More

    ನಿರ್ಮಾಣ ಕಾಮಗಾರಿಗೆ ಹಿನ್ನಡೆ

    ಸುಭಾಸ ಧೂಪದಹೊಂಡ ಕಾರವಾರ

    ಜನತಾ ಕರ್ಫ್ಯೂ ಸಂದರ್ಭದಲ್ಲೂ ನಿರ್ಮಾಣ ಕಾಮಗಾರಿಗಳಿಗೆ ಸರ್ಕಾರ ಅವಕಾಶ ನೀಡಿದೆ. ಜತೆಗೆ ನಿರ್ಮಾಣ ಸಾಮಗ್ರಿಗಳ ಮಳಿಗೆಗಳನ್ನು ಅಗತ್ಯ ವಸ್ತುಗಳ ಪಟ್ಟಿಯಲ್ಲಿ ಸೇರಿಸಿ ನಿಗದಿತ ಅವಧಿಯಲ್ಲಿ ಅಂಗಡಿ ತೆರೆಯಲು ಸೂಚಿಸಿದೆ. ಆದರೂ, ವಿವಿಧ ಕಾರಣಗಳಿಗೆ ಸರ್ಕಾರಿ ನಿರ್ಮಾಣ ಕಾಮಗಾರಿಗಳಿಗೆ ಹಿನ್ನಡೆ ಉಂಟಾಗಿದೆ.

    ಹೊರ ಊರುಗಳ ಶೇ. 90ರಷ್ಟು ನಿರ್ಮಾಣ ಕಾರ್ವಿುಕರು ಊರು ಸೇರಿದ್ದಾರೆ. ಇದರಿಂದ ಕೆಲಸಗಳು ನಿಧಾನಗತಿಯಲ್ಲಿ ಸಾಗಿವೆ. ಸತತ ಎರಡನೇ ವರ್ಷವೂ ತಾಲೂಕಿನ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಗ್ರಹಣ ಹಿಡಿದಿದೆ. ಕಾರವಾರದಲ್ಲಿ ಸ್ಥಳೀಯ ನಿರ್ಮಾಣ ಕಾರ್ವಿುಕರ ಸಂಖ್ಯೆ ತೀರ ಕಡಿಮೆ ಇದೆ. ಸೆಂಟ್ರಿಂಗ್, ಗಾರೆ ಕೆಲಸ ಮಾಡುವವರು ಸೇರಿ ಹಲ ಕುಶಲ ಕಾರ್ವಿುಕರು ಹಾಗೂ ಅಕುಶಲ ದಿನಗೂಲಿ ಕಾರ್ವಿುಕರು ಉತ್ತರ ಕರ್ನಾಟಕ ಹಾಗೂ ಬೇರೆ ರಾಜ್ಯಗಳಿಂದ ಬರಬೇಕು. ಸ್ಥಳೀಯ ನೋಂದಾಯಿತ ಸರ್ಕಾರಿ ಗುತ್ತಿಗೆದಾರರು ಹಾಗೂ ಬಿಲ್ಡರ್​ಗಳು ಇವರನ್ನೇ ನಂಬಿಕೊಂಡಿದ್ದಾರೆ. 2020ರ ಲಾಕ್​ಡೌನ್​ನಲ್ಲಿ ಸಾಕಷ್ಟು ಕಾರ್ವಿುಕರು ಊರು ಸೇರಿದ್ದರು. ಆಗಸ್ಟ್, ಸೆಪ್ಟೆಂಬರ್ ಹೊತ್ತಿಗೆ ಮತ್ತೆ ಕಾರವಾರಕ್ಕೆ ವಾಪಸಾಗಿದ್ದರು. ಈ ಬಾರಿ ಮತ್ತೆ ಜನತಾ ಕರ್ಫ್ಯೂ ಭಯದಲ್ಲಿ ಕಾರವಾರದಲ್ಲಿದ್ದ ನೂರಾರು ಕಾರ್ವಿುಕರು ಕಳೆದ ವಾರ ಸ್ವಂತ ಊರುಗಳಿಗೆ ತೆರಳಿದ್ದಾರೆ. ಇದರಿಂದ ಗುತ್ತಿಗೆದಾರರಿಗೆ ದಿಕ್ಕು ತೋಚದಂತಾಗಿದೆ.

    ಇನ್ನೂ ಹಲವು ಸಮಸ್ಯೆ: ಲೋಕೋಪ ಯೋಗಿ, ನಗರೋತ್ಥಾನ ಸೇರಿ ವಿವಿಧ ಇಲಾಖೆಗಳಡಿ ಕೈಗೊಂಡ ಕಾಮಗಾರಿಗಳ ಕೋಟ್ಯಂತರ ರೂಪಾಯಿ ಬಿಲ್​ಗಳನ್ನು ಗುತ್ತಿಗೆದಾರರಿಗೆ ಪಾವತಿಸುವುದು ಬಾಕಿ ಇದೆ. ಕೋವಿಡ್ ಕಾರಣ ನೀಡಿ ಸರ್ಕಾರ ಅನುದಾನ ಕಡಿತ ಮಾಡಿದೆ. ಕೆಲ ಇಲಾಖೆಗಳಲ್ಲಿ ಅನುದಾನ ಬಂದಿದ್ದರೂ ಅಧಿಕಾರಿಗಳನ್ನು ಕೋವಿಡ್ ಕರ್ತವ್ಯಕ್ಕೆ ನಿಯೋಜಿಸಿದ್ದರಿಂದ ಬಿಲ್ ಮಾಡಲು ಪುರುಸೊತ್ತಿಲ್ಲದ ಪರಿಸ್ಥಿತಿ ಇದೆ. ಇನ್ನು ಕಾಮಗಾರಿ ಮಾಡುತ್ತೇವೆ ಎಂದರೂ ಅಗತ್ಯ ಸಾಮಗ್ರಿಗಳು ಬೇಕಾದ ಸಮಯದಲ್ಲಿ ಸಿಗುತ್ತಿಲ್ಲ. ಸಿಕ್ಕರೂ ಬೆಲೆ ಹೆಚ್ಚಿದೆ. ಇದರಿಂದ ಟೆಂಡರ್ ಪಡೆದ ಗುತ್ತಿಗೆದಾರರು ಸಮಸ್ಯೆ ಎದುರಿಸುತ್ತಿದ್ದಾರೆ.

    ಕಾರವಾರದಲ್ಲಿ ಹೊರ ಊರಿನ ಕಾರ್ವಿುಕರನ್ನೇ ನಾವು ನೆಚ್ಚಿಕೊಂಡಿದ್ದೇವೆ. ಹೆಚ್ಚಿನವರು ಊರಿಗೆ ಹೋಗಿದ್ದು, ಗುತ್ತಿಗೆ ಕಾಮಗಾರಿ ನೆರವೇರಿಸಲು ಸಮಸ್ಯೆಯಾಗಿದೆ. ಕಾರ್ವಿುಕರ ಸಮಸ್ಯೆ ಮಾತ್ರವಲ್ಲ, ಬಿಲ್ ಪಾವತಿ, ನಿರ್ಮಾಣ ಸಾಮಗ್ರಿ ಹೀಗೆ ಹಲವು ತೊಂದರೆ ಇದೆ.
    | ಮಾಧವ ನಾಯ್ಕ ಕಾರವಾರ ತಾಲೂಕು ನೋಂದಾಯಿತ ಗುತ್ತಿಗೆದಾರರ ಸಂಘದ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts