More

    ನಿಯಮ ಪಾಲಿಸದ ಮಂದಿ

    ಹುಬ್ಬಳ್ಳಿ: ಕರೊನಾ ಸೋಂಕು ಹರಡದಂತೆ ಸರ್ಕಾರ ಹಲವಾರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೂ ಜನರು ನಿಯಮಗಳನ್ನು ಪಾಲಿಸದೇ ಮನಬಂದಂತೆ ಸುತ್ತುತ್ತಿರುವುದು ನಗರದಲ್ಲಿ ಬುಧವಾರ ಕಂಡುಬಂತು.

    ಅಗತ್ಯ ವಸ್ತುಗಳ ಖರೀದಿಗೆ ನೀಡಿದ್ದ ಅವಧಿಯಲ್ಲಿ ದುರ್ಗದಬೈಲ್, ಎಂ.ಜಿ. ಮಾರ್ಕೆಟ್, ಸಿದ್ದೇಶ್ವರ ಕಾಲನಿ, ಕೇಶ್ವಾಪುರ, ಗೋಕುಲ ರಸ್ತೆ, ಹಳೇ ಹುಬ್ಬಳ್ಳಿ ಸೇರಿ ವಿವಿಧೆಡೆ ಜನರು ಪರಸ್ಪರ ಅಂತರ ಮರೆತು ಗುಂಪಾಗಿ ಸೇರಿದ್ದರು.

    ಮಾಸ್ಕ್ ಧರಿಸದೆ, ಪರಸ್ಪರ ಅಂತರ ಮರೆತು ದಿನಸಿ, ತರಕಾರಿ ಖರೀದಿಯಲ್ಲಿ ತೊಡಗಿದ್ದರು. ಮಾಸ್ಕ್ ಧರಿಸಿ, ಪರಸ್ಪರ ಅಂತರ ಕಾಯ್ದುಕೊಳ್ಳುವಂತೆ ಪಾಲಿಕೆ ಸಿಬ್ಬಂದಿ ಮೈಕ್​ಗಳಲ್ಲಿ ಸೂಚನೆ ನೀಡುತ್ತಿದ್ದರೂ, ಸಾರ್ವಜನಿಕರು ಯಾವುದೇ ಎಚ್ಚರಿಕೆ ಮಾತುಗಳನ್ನು ಗಮನಿಸದೇ ಖರೀದಿಯಲ್ಲಿ ತೊಡಗಿದ್ದರು. ಲಾಕ್​ಡೌನ್ ಹಿನ್ನೆಲೆಯಲ್ಲಿ ಮಿನಿ ವಿಧಾನಸೌಧ, ಪಾಲಿಕೆ ಕಚೇರಿಗಳಲ್ಲಿ ಜನ ಸಂಚಾರ ವಿರಳವಾಗಿತ್ತು. ಅನಗತ್ಯವಾಗಿ ಸಂಚರಿಸುತ್ತಿದ್ದ ವಾಹನಗಳನ್ನು ತಡೆದು, ಪೊಲೀಸರು ವಿಚಾರಿಸುತ್ತಿದ್ದರು. ಚನ್ನಮ್ಮ ವೃತ್ತದಲ್ಲಿ ಹಲವು ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡರು.

    ಚನ್ನಮ್ಮ ವೃತ್ತದಲ್ಲಿ ವಾಗ್ವಾದ

    ಚನ್ನಮ್ಮ ವೃತ್ತದಲ್ಲಿ ವಾಹನಗಳನ್ನು ತಪಾಸಣೆ ಮಾಡುತ್ತಿದ್ದ ಸಮಯದಲ್ಲಿ ಧಾರವಾಡದ ವಕೀಲ ಹಾಗೂ ಪೊಲೀಸರ ಮಧ್ಯೆ ವಾಗ್ವಾದ ನಡೆಯಿತು. ವಕೀಲನ ಕಾರು ಚನ್ನಮ್ಮ ವೃತ್ತದಲ್ಲಿ ಬರುತ್ತಿದ್ದಂತೆಯೇ ಪೊಲೀಸರು ತಡೆದಿದ್ದಾರೆ. ಇದರಿಂದ ಅಸಮಾಧಾನಗೊಂಡ ವಕೀಲ, ತಾನು ಧಾರವಾಡದ ವಕೀಲರ ಸಂಘದ ಕಾರ್ಯದರ್ಶಿ ಎಂದು ಅಶೋಕ ದೊಡ್ಡಮನಿ ಎಂದು ಪರಿಚಯಿಸಿಕೊಂಡಿದ್ದಾರೆ. ಸ್ಥಳದಲ್ಲಿದ್ದ ಇತರ ಪೊಲೀಸರು, ವಕೀಲ ದೊಡ್ಡಮನಿ ಅವರನ್ನು ಸಮಾಧಾನ ಮಾಡಿ ಕಳುಹಿಸಿದ್ದಾರೆ.

    ಒಂದೇ ದಿನ 10 ಜನರ ಸಾವು

    ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಬುಧವಾರ 871 ಪ್ರಕರಣಗಳು ಪತ್ತೆಯಾಗಿದ್ದು, 10 ಜನರು ಮೃತಪಟ್ಟಿದ್ದಾರೆ. ಹೀಗೆ ನಿತ್ಯ ಕೋವಿಡ್ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆ ದಾಖಲಾಗುತ್ತಿದ್ದರೂ ಜನರು ಎಚ್ಚೆತ್ತುಕೊಳ್ಳುತ್ತಿಲ್ಲ. ಕೆಲ ಆಸ್ಪತ್ರೆಗಳಲ್ಲಿ ಬೆಡ್​ಗಳಿವೆ, ವೆಂಟಿಲೇಟರ್​ಗಳು ಸಿಗುತ್ತಿಲ್ಲ. ಕೆಲವರು ಸಾವಿನ ಮನೆ ಕದತಟ್ಟಿ ಬರುತ್ತಿದ್ದರೂ ಜನರು ಹೊರಗಡೆ ಸಂಚರಿಸುವುದು ಬಿಡುತ್ತಿಲ್ಲ. ಮಾಸ್ಕ್ ಧರಿಸುತ್ತಿಲ್ಲ; ಪರಸ್ಪರ ಅಂತರ ಕಾಯ್ದುಕೊಳ್ಳುತ್ತಿಲ್ಲ. ಪರಿಣಾಮ ಇನ್ನಷ್ಟು ಬಿಗಡಾಯಿಸುತ್ತಿದೆ. ಬುಧವಾರ 582 ಜನರು ಬಿಡುಗಡೆಯಾಗಿದ್ದು, 6478 ಸಕ್ರಿಯ ಪ್ರಕರಣಗಳಿವೆ. ಕೋವಿಡ್​ನಿಂದ ಇದುವರೆಗೆ 816 ಜನರು ಮೃತಪಟ್ಟಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts