More

    ನಿರ್ಲಕ್ಷೃದಿಂದ ಕಸ ವಿಲೇವಾರಿಗೆ ಜಾಗ ಅಲಭ್ಯ

    ಶನಿವಾರಸಂತೆ: ಶನಿವಾರಸಂತೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ಮಾಸಿಕ ಸಭೆ ಅಧ್ಯಕ್ಷೆ ಫರ್ಜಾನ್ ಶಾಹಿದ್ ಖಾನ್ ಅಧ್ಯಕ್ಷತೆಯಲ್ಲಿ ಶುಕ್ರವಾರ ಜರುಗಿತು.


    ಸದಸ್ಯರಾದ ಸರ್ದಾರ್ ಆಹಮ್ಮದ್, ಎಸ್.ಎನ್.ರಘು, ಕೆ.ಎ.ಆದಿತ್ಯ ಅವರು ಮಾತನಾಡಿ, ಐದಾರು ವರ್ಷಗಳ ಹಿಂದೆಯೇ ಜಿಲ್ಲಾಧಿಕಾರಿ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಟ್ಟಣದ ಕಸ ವಿಲೇವಾರಿಗಾಗಿ ಸ್ಥಳ ಮಂಜೂರು ಮಾಡಿಕೊಟ್ಟಿದ್ದರು.ಆದರೆ ಕಸ ವಿಲೇವಾರಿ ಮಾಡುವ ಸ್ಥಳದಲ್ಲಿ ಗ್ರಾಪಂನಿಂದ ಕಸ ವಿಲೇವಾರಿಗೆ ಸಂಬಂಧಪಟ್ಟ ಕಾಮಗಾರಿ ಮಾಡುವ ಸಂದರ್ಭ ಅಲ್ಲಿನ ಸ್ಥಳೀಯರು ಕಸ ವಿಲೇವಾರಿ ಮಾಡಬಾರದೆಂದು ಅಡ್ಡಿ ಮಾಡುತ್ತಿರುವ ಬಗ್ಗೆ ಈ ಹಿಂದೆಯೇ ಸಭೆಯಲ್ಲಿ ಚರ್ಚಿಸಲಾಗಿತ್ತು ಹಾಗೂ ಪೊಲೀಸರಿಗೆ ಗ್ರಾಪಂನಿಂದ ದೂರು ನೀಡುವಂತೆಯೂ ತೀರ್ಮಾನಿಸಲಾಗಿತು. ಆದರೆ ಈಗ ಅಲ್ಲಿನ ಸ್ಥಳೀಯರು ಕಾಮಗಾರಿಗೆ ಅಡ್ಡಿಪಡಿಸುತ್ತಿರುವ ಬಗ್ಗೆ ಅಧ್ಯಕ್ಷರು ಮತ್ತು ಪಿಡಿಒ ಆಡಳಿತ ಮಂಡಳಿ ಸದಸ್ಯರ ಗಮನಕ್ಕೆ ತಂದಿಲ್ಲ, ಇದಕ್ಕೆ ಅಧ್ಯಕ್ಷರ ನಿರ್ಲಕ್ಷ್ಯವೇ ಕಾರಣವಾಗಿದೆ ಎಂದು ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡರು.


    ಸರ್ಕಾರ ಮತ್ತು ಅಧಿಕಾರಿಗಳ ಮಟ್ಟದಲ್ಲಿ ಕಸ ವಿಲೇವಾರಿ ಮಾಡಲು ಸ್ಥಳ ಗುರುತಿಸಿಕೊಟ್ಟಿದೆ. ಹೀಗಿರುವಾಗ ಕಸ ವಿಲೇವಾರಿ ಮಾಡಲು ಅಲ್ಲಿನವರು ಅಡ್ಡಿಪಡಿಸುವುದು ಕಾನೂನು ಉಲ್ಲಂಘನೆಯಾಗುತ್ತದೆ. ಈ ನಿಟ್ಟಿನಲ್ಲಿ ಪೊಲೀಸ್ ಬಂದೋಬಸ್ತ್‌ನಲ್ಲಿ ಕಸ ವಿಲೇವಾರಿ ಸ್ಥಳದಲ್ಲಿ ಕಾಮಗಾರಿ ಕಾರ್ಯ ಪೂರ್ಣಗೊಳಿಸುವಂತೆ ಸಭೆಯಲ್ಲಿ ನಿರ್ಣಯಿಸಲಾಯಿತು.


    ಗ್ರಾಪಂನಿಂದ ನಡೆಯುವ ವಿಶೇಷ ಅಭಿವೃದ್ದಿ ಕಾಮಗಾರಿ ಕಾರ್ಯ ಸಂದರ್ಭ ವಿಶೇಷ ತುರ್ತು ಸಭೆಯನ್ನು ನಡೆಸಬೇಕು, ಪ್ರತಿ ವಾರ್ಡಿನ ಸದಸ್ಯರ ವ್ಯಾಪ್ತಿಯಲ್ಲಿ ನಡೆಯುವ ಅಭಿವೃದ್ಧಿ ಕಾಮಗಾರಿ ಸಂದರ್ಭದಲ್ಲಿ ಸಂಬಂಧಪಟ್ಟ ಸದಸ್ಯರ ಸಮ್ಮುಖದಲ್ಲಿ ಕಾಮಗಾರಿ ಕಾರ್ಯಕ್ಕೆ ಚಾಲನೆ ನೀಡುವ ನಿಯಮವನ್ನು ಪಾಲಿಸಿದರೆ ಗ್ರಾಪಂ ಅಭಿವೃದ್ಧಿ ಹೊಂದುವುದರ ಜತೆಯಲ್ಲಿ ಕಾಮಗಾರಿ ಬಗ್ಗೆ ಮಾಹಿತಿ ಮತ್ತು ದಾಖಲಾತಿಯೂ ಆಗುತ್ತದೆ ಎಂದು ಸದಸ್ಯರಾದ ಸರ್ದಾರ್ ಆಹಮ್ಮದ್, ಶರತ್‌ಶೇಖರ್ ಪಿಡಿಒ ಮೇದಪ್ಪ ಅವರಿಗೆ ಸಲಹೆ ನೀಡಿದರು.


    ಈ ಹಿಂದಿನ ಮಾಸಿಕ ಸಭೆಯಲ್ಲಿ ಪಟ್ಟಣದ ಕೆಆರ್‌ಸಿ ವೃತ್ತದಲ್ಲಿರುವ ಗ್ರಾಪಂನಿಂದ ನಿರ್ಮಿಸಿದ ವಾಣಿಜ್ಯ ಸಂಕೀರ್ಣದ ಮಳಿಗೆಗೆ ಬಾಡಿಗೆ ಹಣವನ್ನು ಪಾವತಿಸದೆ ಬಾಕಿ ಮಾಡಿರುವ ವರ್ತಕನಿಗೆ ಬಾಕಿ ಮಾಡಿರುವ ಬಾಡಿಗೆ ಹಣವನ್ನು ಪಾವತಿಸಲು ನೋಟಿಸ್ ನೀಡುವಂತೆ ಸಭೆಯಲ್ಲಿ ನಿರ್ಣಯಿಸಲಾಗಿತು. ಈ ವಿಚಾರವಾಗಿ ನಡೆದ ಚರ್ಚೆಯಲ್ಲಿ ವಿಷಯ ಪ್ರಸ್ತಾಪಿಸಿದ ಶರತ್‌ಶೇಖರ್ ಮತ್ತು ಇತರರು, ಮಳಿಗೆ ಬಾಡಿಗೆದಾರ ಇನ್ನು ಬಾಕಿ ಮಾಡಿರುವ ಹಣವನ್ನು ಪಾವತಿಸದಿರುವುದರಿಂದ ಕಾನೂನಿನಂತೆ ಗ್ರಾಪಂನಿಂದ ಆ ಮಳಿಗೆಯನ್ನು ಹರಾಜು ಪ್ರಕ್ರಿಯೆ ನಡೆಸುವಂತೆ ಪಿಡಿಒಗೆ ಸೂಚಿಸಿದರು.


    ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಾಯಂ ವೈದ್ಯರನ್ನು ನೀಮಿಸುವ ಬಗ್ಗೆ ಗ್ರಾಪಂ ನಿಯೋಗ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ನೀಡುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.


    ಪಟ್ಟಣದ ಬೈಪಾದಸ್ ರಸ್ತೆಯಲ್ಲಿರುವ ಐಬಿಗೆ ಸೇರಿದ ಜಾಗದ 75 ಸೆಂಟ್ ಜಾಗದಲ್ಲಿ ಕೆಎಸ್‌ಆರ್‌ಟಿ ಬಸ್ ನಿಲ್ದಾಣ ನಿರ್ಮಿಸುವ ಬಗ್ಗೆ ಈ ಹಿಂದೆಯೇ ಗ್ರಾಪಂ ನಿರ್ಣಯ ಕೈಗೊಳ್ಳಲಾಯಿತು.


    ಈ ವಿಚಾರಕ್ಕೆ ಸಂಬಂಧಪಟ್ಟಂತೆ ಚರ್ಚೆ ನಡೆಯಿತು. ರಾಷ್ಟ್ರೀಯ ಹಬ್ಬಗಳ ಸಮಿತಿಯನ್ನು ರಚಿಸಿ ಶಾಲಾ-ಕಾಲೇಜು, ಸಂಘ, ಸಂಸ್ಥೆಗಳ ಪದಾಧಿಕಾರಿಗಳ ಸಭೆಯನ್ನು ಶೀಘ್ರದಲ್ಲೆ ಕರೆಯುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.

    ಸಭೆಯಲ್ಲಿ ಗ್ರಾಪಂ ಉಪಾಧ್ಯಕ್ಷ ಎಸ್.ಆರ್.ಮಧು, ಸದಸ್ಯರಾದ ಎಸ್.ಎನ್.ರಘು, ಶರತ್‌ಶೇಖರ್, ಸರ್ದಾರ್ ಆಹಮ್ಮದ್, ಗೀತ ಹರೀಶ್, ಸರೋಜಶೇಖರ್, ಸರಸ್ವತಿ, ಎನ್.ಎ.ಆದಿತ್ಯಗೌಡ, ಕಾವೇರಿ, ಪಿಡಿಒ ಮೇದಪ್ಪ, ಕಾರ್ಯದರ್ಶಿ ದೇವರಾಜ್, ಗ್ರಾಪಂ ಸಿಬ್ಬಂದಿ ವಸಂತ್, ಲೀಲಾ, ಪೌಜಿಯಾ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts