More

    ನಿಗದಿಯಾಗಲಿ 25 ಸಾವಿರ ರೂ. ಕನಿಷ್ಠ ಕೂಲಿ  – ಡಾ.ಸಿದ್ದನಗೌಡ ಪಾಟೀಲ್ -ಅಂಗನವಾಡಿ ಕಾರ್ಯಕರ್ತೆಯರ ಸಮ್ಮೇಳನ 

    ದಾವಣಗೆರೆ: ಕೇಂದ್ರ-ರಾಜ್ಯ ಸರ್ಕಾರಗಳು, ಅಂಗನವಾಡಿ ಕಾರ್ಯಕರ್ತೆಯರು-ಸಹಾಯಕಿಯರ ಸುಭದ್ರ ಬದುಕಿಗಾಗಿ 25 ಸಾವಿರ ರೂ. ಕನಿಷ್ಠ ಕೂಲಿ ನಿಗದಿ ಮಾಡಬೇಕು ಎಂದು ಸಿಪಿಐನ ರಾಜ್ಯ ಮಂಡಳಿ ಸದಸ್ಯ ಡಾ.ಸಿದ್ದನಗೌಡ ಪಾಟೀಲ್ ಆಗ್ರಹಿಸಿದರು.
    ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್‌ನಿಂದ ನಗರದ ಶಿವಯೋಗಿ ಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಆರನೇ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
    ಅಂಗನವಾಡಿ ಉದ್ಯೋಗಿಗಳ ಕುಟುಂಬದ ನಿರ್ವಹಣೆಗೆ ತಗುಲುತ್ತಿರುವ ಖರ್ಚು-ವೆಚ್ಚದ ಲೆಕ್ಕ ಹಾಕಿ ಕನಿಷ್ಠ ಕೂಲಿ ನಿಗದಿಪಡಿಸಬೇಕೇ ಹೊರತಾಗಿ ಮನಸ್ಸಿಗೆ ತೋಚಿದಂತೆ ಕೂಲಿ ದರ ನೀಡಬಾರದು ಎಂದು ಮನವಿ ಮಾಡಿದರು.
    80ರ ದಶಕದ ಜಮೀನ್ದಾರಿ ವ್ಯವಸ್ಥೆಯಲ್ಲಿ ಅಂಗನವಾಡಿ ಮಹಿಳೆಯರ ಮೇಲೆ ನಡೆಯುತ್ತಿದ್ದ ದಾಳಿ, ಫೆಡರೇಷನ್‌ನ ಸಂಘಟಿತ ಹೋರಾಟದಿಂದಾಗಿ ನಿಂತಿದೆ. ಅಂಗನವಾಡಿ ಕೇಂದ್ರಗಳ ಖಾಸಗೀಕರಣ ಪ್ರಕ್ರಿಯೆಗೆ ಕಡಿವಾಣ ಬಿದ್ದಿದೆ.
    ಗೌರವಧನವು ಈಗ 10 ಸಾವಿರ ರೂ. ಗಡಿ ದಾಟಿದೆ. ಕನಿಷ್ಠ ಕೂಲಿ ಹೆಚ್ಚಳಕ್ಕಾಗಿ ಇದೇ ಮಾದರಿಯ ಹೋರಾಟ ನಡೆಸಬೇಕು. ಪಿಂಚಣಿ ಸೌಲಭ್ಯ ಸೇರಿ ಇತರೆ ಹಕ್ಕುಗಳನ್ನು ಪಡೆಯಬೇಕು ಎಂದು ಹೇಳಿದರು.
    ಐದು ಗ್ಯಾರಂಟಿ ಯೋಜನೆಗಳಿಗೆ ಕಾಂಗ್ರೆಸ್ ಸರ್ಕಾರ ವರ್ಷಕ್ಕೆ 52 ಸಾವಿರ ಕೋಟಿ ರೂ. ಖರ್ಚು ಮಾಡುವುದರಿಂದ ರಾಜ್ಯ ದಿವಾಳಿಯಾಗುತ್ತದೆ, ಜಿಡಿಪಿ ಕುಸಿಯುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ದೂರುತ್ತಾರೆ. ಅಂಬಾನಿ, ಅದಾನಿ ಅವರ 12 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದಾಗ ದೇಶ ದಿವಾಳಿಯಾಗಲಿಲ್ಲವೇ. ಆಗ ದೇಶ ಉದ್ದಾರವಾಯಿತೇ ಎಂದು ಪ್ರಶ್ನಿಸಿದರು.
    ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಗೌರವಧನ ಹೆಚ್ಚಿಸುವ ಮೂಲಕ ಸರ್ಕಾರ ಅವರಿಗೆ ಸಾಮಾಜಿಕ ಭದ್ರತೆ ಕಲ್ಪಿಸಬೇಕು ಎಂದು ಆಶಿಸಿದರು.
    ಅಂಗನವಾಡಿ ಸಿಬ್ಬಂದಿ ನೇಮಕಾತಿಯಲ್ಲಿ ವಿಧವೆಯರಿಗೆ ಆದ್ಯತೆ ನೀಡಬೇಕು. ಡಿ ದರ್ಜೆ ನೌಕರರನ್ನು ಹೊರಗುತ್ತಿಗೆ ಬದಲಿಗೆ ನೇರ ನೇಮಕ ಮಾಡಿಕೊಳ್ಳಬೇಕು. ಈ ವಿಚಾರವಾಗಿ ವಿಧಾನಸೌಧದಲ್ಲಿ ಪ್ರಸ್ತಾಪಿಸುತ್ತೇನೆ ಎಂದು ಭರವಸೆ ನೀಡಿದರು.
    ಫೆಡರೇಷನ್ ಜಿಲ್ಲಾಧ್ಯಕ್ಷೆ ಎಂ.ಬಿ. ಶಾರದಮ್ಮ ಅಧ್ಯಕ್ಷತೆ ವಹಿಸಿದ್ದರು. ಅಂಗನವಾಡಿ ಸಂಘಟನೆಯ ರಾಜ್ಯಾಧ್ಯಕ್ಷ ಅಮ್ಜದ್, ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ಜಯಮ್ಮ, ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿ ಎಂ.ಎಸ್. ಅಭಿಕುಮಾರ್, ವಿಶ್ವಮಾನವ ಮಂಟಪ ಸಂಸ್ಥಾಪಕ ಆವರಗೆರೆ ರುದ್ರಮುನಿ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು, ಎಐಟಿಯುಸಿ ಜಿಲ್ಲಾಧ್ಯಕ್ಷ ರಾಘವೇಂದ್ರ ನಾಯಿರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಜಿ. ಉಮೇಶ್, ಮುಖಂಡರಾದ ಆವರಗೆರೆ ವಾಸು, ಮಹಮ್ಮದ್ ಬಾಷ, ಎಸ್.ಎಸ್. ಮಲ್ಲಮ್ಮ, ವಿಶಾಲಾಕ್ಷಿ ಮೃತ್ಯುಂಜಯ, ಚನ್ನಮ್ಮ, ವಿಮಲಾಕ್ಷಿ, ಕೆ.ಸಿ. ನಿರ್ಮಲಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts