More

    ನರೇಗಾ ಇಲ್ಲದಿದ್ದರೆ ಪರ್ಯಾಯ ಕೆಲಸ ಕೊಡಿ

    ಬೆಳಗಾವಿ : ನರೇಗಾ ಯೋಜನೆಯಡಿ ಉದ್ಯೋಗ ಒದಗಿಸಿ ಅಥವಾ ಪರ್ಯಾಯ ಉದ್ಯೋಗ ಕಲ್ಪಿಸಿ ಎಂದು ಆಗ್ರಹಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ನೇತೃತ್ವದಲ್ಲಿ ತಾಲೂಕಿನ ಪೀರನವಾಡಿ ಗ್ರಾಮಸ್ಥರು ಗುರುವಾರ ಪ್ರತಿಭಟನೆ ನಡೆಸಿದರು.

    ಇಲ್ಲಿನ ಸುವರ್ಣ ವಿಧಾನ ಸೌಧದ ಬಳಿಯ ಸುವರ್ಣ ಗಾರ್ಡನ್‌ನಲ್ಲಿ ಪ್ರತಿಭಟನೆ ನಡೆಸಿದ ಗ್ರಾಮಸ್ಥರು, ಸರ್ಕಾರದ ಹೊಸ ಆದೇಶದ ಪ್ರಕಾರ ಗ್ರಾಮ ಪಂಚಾಯಿತಿಗಳು ಪಟ್ಟಣ ಪಂಚಾಯಿತಿಗಳಾಗಿ ಪರಿವರ್ತನೆಯಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾನೂನಿನ ಅನುಷ್ಠಾನ ಮುಂದುವರಿಸಬೇಕೆಂದು ಒತ್ತಾಯಿಸಿದರು. ಪೀರನವಾಡಿ ಗ್ರಾಪಂ ಅನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ಪಂಚಾಯಿತಿಯಲ್ಲಿ ಸುಮಾರು ಐದುನೂರು ಕುಟುಂಬಗಳು ನರೇಗಾ ಅಡಿಯಲ್ಲಿ ಬದುಕು ನಡೆಸುತ್ತಿವೆ. ಆದರೆ, ಪಟ್ಟಣ ಪಂಚಾಯಿತಿ ಆಗಿರುವುದರಿಂದ ಅವರಿಗೆ ನರೇಗಾದಡಿ ಉದ್ಯೋಗ ಸಿಗುತ್ತಿಲ್ಲ. ಈ ಗ್ರಾಪಂ ಕ್ಷೇತ್ರದಲ್ಲಿ ಪರ್ಯಾಯ ಉದ್ಯೋಗ ಇಲ್ಲದ್ದರಿಂದ ಇಲ್ಲಿ ಕೂಲಿ ಕಾರ್ಮಿಕರು ನರೇಗಾ ಉದ್ಯೋಗ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ತಮ್ಮ ಅಳಲು ತೋಡಿಕೊಂಡರು.
    ಈ ಸಮಸ್ಯೆ ಕೇವಲ ಈ ಒಂದು ಗ್ರಾಪಂಗೆ ಸೀಮಿತವಾಗಿಲ್ಲ. ಇದು ಇಡೀ ಕರ್ನಾಟಕ ರಾಜ್ಯದ ಸಮಸ್ಯೆಯಾಗಿದೆ. ಆದ್ದರಿಂದ ತಾವು ಮಧ್ಯಪ್ರವೇಶಿಸಿ ಅನ್ಯಾಯ ಆಗದಂತೆ ನೋಡಿಕೊಳ್ಳಬೇಕೆಂದು ಮನವಿ ಮೂಲಕ ಒತ್ತಾಯಿಸಿದರು.

    ಕೂಲಿ ಕಾರ್ಮಿಕರು ನರೇಗಾ ಉದ್ಯೋಗದಿಂದ ವಂಚಿತವಾದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಇದೇ ಸಂದರ್ಭದಲ್ಲಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ರಾಕೇಶ ತಳವಾರ, ಮಹದೇವ ದೊಡ್ಡಮನಿ, ಫಕೀರಪ್ಪ ಹರಿಜನ, ಮಹ್ಮದ್‌ರಫಿ ನದಾಫ್, ಮಂಜುನಾಥ ಜಾದವ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts