More

    ನಿಮ್ಮ ಪಕ್ಷದಂತೆ ಸುಳ್ಳು ಬೇಡ ಸತ್ಯಾಂಶ ಅರಿಯಿರಿ|ಮಾಜಿ ಶಾಸಕ ಭೂಸನೂರ ಪ್ರಶ್ನೆಗೆ ಎಂಎಲ್‌ಎ ಮನಗೂಳಿ ಪ್ರತಿ ಸವಾಲು

    ಸಿಂದಗಿ: ಕಳೆದ ಹತ್ತು ತಿಂಗಳ ಅವಧಿಯಲ್ಲಿ ಕ್ಷೇತ್ರಕ್ಕೆ 236 ಕೋಟಿ ರೂ. ಮಂಜೂರಾಗಿದ್ದು, ಅದರ ದಾಖಲೆಗಳನ್ನು ಶಾಸಕ ಅಶೋಕ ಮನಗೂಳಿ ಶುಕ್ರವಾರ ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಬಿಡುಗಡೆಗೊಳಿಸಿದರು.

    ಶಾಸಕ ಅಶೋಕ ಮನಗೂಳಿ ಅವರು ಕ್ಷೇತ್ರದ ಅಭಿವೃದ್ಧಿಗೆ 125 ಕೋಟಿ ರೂ. ಅನುದಾನ ತಂದಿರುವುದರ ದಾಖಲೆಗಳನ್ನು ಬಿಡುಗಡೆಗೊಳಿಸಬೇಕು ಎಂಬ ಮಾಜಿ ಶಾಸಕ ರಮೇಶ ಭೂಸನೂರ ಫೆ. 28ರಂದು ಸುದ್ದಿಗೋಷ್ಠಿಯಲ್ಲಿ ಸವಾಲು ಹಾಕಿದ್ದರು. ಅದನ್ನು ಗಂಭೀರವಾಗಿ ಪರಿಗಣಿಸಿದ್ದ ಶಾಸಕರು ತಮ್ಮ ಅವಧಿಯಲ್ಲಿ ಕ್ಷೇತ್ರಕ್ಕೆ ಮಂಜೂರಾದ 236 ಕೋಟಿ ರೂ. ಅನುದಾನದ ವಿವಿಧ ಕಾಮಗಾರಿಗಳ ದಾಖಲೆಗಳನ್ನು ಬಿಡುಗಡೆಗೊಳಿಸಿ ಪ್ರತ್ಯುತ್ತರ ನೀಡಿದರು.

    ನನ್ನನ್ನು ಸುಳ್ಳಿನ ಪಟ್ಟಿಗೆ ಸೇರಿಸುವಲ್ಲಿ ಹಾಗೂ ಟೀಕಿಸುವಲ್ಲಿ ಒಂದಷ್ಟು ಸತ್ಯಾಂಶವಿರಲಿ. ನನೆಗುದಿಗೆ ಬಿದ್ದ ಕೆಲಸಗಳಿಗೆ ಜೀವ ಕೊಡುವ ಕೆಲಸ ಮಾಡುತ್ತಿರುವೆ. ನಾನು ಕೇವಲ 9ತಿಂಗಳು 27 ದಿನಗಳ ಹಸಿಗೂಸು. ನೀವು 176 ತಿಂಗಳುಗಳ ಕಾಲ ಸುದೀರ್ಘವಾಗಿ ರಾಜಕಾರಣ ಮಾಡಿದವರು. ನಿಮ್ಮ ಆಪಾದನೆಗೆ ಇಲಾಖಾವಾರು ಉತ್ತರ ನೀಡಿರುವೆ. ನೀವು ಕೂಡ ನಿಮ್ಮ ಹೇಳಿಕೆಯಂತೆ. ಸಿಂದಗಿ ಪುರಸಭೆಗೆ 5 ಸಾವಿರ ಹಾಗೂ ಆಲಮೇಲ ಪಟ್ಟಣ ಪಂಚಾಯಿತಿಗೆ 2 ಸಾವಿರ ಆಶ್ರಯ ಮನೆಯನ್ನು ತಂದಿದ್ದರೆ ಎರಡು ದಿನಗಳಲ್ಲಿ ಅವುಗಳ ದಾಖಲೆ ಕೊಡಿ ಎಂದು ಪ್ರತಿ ಸವಾಲು ಹಾಕಿದರು.

    ಬಿಜೆಪಿ ಸರ್ಕಾರದ ಅಧಿಕಾರವಧಿಯಲ್ಲಿ ರಾಜ್ಯದಲ್ಲಿ ಅನುದಾನವಿಲ್ಲದೇ, ಅಂದಾಜು 2.20ಲಕ್ಷ ಕೋಟಿ ರೂ.ಗಳ ಕಾಮಗಾರಿಗಳನ್ನು ತರಾತುರಿಯಲ್ಲಿ ಆರಂಭಿಸಿದ್ದರು. ನಮ್ಮ ಸರ್ಕಾರ ಅಂತಹ ತರಾತುರಿ ಕೆಲಸಗಳನ್ನು ಮಾಡಲ್ಲ. ಬಿಜೆಪಿಗರಂತೆ ನಾವು ಬರಿ ಭ್ರಮೆಯಲ್ಲಿ ಇಲ್ಲ. ಗ್ಯಾರಂಟಿ ಬಗ್ಗೆ ಟೀಕಿಸುತ್ತಿದ್ದವರು. ಇದೀಗ ಅನುಕರಣೆ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

    ಮಾಜಿ ಶಾಸಕರೇ, ಯಾವುದೇ ಕಾಮಗಾರಿಗಳ ಆರಂಭಕ್ಕೆ ಪತ್ರ ಬರೆದರೆ ಸಾಲದು, ಅದನ್ನು ಸತತವಾಗಿ ಫಾಲೋ ಅಪ್ ಮಾಡಿ, ದಕ್ಕಿಸಿಕೊಳ್ಳಬೇಕು. ಆಲಮೇಲ ಕ್ಷೇತ್ರದ ನಾಲ್ಕು ಗ್ರಾಮಗಳನ್ನು ಪುನಃ ಸಿಂದಗಿ ಕ್ಷೇತ್ರಕ್ಕೆ ಸೇರಿಸಿರುವುದು ನಾವು. ಆ ಗ್ರಾಮಸ್ಥರಿಗೆ ಚುನಾವಣೆ ವೇಳೆ ಮಾತು ಕೊಟ್ಟಂತೆ ಅದನ್ನು ಪೂರ್ಣಗೊಳಿಸಿದ್ದೇವೆ ಎಂದರು.

    ಪಡಿತರ ಅಂಗಡಿಗಳ ವಿಚಾರದಲ್ಲೂ ನಮ್ಮ ಹಸ್ತಕ್ಷೇಪಗಳಿಲ್ಲ. ಸಂಬಂಧಿಸಿದ ಅಧಿಕಾರಿಗಳು ಆಯಾ ಪಡಿತರ ಹಂಚಿಕೆದಾರರು ಅಕ್ರಮವೆಸಗುತ್ತಿರುವ ವರದಿ ನೀಡಿದ್ದರು. ಅದರಂತೆ ಕ್ರಮ ವಹಿಸಿದ್ದು ಇಲಾಖೆ ಎಂದು ಬಿಜೆಪಿಗರ ಆರೋಪ ತಳ್ಳಿ ಹಾಕಿದರು.

    ಮತಕ್ಷೇತ್ರದಲ್ಲಿ ಸಿಸಿ ರಸ್ತೆ, ದೇವಸ್ಥಾನಗಳ ಸಮುದಾಯ ಭವನ, ಅಲ್ಪಸಂಖ್ಯಾತ ಸಮುದಾಯ ಭವನ, ಈದ್ಗಾ ಅಭಿವೃದ್ಧಿ, ನಗರ ನಿವಾಸಿಗಳಿಗೆ ಅಮೃತ 2.0 ಅಡಿ ಕುಡಿಯುವ ನೀರು, ಕೆರೆ ಅಭಿವೃದ್ಧಿ, ಶಾಲಾ ದುರಸ್ಥಿ, ಬೀದಿದೀಪಗಳ ಅಳವಡಿಕೆ, ಬ್ರಿಡ್ಜ್ ನಿರ್ಮಾಣ ಸೇರಿ 40 ಕಾಮಗಾರಿಗಳಿಗೆ 236ಕೋಟಿ ರೂ. ಮಂಜೂರಾಗಿದೆ. ಸುಳ್ಳು ಆರೋಪ ಮಾಡದೇ, ಕ್ಷೇತ್ರದ ಅಭಿವೃದ್ಧಿಗೆ ಬೆಂಬಲಿಸಿರಿ ಎಂದು ಮನವಿ ಮಾಡಿದರು.

    ಸುದ್ದಿಗೋಷ್ಠಿಯಲ್ಲಿ ಮಲ್ಲಣ್ಣ ಸಾಲಿ, ಎಂ.ಎ. ಖತೀಬ, ರಾಜಶೇಖರ ಕೂಚಬಾಳ, ಬ್ಲಾಕ್ ಅಧ್ಯಕ್ಷ ಸುರೇಶ ಪೂಜಾರಿ, ಮಹ್ಮದಪಟೇಲ ಬಿರಾದಾರ, ಸುರೇಶ ಮಳಲಿ, ಶಿವನಗೌಡ ಬಿರಾದಾರ ಮತ್ತಿತರರಿದ್ದರು.

    ಬದ್ಧತೆಯ ರಾಜಕಾರಣದ ಫಲವಾಗಿ ಆಲಮೇಲದಲ್ಲಿನ ತೋಟಗಾರಿಕೆ ವಿಶ್ವವಿದ್ಯಾಲಯಕ್ಕೆ ಬಜೆಟ್‌ನಲ್ಲಿ ಸಿಕ್ಕ ಭರವಸೆಯನ್ನು ಸ್ವಾಗತಿಸದ ಮಾಜಿ ಶಾಸಕರೇ ಬಜೆಟ್ ಬಗ್ಗೆಯೇ ಸಂಶಯಿಸುತ್ತ ಕ್ಷೇತ್ರದ ಜನರಿಗೆ ನಂಬಿಕೆ ದ್ರೋಹ ಮಾಡಬೇಡಿ.
    ಅಶೋಕ ಮನಗೂಳಿ, ಶಾಸಕರು, ಸಿಂದಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts