More

    ನಿತ್ಯ ಐದು ಲಕ್ಷ ರೂಪಾಯಿ ನಷ್ಟ !

    ಗಜೇಂದ್ರಗಡ: ಕೆಎಸ್​ಆರ್​ಟಿಸಿ ಬಸ್ ಸಂಚಾರ ಆರಂಭವಾಗಿ ವಾರಗಳೇ ಕಳೆದರೂ ಇನ್ನೂ ಯಥಾಸ್ಥಿತಿಗೆ ಬಂದಿಲ್ಲ. ಇದರಿಂದ ಗಜೇಂದ್ರಗಡ ಡಿಪೋ ನಿತ್ಯ ಬರೋಬ್ಬರಿ 5 ಲಕ್ಷ ರೂ. ನಷ್ಟ ಅನುಭವಿಸುತ್ತಿದೆ.

    ಕರೊನಾ ಲಾಕ್​ಡೌನ್ ಹಿನ್ನೆಲೆಯಲ್ಲಿ ಸರ್ಕಾರ ಮಾರ್ಚ್ 23ರಂದು ಸಾರಿಗೆ ಸೇವೆಗೆ ನಿರ್ಬಂಧ ಹೇರಿತ್ತು. ಎರಡು ತಿಂಗಳ ಬಳಿಕ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದರೂ ಪ್ರಯಾಣಿಕರಲ್ಲಿ ಕರೊನಾ ಭೀತಿ ಕಡಿಮೆಯಾಗಿಲ್ಲ. ಸದ್ಯ ಅರ್ಧದಷ್ಟು ಬಸ್​ಗಳು ಮಾತ್ರ ಸಂಚರಿಸುತ್ತಿವೆ. ಅದರಲ್ಲೂ ನಿರೀಕ್ಷಿತ ಮಟ್ಟದ ಆದಾಯ ದೊರೆಯುತ್ತಿಲ್ಲ ಎನ್ನುತ್ತಾರೆ ಡಿಪೋ ಮ್ಯಾನೇಜರ್ ಡಿ.ಎಚ್.ನಾಯಕ.

    ಲಾಕ್​ಡೌನ್​ಗೆ ಮುನ್ನ ಗಜೇಂದ್ರಡ ಡಿಪೋದಲ್ಲಿ ನಿತ್ಯ 72 ಬಸ್​ಗಳು ಸಂಚರಿಸುತ್ತಿದ್ದವು. ದಿನವೊಂದಕ್ಕೆ ಸರಾಸರಿ 30 ಸಾವಿರ ಮಂದಿ ಪ್ರಯಾಣಿಸುತ್ತಿದ್ದರು. ಈಗ 53 ಬಸ್​ಗಳು ಮಾತ್ರ ಪ್ರತಿ ದಿನ ರಸ್ತೆಗೆ ಇಳಿಯುತ್ತಿವೆ. ನಿತ್ಯ 7 ರಿಂದ 8 ಲಕ್ಷ ರೂ. ಆದಾಯ ಗಳಿಸುತ್ತಿದ್ದ ಗಜೇಂದ್ರಗಡ ಡಿಪೋವೀಗ ದಿನಕ್ಕೆ ಕೇವಲ 2-3 ಲಕ್ಷ ರೂ. ಗಳಿಕೆಗೆ ಬಂದು ನಿಂತಿದೆ.

    ನಿಯಮ ಪಾಲನೆ ಸಂಕಷ್ಟ: ಸಾಮಾನ್ಯವಾಗಿ ಒಂದು ಬಸ್​ನಲ್ಲಿ 55-60 ಪ್ರಯಾಣಿಕರು ಸಂಚರಿಸುತ್ತಿದ್ದರು. ಆದರೀಗ ಗರಿಷ್ಠ 30 ಪ್ರಯಾಣಿಕರಿಗೆ ಮಾತ್ರ ಅವಕಾಶ ಕಲ್ಪಿಸಬೇಕು ಎಂದು ಸರ್ಕಾರ ನಿರ್ಬಂಧ ಹೇರಿದೆ. ಇದರಿಂದಾಗಿ ಸಾರಿಗೆ ಸಂಸ್ಥೆಗೆ ನಷ್ಟ ಹೆಚ್ಚಾಗಿದೆ. 53 ಬಸ್ ಓಡಿಸಿದರೂ ದಿನಕ್ಕೆ ನಾಲ್ಕರಿಂದ ಐದು ಲಕ್ಷ ರೂ. ಆದಾಯ ಬರಬೇಕಿತ್ತು. ಆದರೆ, ಎರಡು ಲಕ್ಷ ರೂ. ಮಾತ್ರ ಸಿಗುತ್ತಿದೆ. ಇಲ್ಲಿಯೇ ಇನ್ನೂ ಮೂರು ಲಕ್ಷ ರೂ. ಆದಾಯ ಕೈತಪ್ಪುತ್ತಿದೆ ಎನ್ನುತ್ತಾರೆ ಕೆಎಸ್​ಆರ್​ಟಿಸಿ ಅಧಿಕಾರಿಗಳು.

    ಶೇ. 65 ಸಿಬ್ಬಂದಿ ಬಳಕೆ:

    ಕೇವಲ ಅರ್ಧದಷ್ಟು ಬಸ್​ಗಳು ಓಡುತ್ತಿರುವ ಕಾರಣ ಸಾರಿಗೆ ಸಂಸ್ಥೆಯು ತನ್ನ ಅರ್ಧದಷ್ಟು ಸಿಬ್ಬಂದಿಯ ಸೇವೆಯನ್ನು ಮಾತ್ರ ಬಳಸಿಕೊಳ್ಳುತ್ತಿದೆ. ಡಿಪೋದಲ್ಲಿ 231 ಚಾಲಕರು ಹಾಗೂ ನಿರ್ವಾಹಕರು ಇದ್ದಾರೆ. ಇವರಲ್ಲಿ ಅರ್ಧಕ್ಕೂ ಹೆಚ್ಚು ಮಂದಿಗೆ ದಿನ ಬಿಟ್ಟು ದಿನ ರಜೆ ಸಿಗುತ್ತಿದೆ. ಆರೋಗ್ಯ ಸಮಸ್ಯೆಯುಳ್ಳವರಿಗೆ ಮತ್ತು 55 ವರ್ಷ ಮೇಲ್ಪಟ್ಟವರಿಗೆ ವಿನಾಯಿತಿಯನ್ನೂ ನೀಡಲಾಗಿದೆ. ಕಚೇರಿ ಸಿಬ್ಬಂದಿ, ಮೆಕ್ಯಾನಿಕ್​ಗಳು ಸೇರಿ ಉಳಿದ ಸಿಬ್ಬಂದಿ ಎಂದಿನಂತೆ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ.

    ಆಷಾಢಕ್ಕೆ ಸಂಕಷ್ಟ

    ಸದ್ಯ ಲಾಕ್​ಡೌನ್ ನಡುವೆಯೂ ಅಲ್ಲಲ್ಲಿ ಶುಭ ಸಮಾರಂಭಗಳು ನಡೆದಿವೆ. ಹೀಗಾಗಿ, ಜನರ ಓಡಾಟ ತುಸು ಹೆಚ್ಚಾಗಿಯೇ ಇದೆ. ಆದರೆ, ಇನ್ನೊಂದು ವಾರಕ್ಕೆ ಆಷಾಢ ಮಾಸ ಬರಲಿದೆ. ಆಗ ಹೊರ ಊರುಗಳಿಗೆ ಪ್ರಯಾಣಿಸುವವರ ಸಂಖ್ಯೆ ಸಹಜವಾಗಿಯೇ ತಗ್ಗಲಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಪ್ರಯಾಣಿಕರ ಸಂಖ್ಯೆ ಇನ್ನಷ್ಟು ಕುಸಿಯಬಹುದು ಎನ್ನುವುದು ಅಧಿಕಾರಿಗಳ ಆತಂಕ.

    ಗಜೇಂದ್ರಗಡದಲ್ಲಿ ಸದ್ಯ ಅರ್ಧದಷ್ಟು ಬಸ್​ಗಳು ಮಾತ್ರವೇ ಸಂಚರಿಸುತ್ತಿವೆ. ಬೇಡಿಕೆ ಬಂದರೆ ಇನ್ನಷ್ಟು ವಾಹನಗಳನ್ನು ಬಿಡುತ್ತೇವೆ.

    | ಡಿ.ಎಚ್.ನಾಯಕ, ಡಿಪೋ ಮ್ಯಾನೇಜರ್ ಗಜೇಂದ್ರಗಡ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts