More

    ನಿರಾಶ್ರಿತರಿಗೆ 8 ಕೇಂದ್ರಗಳಲ್ಲಿ ಊಟ, ವಸತಿ

    ಹುಬ್ಬಳ್ಳಿ: ಊಟ, ವಸತಿ ಇಲ್ಲದೆ, ಪರದಾಡುತ್ತಿರುವ ಅನೇಕರು ಇದೀಗ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಬಿಸಿ ನೀರಿನ ಸ್ನಾನದ ಜೊತೆಗೆ ಬೆಳಗಿನ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿಯ ಊಟ ದೊರೆಯುತ್ತಿದೆ. ತಮ್ಮ ಗತಿ ಏನಾದೀತೆಂಬ ಚಿಂತೆಯಲ್ಲಿದ್ದವರಿಗೆ ಧಾರವಾಡ ಜಿಲ್ಲಾಡಳಿತ ವಿವಿಧೆಡೆ 8 ನಿರಾಶ್ರಿತರ ಕೇಂದ್ರ ಆರಂಭಿಸಿರುವುದು ಹೊಸ ಜೀವನ ನೀಡಿದೆ.

    ತಿರುಪತಿ ಮೂಲದ ಒಂದು ಭಿಕ್ಷುಕರ ಕುಟುಂಬ ಹಾಗೂ ಚಿತ್ರದುರ್ಗ ಮೂಲದ ಒಂದು ಕೂಲಿ ಕಾರ್ವಿುಕರ ಕುಟುಂಬ, ನೇಪಾಳದ ವ್ಯಕ್ತಿ ಸೇರಿ ಉತ್ತರ ಪ್ರದೇಶ, ಜಾರ್ಖಂಡ, ಪಶ್ಚಿಮ ಬಂಗಾಳ, ವಿಜಯಪುರ, ರಾಣೆ ಬೆನ್ನೂರ, ಕೊಪ್ಪಳ ಇತರ ಹೊರ ರಾಜ್ಯ ಹಾಗೂ ಜಿಲ್ಲೆಗಳ 327 ಜನರು ನಿರಾಶ್ರಿತ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಈ ಎಲ್ಲ ನಿರಾಶ್ರಿತರಿಗೆ ಇಸ್ಕಾನ್​ನ ಅಕ್ಷಯ ಪಾತ್ರಾದವರು ಬೆಳ ಗಿನ ಉಪಾಹಾರದಲ್ಲಿ ಇಡ್ಲಿ, ಚಟ್ನಿ, ಉಪ್ಪಿಟ್ಟು, ಶಿರಾ, ಮಧ್ಯಾಹ್ನ ಹಾಗೂ ರಾತ್ರಿ ಅನ್ನ ಮತ್ತು ಸಾಂಬಾರ ಒದಗಿಸುತ್ತಿದ್ದಾರೆ. ಇದ ರೊಂದಿಗೆ ಸರ್ಕಾ ರದಿಂದ ಟಾವೆಲ್, ಸೋಪ್, ಕೊಬ್ಬರಿ ಎಣ್ಣೆ, ಟೂಥ್​ಪೇಸ್ಟ್ ಇತರ ಸಾಮಗ್ರಿ ಒದಗಿಸಲಾಗಿದೆ. ಅನೇಕ ಸರ್ಕಾರೇತರ ಸಂಸ್ಥೆಗಳು ಸಹ ಆಹಾರ ಸಾಮಗ್ರಿ, ಬಟ್ಟೆಯನ್ನೂ ಪೂರೈಸುತ್ತಿವೆ. ಘಂಟಿ ಕೇರಿಯ ನಿರಾಶ್ರಿತರ ಕೇಂದ್ರ ಮಾ. 25ರಂದು ಪ್ರಾರಂಭಗೊಂಡಿದ್ದು, ಇನ್ನುಳಿದ ಎಲ್ಲ ಕೇಂದ್ರಗಳು ಮಾ. 29ರಂದು ಪ್ರಾರಂಭಗೊಂಡಿವೆ.

    ರಾಜನಗರ ಕ್ರಿಕೆಟ್ ಮೈದಾನ ಪಕ್ಕದಲ್ಲಿರುವ ಬಾಲಕಿಯರ ವಸತಿ ಕೇಂದ್ರದಲ್ಲಿಯೂ ಮಹಿಳೆಯರಿಗಾಗಿ ಪ್ರತ್ಯೇಕ ವಸತಿ ಕೇಂದ್ರ ಪ್ರಾರಂಭಿಸಲಾಗಿದೆ. ಆದರೆ, ಇದುವರೆಗೆ ಯಾವೊಬ್ಬ ಮಹಿಳೆಯೂ ಇಲ್ಲಿ ಆಶ್ರಯ ಪಡೆದಿಲ್ಲ.

    ಜಾನುವಾರುಗಳಿಗೆ ಆಹಾರ: ಕರೊನಾ ಸೋಂಕು ತಡೆಗೆ ದೇಶಾದ್ಯಂತ ಲಾಕ್​ಡೌನ್ ಮಾಡಲಾಗಿದ್ದು, ಹುಬ್ಬಳ್ಳಿ ನಗರದ ಜೈನ ಸಮುದಾಯದ ಯುವಕರು ಜಾನುವಾರುಗಳಿಗೆ ಆಹಾರ ಒದಗಿಸಿದರು. ಆಹಾರವಿಲ್ಲದೇ ಎಲ್ಲೆಂದರಲ್ಲಿ ಜಾನುವಾರುಗಳು ಓಡಾಡುತ್ತಿವೆ. ಇದನ್ನು ಕಂಡ ಯುವಕರು ವಿವಿಧ ಬಡಾವಣೆಗಳಿಗೆ ತೆರಳಿ ಆಹಾರ ಒದಗಿಸುವುದರ ಮೂಲಕ ಮಾನವೀಯತೆ ಮೆರೆದರು.

    ನಿರಾಶ್ರಿತ ಕೇಂದ್ರದ ವಿವರ: ಹುಬ್ಬಳ್ಳಿಯ ಘಂಟಿಕೇರಿಯ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ, ಹುಬ್ಬಳ್ಳಿ ಶಿರಡಿನಗರದ ಪರಿಶಿಷ್ಟ ವರ್ಗದ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ, ಗಣೇಶಪೇಟ ಹರ್ಷಾ ಕಾಂಪ್ಲೆಕ್ಸ್​ನ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ, ಧಾರವಾಡ ರಂಗಾಯಣ, ಗೋಪನಕೊಪ್ಪದ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ, ಧಾರವಾಡ ಸಪ್ತಾಪುರದ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ, ಅಳ್ನಾವರದ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ, ನವಲಗುಂದದ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ.

    ನಿರಾಶ್ರಿತರ ಕೇಂದ್ರದಲ್ಲಿ ಇದ್ದವರಿಗೆ ನಿತ್ಯ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಎಲ್ಲರಿಗೂ ಅಗತ್ಯ ವಸ್ತುಗಳನ್ನು ಪೂರೈಸಲಾಗಿದೆ. ಪುಸ್ತಕಗಳನ್ನೂ ವಿತರಿಸಲಾಗಿದೆ. ಇಸ್ಕಾನ್​ನವರು ಊಟ, ನಾಸ್ಟಾ ಒದಗಿಸುತ್ತಿದ್ದಾರೆ. ಎನ್​ಜಿಒದವರೂ ನೆರವು ನೀಡುತ್ತಿದ್ದಾರೆ. | ಪುರುಷೋತ್ತಮ ಜಂಟಿ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಧಾರವಾಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts