More

    ನಿರುದ್ಯೋಗಿಗಳಿಗೆ ವಿಶ್ವಾಸ ಅಗತ್ಯ

    ಗದಗ: ಉದ್ಯೋಗಾಕಾಂಕ್ಷಿಗಳು ಕೀಳರಿಮೆ ತೊರೆದು ಆತ್ಮವಿಶ್ವಾಸ ರೂಢಿಸಿಕೊಂಡು ಕೆಲಸದ ಬಗ್ಗೆ ಆಸಕ್ತಿ ಹೊಂದಬೇಕು ಎಂದು ಶಾಸಕ ಎಚ್.ಕೆ. ಪಾಟೀಲ ಹೇಳಿದರು.

    ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಜಿಲ್ಲಾಡಳಿತ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಉದ್ಯೋಗ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ನಿರುದ್ಯೋಗಿಗಳು ಎಂದೂ ಮಾನಸಿಕ ಸ್ಥೈರ್ಯ ಕಳೆದುಕೊಳ್ಳಬಾರದು. ಧನಾತ್ಮಕ ಚಿಂತನೊಂದಿಗೆ ಉದ್ಯೋಗಕ್ಕಾಗಿ ಪ್ರಯತ್ನಿಸಬೇಕು. ಉದ್ಯೋಗಮೇಳವು ಉದ್ಯೋಗದಾತರನ್ನು ಕರೆತಂದು ನಿರುದ್ಯೋಗ ಪರಿಹರಿಸುವ ಪ್ರಕ್ರಿಯೆ ಆಗಿದೆ. ಕುಶಲತೆಗೆ ಬೆಂಬಲ ಹಾಗೂ ಯುವ ಕೈಗಳಿಗೆ ಬಲ ನೀಡುತ್ತದೆ ಎಂದು ಹೇಳಿದರು.

    ಗದಗ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿನ ಯುವಜನರಿಗೆ ಉದ್ಯೋಗ ಮೇಳದ ಮೂಲಕ ಹೊಸ ಉತ್ಸಾಹ ತುಂಬುವ ಪ್ರಯತ್ನ ಮಾಡಲಾಗುತ್ತಿದ್ದು ಯುವಜನರು ಇದರ ಸದುಪಯೋಗ ಪಡೆಯಬೇಕು ಎಂದರು.

    ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸರ್ಕಾರಿ ನೌಕರಿಗಾಗಿ ಕಾಯದೆ ಖಾಸಗಿ ಕ್ಷೇತ್ರಗಳಲ್ಲಿಯೂ ಸೇವೆ ಸಲ್ಲಿಸಲು ಯುವಕರು ಸನ್ನದ್ಧರಾಗಿರಬೇಕು ಎಂದು ಹೇಳಿದರು.

    ಜಿಪಂ ಸದಸ್ಯ ವಾಸಣ್ಣ ಕುರಡಗಿ, ಅಪರ ಜಿಲ್ಲಾಧಿಕಾರಿ ಸತೀಶಕುಮಾರ ಎಂ, ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರುದ್ರೇಶ, ಗದಗ ತಹಸೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ, ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತ ಮನ್ಸೂರ ಅಲಿ, ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಮಲ್ಲೂರ ಬಸವರಾಜ ಹಾಗೂ ವಿವಿಧ ಖಾಸಗಿ ಕಂಪನಿಗಳ ಉದ್ಯೋಗದಾತರು, ಉದ್ಯೋಗಾಕಾಂಕ್ಷಿಗಳು ಇದ್ದರು.

    ಜಿಲ್ಲಾ ಉದ್ಯೋಗಾಧಿಕಾರಿ ತನುಜಾ ರಾಮಪೂರೆ ಸ್ವಾಗತಿಸಿದರು. ಈರಮ್ಮ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ದತ್ತಪ್ರಸನ್ನ ಪಾಟೀಲ ನಿರೂಪಿಸಿದರು. ಅಮರೇಶ ವಂದಿಸಿದರು.

    3 ಸಾವಿರಕ್ಕೂ ಹೆಚ್ಚು ನೋಂದಣಿ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಎರಡು ದಿನಗಳ ಜಿಲ್ಲಾ ಮಟ್ಟದ ಉದ್ಯೋಗ ಮೇಳದಲ್ಲಿ 71ಕ್ಕೂ ಹೆಚ್ಚು ಕಂಪನಿಗಳು ನೋಂದಣಿಯಾಗಿವೆ. ಸುಮಾರು ಮೂರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಆನ್​ಲೈನ್ ಮೂಲಕ ಹೆಸರು ನೋಂದಾಯಿಸಿದ್ದಾರೆ. ಮೊದಲ ದಿನ 1069 ಪುರುಷರು, 608 ಮಹಿಳೆಯರು ಸೇರಿ 1677 ಜನರು ಮೇಳದಲ್ಲಿ ಭಾಗವಹಿಸಿದ್ದರು. ಮೊದಲ ದಿನದಲ್ಲಿ 281 ಪುರುಷರು, 53 ಮಹಿಳೆಯರು ಆಯ್ಕೆಯಾಗಿದ್ದಾರೆ. ಸೋಮವಾರ ಕೂಡ ಮೇಳ ನಡೆಯಲಿದೆ. ಮೇಳದಲ್ಲಿ ಜೆಎಸ್​ಡಬ್ಲು ಸ್ಟೀಲ್ ಲಿ., ಹೊಂಡಾ ಮೋಟಾರ್ ಸೈಕಲ್, ಸನ್ ಬ್ರೖೆಟ್ ಸೋಲೂಷನ್ಸ್, ಜೆಕೆ ಟೈರ್, ವಾತ್ಸಲ್ಯ ಆಸ್ಪತ್ರೆ, ಚಿರಾಯು ಕ್ರಿಟಿಕಲ್ ಕೇರ್, ಎಲ್​ಐಸಿ ಇಂಡಿಯಾ, ನೋವೆಲ್ ಗ್ರುಪ್ ಆಪ್ ಕಂಪನಿ, ಆರ್​ಎನ್​ಎಸ್ ಪ್ರೖೆ ಲಿ., ಬಿಟ್ಸ್ ಪ್ರೖೆ ಲಿ., ಅಪೋಲೋ ಮೆಡಿಸ್ಕಿಲ್ಸ್, ಇಂಡಿಯಾ ಮನಿ ಡಾಟ್ ಕಾಂ ಮೊದಲಾದ ಕಂಪನಿಗಳು ಭಾಗವಹಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts