ಮಾಡಿದ್ದಾರೆ.
    | ಶಂಕರ ಕೊಟ್ರಿ, ಸ್ಥಳೀಯ ನಿವಾಸಿ

    ಕೆಲಗೇರಿ ಕೆರೆ ನಮ್ಮ ಭಾಗದ ಐತಿಹಾಸಕ ಕೆರೆಯಾಗಿದೆ. ಧಾರವಾಡದ ಸಂಪತ್ತು ಉಳಿಸಿ ಬೆಳೆಸುವುದರ ಜತೆಗೆ ಜನರಿಗೆ ಪ್ರಯೋಜನವಾಗಲಿ ಎಂಬ ದೃಷ್ಟಿಯಿಂದ ಅಭಿವೃದ್ಧಿ ಪಡಿಸಲಾಗಿದೆ. ವಾಯು ವಿಹಾರಕ್ಕೆ ಕಿರಿದಾದ ಜಾಗೆ ಇತ್ತು. ಈ ಜಾಗವನ್ನು ಅಗಲೀಕರಣ ಮಾಡುವುದರ ಜತೆಗೆ ವ್ಯಾಯಾಮದ ಪರಿಕರಗಳನ್ನು ಅಳವಡಿಸಿ ಜನರಿಗೆ ಅನುಕೂಲ ಕಲ್ಪಿಸಲಾಗಿದೆ.
    | ಅರವಿಂದ ಬೆಲ್ಲದ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts