More

    ನರೇಗಾ ಯೋಜನೆಯಡಿ ಕಾಮಗಾರಿ ಕೈಗೆತ್ತಿಕೊಳ್ಳಿ


    ತಲಕಾಡು: ಸಮೀಪದ ಹೆಮ್ಮಿಗೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಗ್ರಾಮ ಹಾಗೂ ಮಹಿಳಾ ಗ್ರಾಮ ಸಭೆ ಯಶಸ್ವಿಯಾಯಿತು.

    ಮಹಿಳೆಯರು ಗ್ರಾಮ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ವಿಶೇಷ. ಪಂಚಾಯಿತಿ ವ್ಯಾಪ್ತಿಯ ಹೆಮಿಗೆ.ಬಿ, ಹೆಮ್ಮಿಗೆ ಎ, ಕಟ್ಟೇಪುರ, ಮಾರನಪುರ, ಜಾಲಹಳ್ಳಿ, ಅಕ್ಕೂರು ದೊಡ್ಡಿ, ಅಕ್ಕೂರು, ಚಂದಹಳ್ಳಿ, ಮರಡಿಪುರ, ಚನ್ನಬಸವಯ್ಯನಹುಂಡಿಯಲ್ಲಿ ನರೇಗಾ ಯೋಜನೆಯಡಿ ವಿವಿಧ ಕಾಮಗಾರಿಗಳನ್ನು ಶೀಘ್ರ ಕೈಗೆತ್ತಿಕೊಳ್ಳುವಂತೆ ಸಾರ್ವಜನಿಕರು ಸಭೆಯಲ್ಲಿ ಅರ್ಜಿ ಸಲ್ಲಿಸಿದರು.

    ಅಂಗನವಾಡಿ ಕೇಂದ್ರಗಳ ದುರಸ್ತಿ, ದನದ ಕೊಟ್ಟಿಗೆ ನಿರ್ಮಾಣ, ಶೌಚಗೃಹ, ವಸತಿ ನಿರ್ಮಾಣ, ಜಮೀನಿಗೆ ತೆರಳುವ ರಸ್ತೆಗಳ ದುರಸ್ತಿಗೊಳಿಸುವಂತೆ ಅರ್ಜಿ ಸಲ್ಲಿಸಿದರು.
    ದನದ ಕೊಟ್ಟಿಗೆ ನಿರ್ಮಿಸಿಕೊಳ್ಳುವ ಎಲ್ಲ ವರ್ಗದ ಫಲಾನುಭವಿಗಳಿಗೆ ನರೇಗಾ ಯೋಜನೆಯಡಿ ಪ್ರತಿ ಫಲಾನುಭವಿಗೆ 57,000 ರೂ. ಸಹಾಯಧನ ನೀಡಲಾಗುವುದು. ಇದರ ಪ್ರಯೋಜನ ಪಡೆಯಲು ಫಲಾನುಭವಿ ಮನೆಯಲ್ಲಿ ಕನಿಷ್ಠ ನಾಲ್ಕು ರಾಸುಗಳನ್ನು ಸಾಕಿರಬೇಕು ಎಂಬ ಷರತ್ತಿದೆ ಎಂದು ಪಂಚಾಯಿತಿ ಎಸ್‌ಡಿಎ ಪ್ರಸಾದ್ ಸಭೆಗೆ ಮಾಹಿತಿ ನೀಡಿದರು.

    ಷರತ್ತಿಲ್ಲದೆ ಫಲಾನುಭವಿ ಆಯ್ಕೆ ಮಾಡಿ: ಎಸ್‌ಡಿಎ ಪ್ರಸಾದ್ ಸಭೆಗೆ ನೀಡಿದ ಮಾಹಿತಿಗೆ ಆಕ್ಷೇಪವ್ಯಕ್ತಪಡಿಸಿದ ಸ್ಥಳೀಯ ಚಿಕ್ಕಹೊನ್ನಯ್ಯ, ಕೊಟ್ಟಿಗೆಯೇ ಇಲ್ಲದೆ ಹಸು, ದನ ಸಾಕುವುದಾದರು ಎಲ್ಲಿ ಎಂದು ಪ್ರಶ್ನಿಸಿದರು. ನಾನು ಹೊಸದಾಗಿ ರಾಸುಗಳನ್ನು ಸಾಕಲು ಇಚ್ಛಿಸಿದ್ದು, ಕೊಟ್ಟಿಗೆ ನಿರ್ಮಾಣಕ್ಕೆ ಷರತ್ತಿಲ್ಲದೆ ಫಲಾನುಭವಿಯಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.

    2021/22ನೇ ಸಾಲಿನ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ, ತೋಟಗಾರಿಕೆ ಯೋಜನೆಯಡಿ ತೆಂಗಿನ ಸಸಿ ನಾಟಿ ಮಾಡಲು, ಮಾರನಪುರ ಗ್ರಾಮದ ಜಮೀನಿನಲ್ಲಿ ನಂಜನಗೂಡು ರಸಬಾಳೆ ಬೆಳೆ, ಹೆಮ್ಮಿಗೆ ಗ್ರಾಮದ ಜಮೀನಿನಲ್ಲಿ ನರೇಗಾ ಯೋಜನೆಯಡಿ ಮೈಸೂರು ಮಲ್ಲಿಗೆ ಬೆಳೆ ಬೆಳೆಯಲು ಸಭೆಯಲ್ಲಿ ಅನುಮೋದನೆ ಪಡೆದುಕೊಳ್ಳಲಾಯಿತು.
    ಸಭೆಯಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ, ಸಮಾಜ ಕಲ್ಯಾಣ, ಅರಣ್ಯ ಇಲಾಖೆ ಅಧಿಕಾರಿಗಳು ಹಾಜರಿದ್ದು, ತಮ್ಮ ಇಲಾಖೆಯಿಂದ ದೊರೆಯುವ ವಿವಿಧ ಸವಲತ್ತುಗಳ ಕುರಿತು ಮಾಹಿತಿ ನೀಡಿದರು.

    ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಹೆಮ್ಮಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಚಿನ್ನಸ್ವಾಮಿ ವಹಿಸಿದ್ದರು. ಉಪಾಧ್ಯಕ್ಷೆ ಲಕ್ಷ್ಮೀ, ತಲಕಾಡು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ವಿಜಯಲಕ್ಷ್ಮೀ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ವಿಷಕಂಠ, ರೇಷ್ಮೆ ಇಲಾಖೆ ಅಧಿಕಾರಿ ಈಶ್ವರ, ಅರಣ್ಯ ಇಲಾಖೆಯ ಲೋಕೇಶ್, ಗ್ರಾಪಂ.ಗ್ರೇಡ್ 1 ಅಧಿಕಾರಿ ಕೌಸರಾಬಾನು ಮುಜಾವರ, ಗ್ರಾ.ಪಂ ಸದಸ್ಯ ಸೋಮಣ್ಷ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts