More

    ನಾಲ್ಕು ಕ್ಷೇತ್ರ ಗೆದ್ದು ಅಧಿಕಾರ ಗಳಿಸಿಕೊಳ್ಳಿ

    ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆ ಚುನಾವಣೆ ಯಲ್ಲಿ ಅಧಿಕಾರ ಸೂತ್ರ ಹಿಡಿಯಲು ಕಾಂಗ್ರೆಸ್​ಗೆ ಸಾಧ್ಯವಾಗಿಲ್ಲ. ಆದರೂ, 33 ಜನ ಗೆದ್ದಿರುವುದು ಒಳ್ಳೆಯ ಸಾಧನೆ. ಗೆದ್ದವರು, ಸೋತವರೆಲ್ಲ ಒಮ್ಮನಸಿನಿಂದ ಕೆಲಸ ಮಾಡಿ 2023ರ ವಿಧಾನಸಭೆ ಚುನಾವಣೆಯಲ್ಲಿ ಮಹಾನಗರ ವ್ಯಾಪ್ತಿಯ ಎಲ್ಲ 4 ಕ್ಷೇತ್ರದಲ್ಲಿ ಪಕ್ಷವನ್ನು ಗೆಲ್ಲಿಸಿ, ಪಾಲಿಕೆ ಅಧಿಕಾರ ಸೂತ್ರ ಹಿಡಿಯಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹೇಳಿದರು.
    ಪಾಲಿಕೆ ಚುನಾವಣೆಯಲ್ಲಿ ವಿಜೇತರಾದ ಕಾಂಗ್ರೆಸ್ ಸದಸ್ಯರನ್ನು ಭಾನುವಾರ ಇಲ್ಲಿಯ ಮಹಾನಗರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕೆಪಿಸಿಸಿಯಿಂದ ಸನ್ಮಾನಿಸಿ ಅವರು ಮಾತನಾಡಿದರು. ಅನ್ಯ ಪಕ್ಷದವರು, ಪಕ್ಷೇತರರ ಬೆಂಬಲ ಪಡೆದು ಪಾಲಿಕೆಯಲ್ಲಿ ಅಧಿಕಾರ ಹಿಡಿಯಲು ಎಲ್ಲ ಶಾಸಕರು ಕಾಂಗ್ರೆಸ್​ನವರಾಗಬೇಕು ಎನ್ನುವುದನ್ನು ಸೂಚ್ಯವಾಗಿ ತಿಳಿಸಿದರು.
    ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷ ಆಗಿರುವ ಹಿನ್ನೆಲೆಯಲ್ಲಿ ಅ. 2ರಿಂದ ಕಾಂಗ್ರೆಸ್​ನಿಂದ ಎಲ್ಲ ಕಡೆ ವಾರ್ಡ್ ಸಭೆ ನಡೆಸಲು ನಿರ್ಧರಿಸಲಾಗಿದೆ. ಹು-ಧಾ ಪಾಲಿಕೆಯ ಎಲ್ಲ 82 ವಾರ್ಡ್​ಗಳಲ್ಲಿ ಸಭೆ ಅಥವಾ ಪ್ರತಿಭಟನೆ ನಡೆಸಬೇಕು. ಗೆದ್ದವರು, ಸೋತವರೆಲ್ಲರೂ ಕಾರ್ಯಕರ್ತರನ್ನು ಗೌರವದಿಂದ ಕಾಣಬೇಕು ಎಂದರು.
    ಮಾಜಿ ಸಚಿವ ಆರ್.ವಿ. ದೇಶಪಾಂಡೆ, ಶಾಸಕ ಪ್ರಸಾದ ಅಬ್ಬಯ್ಯ, ಎಂಎಲ್​ಸಿ ಶ್ರೀನಿವಾಸ ಮಾನೆ, ಮಾಜಿ ಎಂಎಲ್​ಸಿ ನಾಗರಾಜ ಛಬ್ಬಿ, ಮಹಾನಗರ ಜಿಲ್ಲಾಧ್ಯಕ್ಷ ಅಲ್ತಾಫ ಹಳ್ಳೂರ, ಮುಖಂಡ ಇಸ್ಮಾಯಿಲ್ ತಮಟಗಾರ, ಇತರರು ಮಾತನಾಡಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ, ಮೇಲ್ಮನೆ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಮಾಜಿ ಸಚಿವರಾದ ಶಿವಾನಂದ ಪಾಟೀಲ, ಎ.ಎಂ. ಹಿಂಡಸಗೇರಿ, ಶಾಸಕಿ ಕುಸುಮಾವತಿ ಶಿವಳ್ಳಿ, ಮಾಜಿ ಶಾಸಕ ಎಂ.ಎಸ್. ಅಕ್ಕಿ, ಗ್ರಾಮೀಣ ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ, ಮುಖಂಡರಾದ ಸದಾನಂದ ಡಂಗನವರ, ಪಾರಸಮಲ್ ಜೈನ, ವಿನೋದ ಅಸೂಟಿ, ಶಾಕಿರ್ ಸನದಿ, ಇತರರು ಇದ್ದರು. ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ಕೋವಿಡ್ ನಿಯಮಗಳ ಪಾಲನೆಗೆ ಹೆಚ್ಚು ಮಹತ್ವ ನೀಡದಿರುವುದು ಕಂಡುಬಂದಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts