More

    ನಿಯಂತ್ರಣವಾಗದ ತಂಬಾಕು

    ದಾವಣಗೆರೆ: ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ, ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ತರಬೇತಿ, ಆರೋಗ್ಯ ಶಿಕ್ಷಣ, ತಂಬಾಕು ವ್ಯಸನ ಮುಕ್ತ ಕೇಂದ್ರ ಮತ್ತಿತರೆ ಯೋಜನೆಗಳಿದ್ದರೂ ದಾವಣಗೆರೆ ಜಿಲ್ಲೆಯಲ್ಲಿ ತಂಬಾಕು ಬಳಕೆ ನಿಷೇಧ ಸಂಪೂರ್ಣ ತಹಬದಿಗೆ ಬಂದಿಲ್ಲ.

    ಧೂಮಪಾನ ಮತ್ತು ಗುಟ್ಕಾ ಸೇವನೆಯು ಬಾಯಿ, ಕರುಳು, ಜಠರ, ಅನ್ನನಾಳ ಹಾಗೂ ಶ್ವಾಸಕೋಶದ ಕ್ಯಾನ್ಸರ್‌ಗೆ ಆಹ್ವಾನ ನೀಡುತ್ತಿದೆ. ಟಿವಿ, ಚಿತ್ರಮಂದಿರ ಮತ್ತಿತರೆಡೆ ಜಾಗೃತಿ ಮೂಡಿಸಿಯೂ ಇದರ ಪಾಶ ತಪ್ಪಿಲ್ಲ. ಯುವಕರು ತಂಬಾಕುಯುಕ್ತ ಜರ್ದಾ, ಗುಟ್ಕಾ, ಧೂಮಪಾನ, ಕಡ್ಡಿಪುಡಿ, ನಶ್ಯಪುಡಿ ಸೇವನೆಯಿಂದ ಕ್ಷಣಿಕ ಸುಖಕ್ಕೆ ದಾಸರಾಗುತ್ತಿದ್ದಾರೆ.
    ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ನೇತೃತ್ವದಲ್ಲಿ ಜಿಲ್ಲೆಯಲ್ಲಿ 2018ರಿಂದ ಇದುವರೆಗೂ 284 ದಾಳಿ ನಡೆಸಿದ್ದು ಕೋಟ್ಬಾ ಉಲ್ಲಂಘನೆಯಡಿ 4940 ಪ್ರಕರಣ ದಾಖಲಿಸಿ, 5.64 ಲಕ್ಷ ರೂ.ಗಳ ದಂಡ ಸಂಗ್ರಹಿಸಲಾಗಿದೆ.
    ಧೂಮಪಾನಿಗಳ ವಿರುದ್ಧ ಪೊಲೀಸರು, ಇನ್ನೊಂದೆಡೆ ಗುಟ್ಕಾ ಅಗಿದು ಕಂಡಕಂಡಲ್ಲಿ ಉಗಿಯುವವರಿಗೂ ಪಾಲಿಕೆ ಸಿಬ್ಬಂದಿ ಪ್ರತ್ಯೇಕವಾಗಿ ದಂಡ ವಿಧಿಸುತ್ತಿದ್ದಾರೆ. ಕರೊನಾ ಕಾಲದಲ್ಲಿದ್ದ ಗಂಭೀರತೆ ಸಾರ್ವಜನಿಕ ವಲಯದಲ್ಲಿನ್ನೂ ಬಂದಿಲ್ಲ.
    ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಹಕಾರದೊಂದಿಗೆ ನಾಲ್ಕೂವರೆ ವರ್ಷದಲ್ಲಿ 430 ಸರ್ಕಾರಿ ಸೇರಿ ಎಲ್ಲ ಶಾಲಾ ಕಾಲೇಜುಗಳ 48 ಸಾವಿರ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಗಿದೆ. ವಿದ್ಯಾಸಂಸ್ಥೆಗಳಲ್ಲಿ ತಂಬಾಕು ನಿಯಂತ್ರಣ ಸಮಿತಿಗಳಿವೆ. 430 ವಿದ್ಯಾಸಂಸ್ಥೆಗಳನ್ನು ತಂಬಾಕುಮುಕ್ತ ಎಂದು ಘೋಷಿಸಲಾಗಿದೆ.
    ವಿವಿಧ ಇಲಾಖಾಧಿಕಾರಿಗಳು, ಸಂಘ ಸಂಸ್ಥೆಗಳು, ತಂಬಾಕು ಮಾರಾಟಗಾರರು ಹಾಗೂ ಚಿತ್ರಮಂದಿರದ ಮಾಲೀಕರಿಗೆ ತರಬೇತಿ ನೀಡಲಾಗಿದೆ. ತಂಬಾಕು ಸೇವನೆಯಿಂದಾಗುವ ದುಷ್ಪ್ಪರಿಣಾಮ, ಕೋಟ್ಬಾ ಕುರಿತು ಸಾರ್ವಜನಿಕರ ಜಾಗೃತಿಗಾಗಿ ಹೋರ್ಡಿಂಗ್ಸ್, ಕರಪತ್ರ, ಭಿತ್ತಿಪತ್ರ, ಗೋಡೆ ಬರಹ, ಬೀದಿ ನಾಟಕಗಳು, ಎಲ್.ಇ.ಡಿ ಪ್ರದರ್ಶನ, ಆಕಾಶವಾಣಿ ಕಾರ್ಯಕ್ರಮಗಳು, ಗುಲಾಬಿ ಆಂದೋಲನ ಇತ್ಯಾದಿ ನಡೆಸಲಾಗಿದೆ.
    ಚಿಗಟೇರಿ ಜಿಲ್ಲಾಸ್ಪತ್ರೆಯ ತಂಬಾಕು ವ್ಯಸನಮುಕ್ತ ಕೇಂದ್ರಕ್ಕೆ 2018 ರಿಂದ ಈವರೆಗೆ ಒಟ್ಟು 2053 ಫಲಾನುಭವಿಗಳು ಭೇಟಿ ನೀಡಿದ್ದು ಈ ಪೈಕಿ 46 ಜನ ತಂಬಾಕು ವ್ಯಸನದಿಂದ ದೂರ ಉಳಿದಿದ್ದಾರೆ. ಕಳೆದೆರಡು ವರ್ಷದಲ್ಲಿ 260 ತಂಬಾಕು ಮುಕ್ತ ಕಚೇರಿಗಳನ್ನು ಘೋಷಿಸಲಾಗಿದೆ. ದಾವಣಗೆರೆ ವಿವಿಯನ್ನು 2022ರ ಜೂನ್‌ನಲ್ಲಿ ತಂಬಾಕು ಮುಕ್ತ ವಿಶ್ವವಿದ್ಯಾಲಯವಾಗಿ ಘೋಷಿಸಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.
    30 ಆಸನವುಳ್ಳ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳಲ್ಲಿ ಧೂಮಪಾನ ವಲಯ ನಿರ್ಮಿಸಬೇಕಿದ್ದರೂ ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿಲ್ಲ. ದಂಡ ವಿಧಿಸುವ ಅವಕಾಶವಿದ್ದರೂ ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನಿಗಳ ನಿಯಂತ್ರಣವಾಗುತ್ತಿಲ್ಲ.
    ಗುಟ್ಕಾ ಸೇವಿಸುವವರಲ್ಲಿ ಶೇ.90ರಷ್ಟು ಮಂದಿ ಬಾಯಿ ಉರಿ, ನಂತರ ಬಾಯಿ ತೆಗೆಯಲಾರದ ಸ್ಥಿತಿಗೆ ಹೋಗುತ್ತಾರೆ. ಇವರಲ್ಲಿ ಶೇ.3ರಿಂದ 7 ಜನರು ಕ್ಯಾನ್ಸರ್‌ಗೆ ಒಳಗಾಗುತ್ತಾರೆ. ಶೇ.2ರಷ್ಟು ಹೆಣ್ಣುಮಕ್ಕಳೂ ಕೂಡ ಗುಟ್ಕಾ ಸೇವಿಸುತ್ತಿದ್ದಾರೆ. ತಂಬಾಕು ವ್ಯಸನಮುಕ್ತ ಕೇಂದ್ರದಲ್ಲಿ 3 ತಿಂಗಳಿಗಾಗುವ ಉಚಿತ ಮಾತ್ರೆ ನೀಡಲಾಗುತ್ತದೆ. ಆರಂಭದಲ್ಲಿ ಬಂದವರು ಇತ್ತ ಸುಳಿಯುತ್ತಿಲ್ಲ. ಈ ಬಗ್ಗೆ ಫಾಲೋಅಪ್ ಆಗುವ ಅಗತ್ಯವಿದೆ ಎನ್ನುತ್ತಾರೆ ಬಾಯಿ ರೋಗ ಶಾಸ್ತ್ರ ತಜ್ಞ ವೈದ್ಯರು.

    ಕೋಟ್1
    ತಂಬಾಕು ನಿಯಂತ್ರಣ ಆರೋಗ್ಯ ಇಲಾಖೆಯ ಕಾರ್ಯಕ್ರಮವಾಗದೆ ಎಲ್ಲ ಇಲಾಖೆಗಳೂ ಕೈ ಜೋಡಿಸಬೇಕು. ಈಗಾಗಲೆ ಹಲವು ಇಲಾಖೆ ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ. ಒತ್ತಡದ ನಿವಾರಣೆಗೆ ಕೆಲವರು ತಂಬಾಕು ಸೇವಿಸುವ ಬದಲಾಗಿ ಯೋಗ, ಪ್ರಾಣಾಯಾಮ, ದೇವಸ್ಥಾನಗಳಿಗೆ ಹೋಗುವುದು ಮೊದಲಾದ ಜೀವನಶೈಲಿ ರೂಢಿಸಿಕೊಳ್ಳಬೇಕಿದೆ.
    ಡಾ.ಜಿ.ಡಿ.ರಾಘವನ್
    ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮಾಧಿಕಾರಿ.
    —–
    ಕೋಟ್ 2
    ಮಕ್ಕಳು ಪಾನ್ ಮಸಾಲಗಳಿಗೆ ದಾಸರಾಗಿ ನಂತರ ತಂಬಾಕನ್ನು ಸೇರಿಸಿ ತಿನ್ನಲು ಪ್ರಯತ್ನಿಸುತ್ತಾರೆ. ಶಿಕ್ಷಣ ಇಲಾಖೆಯಿಂದ ಶಾಲಾವಾರು ಮಕ್ಕಳಿಗೆ ಬಾಯಿ ಆರೋಗ್ಯ ತಪಾಸಣೆ ಶಿಬಿರಗಳು ಆಗಬೇಕಿದೆ. ತಂಬಾಕು ವ್ಯಸನ ಕೇಂದ್ರಕ್ಕೆ ಬರುವವರ ಫಾಲೋಅಪ್ ಆಗಬೇಕಿದೆ.
    ಡಾ. ರಾಜೇಶ್ವರಿ ಜಿ. ಅಣ್ಣಿಗೇರಿ
    ಬಾಯಿ ರೋಗ ಶಾಸ್ತ್ರ- ಕ್ಷಕಿರಣ ವಿಭಾಗ ಮುಖ್ಯಸ್ಥರು, ದಂತ ವಿಜ್ಞಾನ ಕಾಲೇಜು,
    —-

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts