More

    ನವಲಗುಂದದಲ್ಲಿ ಹೆಸರು ಬೀಜ ಕೊರತೆ

    ನವಲಗುಂದ: ಮುಂಗಾರು ಹಂಗಾಮಿನ ಹೆಸರು ಬಿತ್ತನೆ ಬೀಜಗಳ ಕೊರತೆಯಿಂದ ರೈತರು ಮತ್ತು ನವಲಗುಂದ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳ ಮಧ್ಯೆ ಮಂಗಳವಾರ ಮಾತಿನ ಚಕಮಕಿ ನಡೆಯಿತು.

    ಹಿಂದೆ ತಾಲೂಕಿನಲ್ಲಿ 20 ಕ್ವಿಂಟಾಲ್ ಹೆಸರು ದಾಸ್ತಾನಿತ್ತು. ರೈತರಿಗೆ ವಿತರಿಸುತ್ತ ಬಂದಂತೆಲ್ಲ ಕೇವಲ 10 ಕ್ವಿಂಟಾಲ್ ಬೀಜ ಉಳಿದಿತ್ತು. ಆದರೆ, ಮಂಗಳವಾರ ಏಕಾಏಕಿ ಹೆಚ್ಚು ರೈತರು ಪಟ್ಟಣದ ಹೆಚ್ಚುವರಿ ರೈತ ಸಂಪರ್ಕ ಕೇಂದ್ರಕ್ಕೆ ಮುಗಿಬಿದ್ದಿದ್ದರಿಂದ ಬೀಜಗಳ ಕೊರತೆಯಾಗಿದೆ.

    ಮೇ 24ಕ್ಕೆ ಕೂಡಿದ ರೋಹಿಣಿ ಮಳೆ ತಡವಾದರೂ ತಾಲೂಕಿನಲ್ಲಿ ಸೋಮವಾರ ಉತ್ತಮವಾಗಿ ಸುರಿದಿದೆ. ಅಣ್ಣಿಗೇರಿ, ಶಲವಡಿ, ನಲವಡಿ, ನವಲಗುಂದ ಭಾಗದಲ್ಲಿ ಬಿತ್ತನೆಗೆ ಪೂರಕವಾದ ಮಳೆಯಾಗಿದೆ. ಈ ಮಳೆಗೆ ಹೆಸರು ಬಿತ್ತಿದರೆ ಯಾವ ರೋಗ, ಕೀಟ ಬಾಧೆ ಬಾರದೆ ಫಸಲು ಹುಲುಸಾಗಿ ಬೆಳೆಯುತ್ತದೆ. ಹೀಗಾಗಿ ರೈತರು ಈ ಮಳೆ ಅವಧಿಯೊಳಗೆ ಹೆಸರು ಬಿತ್ತನೆ ಮಾಡಲು ಕೃಷಿ ಇಲಾಖೆ, ರೈತ ಸಂಪರ್ಕ ಕೇಂದ್ರದಲ್ಲಿ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್​ಬುಕ್, ಖಾತೆ ಉತಾರ, ಪಹಣಿ ಪತ್ರಿಕೆ (ಆರ್​ಟಿಸಿ) ನಕಲು ಪ್ರತಿಯೊಂದಿಗೆ ಆನ್​ಲೈನ್​ನಲ್ಲಿ ಹೆಸರು ನಮೂದಿಸಿ ಅರ್ಜಿ ಸಲ್ಲಿಸಿ ಬೀಜ ಪಡೆಯಲು ಬಂದಿದ್ದರು. ಕೃಷಿ ಇಲಾಖೆ ರೈತರ ಪ್ರತಿ ಖಾತೆಗೆ 5 ಕೆಜಿಯ ಮೂರು ಚೀಲ ಹೆಸರು ಪೂರೈಕೆಗೆ ಮುಂದಾಗಿದೆ. ಆದರೆ, ಬೀಜಗಳ ಕೊರತೆಯಿಂದಾಗಿ ರೈತರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಸ್ಥಳಕ್ಕಾಗಮಿಸಿದ ಪಿಎಸ್​ಐ ಜಯಪಾಲ ಪಾಟೀಲ, ರೈತರ ಬೇಡಿಕೆಗೆ ತಕ್ಕಷ್ಟು ಜೂ. 4ರಂದು ಹೆಚ್ಚು ಪ್ರಮಾಣದಲ್ಲಿ ಹೆಸರು ಬೀಜಗಳನ್ನು ಆಯ್ದ ಕಂಪನಿಯಿಂದ ತರಿಸಲು ತಾಲೂಕು ಕೃಷಿ ಸಹಾಯಕ ನಿರ್ದೇಶಕ ಎಂ.ಆರ್. ದಂಡಿಗಿ ಮುಂದಾಗಿದ್ದಾರೆ. ಅಲ್ಲಿಯವರೆಗೆ ಸಹಕರಿಸಿ ಎಂದು ರೈತರ ಮನವೊಲಿಸಿದರು. ಮತ್ತೆ ಬಿತ್ತನೆ ಬೀಜ ಕೊರತೆಯಾದರೆ ಕೃಷಿ ಇಲಾಖೆ ಕಚೇರಿಗೆ ಮುತ್ತಿಗೆ ಹಾಕುತ್ತೇವೆ ಎಂದು ರೈತರು ಎಚ್ಚರಿಕೆ ನೀಡಿ ಮನೆಗೆ ಮರಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts