More

    ನಿವೇಶನ, ವಸತಿ ಕಲ್ಪಿಸುವಂತೆ ಒತ್ತಾಯಿಸಿ ಪ್ರತಿಭಟನೆ

    ಕೊಳ್ಳೇಗಾಲ: ಕೊಡಗು ಜಿಲ್ಲೆ ಪೊನ್ನಂಪೇಟೆಯ ಕಾಫಿ ತೋಟಗಳ ಲೈನ್‌ಮನೆಗಳಲ್ಲಿ ವಾಸಿಸುವ ಆದಿವಾಸಿ ಜನರಿಗೆ ನಿವೇಶನ ಮತ್ತು ವಸತಿಯನ್ನು ಶೀಘ್ರವೇ ಸರ್ಕಾರ ನೀಡಬೇಕೆಂದು ಆಗ್ರಹಿಸಿ ವಿವಿಧ ಪ್ರಗತಿಪರ ಸಂಘಟನೆಗಳು ಮಂಗಳವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದವು.

    ಪಟ್ಟಣದ ಎಸ್.ವಿ.ಕೆ. ಕಾಲೇಜು ಸಮೀಪದ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಪ್ರತಿಭಟನಾಕಾರರು ಮಾಲಾರ್ಪಣೆ ಮಾಡಿದ ಬಳಿಕ ಮಾನವ ಸರಪಳಿ ನಿರ್ಮಿಸಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಅಕ್ರೋಶ ವ್ಯಕ್ತಪಡಿಸಿದರು.

    ನಂತರ ಅಲ್ಲಿಂದ ತಾಲೂಕು ಕಚೇರಿ ಮುಂದೆ ಕುಳಿತು ಕಾಫಿ ತೋಟದ ಲೈನ್ ಮನೆಗಳಲ್ಲಿ ನೂರಾರು ವರ್ಷಗಳಿಂದ ವಾಸವಿರುವ ಜನರಿಗೆ ವಸತಿ, ನಿವೇಶನ ಮೂಲ ಸೌಕರ್ಯ ನೀಡುವಂತೆ ಘೋಷಣೆಗಳನ್ನು ಕೂಗಿದರು. ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಮಂಜುಳಾ ಅವರಿಗೆ ಮನವಿ ಪತ್ರ ಸಲ್ಲಿಸಿದರು.

    ಸ್ವರಾಜ್ ಸಂಘಟನೆ ಶಿವಮ್ಮ ಮಾತನಾಡಿ, ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿರುವ 4700 ಆದಿವಾಸಿ ಬುಡಕಟ್ಟು ಜನರು ಜೀತ ಪದ್ಧತಿಗೆ ಸಿಕ್ಕಿಬಿದ್ದಿದ್ದಾರೆ. ಮಾಡುವ ಕೆಲಸಕ್ಕೆ ಕನಿಷ್ಠ ವೇತನ ಕೂಡ ಸಿಗದೆ. ಕೇವಲ 100 ರಿಂದ 150 ರೂ. ಗಳಿಗೆ ಕೆಲಸ ಮಾಡಬೇಕಿದೆ. ಇನ್ನು ಮಾಲೀಕರಿಂದ ಸಾಲ ಪಡೆದರೆ ಅದನ್ನು ತೀರಿಸಲು ಸಾಧ್ಯವಾಗದೆ ಮನೆಯವರೆಲ್ಲರೂ ಜೀತ ಮಾಡುವ ಪರಿಸ್ಥಿತಿ ಇದೆ. 200 ಕ್ಕೂ ಹೆಚ್ಚು ದಿನದಿಂದ ನಿವೇಶನ, ಮೂಲ ಸೌಕರ್ಯಕ್ಕಾಗಿ ಕಾರ್ಮಿಕರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದರು. ಅಲ್ಲಿನ ಶಾಸಕರು, ಜಿಲ್ಲಾಡಳಿತ ಕ್ಯಾರೆ ಅನ್ನುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ತೋಟದ ಮನೆಯಿಂದಲೂ ಅವರು ಹೊರಗೆ ಬರುವಂತಿಲ್ಲ. ಜನರು ಸಾಲ ಪಡೆದದ್ದಕ್ಕಾಗಿ ಮೂಕರಾಗಿ ದುಡಿಯುತ್ತಿದ್ದಾರೆ. ಆದಿವಾಸಿ ಬುಡಕಟ್ಟು ಜನರು ಎಂಬುದಕ್ಕಾಗಿ ಕಿರುಕುಳ ನೀಡಲಾಗುತ್ತಿದೆ. ಸರ್ಕಾರಕ್ಕೆ ಆ ಜನರ ಮತ ಬೇಕು ವಿನಹ ಅವರ ಯೋಗಕ್ಷೇಮ ಬೇಕಿಲ್ಲ. ಆದ್ದರಿಂದ ಈ ಕೂಡಲೇ ಕಾರ್ಮಿಕರ ಹೋರಾಟಕ್ಕೆ ಸ್ಪಂದಿಸಬೇಕು. ದುಡಿಯುವ ಕೈಗಳಿಗೆ ಸೂಕ್ತ ವೇತನ ಸಿಗಬೇಕು ಎಂದು ಒತ್ತಾಯಿಸಿದರು.

    ದಶರಥ್ ಮಾತನಾಡಿ, ಈ ದೇಶದ ಮೂಲ ನಿವಾಸಿಗಳಿಗೆ ಬದುಕಲು ಬೇಕಾದ ಮೂಲ ಸೌಕರ್ಯವಿಲ್ಲ. ಬೇರೆ ದೇಶದಿಂದ ಬಂದ ಒಡೆಯರಪಾಳ್ಯದ ಟಿಬೇಟಿಯನ್ನರಿಗೆ ನೀಡಿರುವ ಸೌಕರ್ಯ ಕಾಫಿ ತೋಟದಲ್ಲಿ ಕೆಲಸ ಮಾಡುವ ನಮ್ಮ ಜನರಿಗೆ ಯಾಕೇ ಇಲ್ಲ? ಎಂದು ಅಕ್ರೋಶ ವ್ಯಕ್ತಪಡಿಸಿದರು.

    ಸ್ವರಾಜ್ ಸಂಘಟನೆಯ ಕಾರ್ಯಕರ್ತೆ ಶಿವಮ್ಮ, ಕವಿತಾ, ರೈತ ಸಂಘದ ತಾಲೂಕು ಅಧ್ಯಕ್ಷ ಗೌಡೇಗೌಡ, ಕಾಯಂ ಸದಸ್ಯ ಬಸವರಾಜು ಮಧುವನಹಳ್ಳಿ, ರೈತ ಮುಖಂಡ ಅಣಗಳ್ಳಿ ಬಸವರಾಜು, ದಶರಥ, ಪ್ರಗತಿಪರ ಸಂಘಟನೆಯ ಸಂಚಾಲಕ ದಿಲೀಪ್ ಸಿದ್ದಪ್ಪಾಜಿ, ನಿಂಗರಾಜು ಶಂಕನಪುರ, ಕದಂಬ ಅಂಬರೀಷ್, ಮುಡಿಗುಂಡ ನಿಂಗರಾಜು, ಸರಗೂರು ಮಹದೇವ, ಚಂದ್ರಮ್ಮ, ಮಹದೇವಮ್ಮ, ಭಾಗ್ಯ, ಸುಂದ್ರಮ್ಮ ಮತ್ತಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts