More

    ನರೇಗಾದಲ್ಲಿ ಕರ್ನಾಟಕ ಸಾಧನೆ

    ಚಿಕ್ಕೋಡಿ: ನರೇಗಾ ಯೋಜನೆಯಡಿ ಕೃಷಿ ಹೊಂಡ, ಬದು ನಿರ್ಮಾಣ, ಸಸಿ ನೆಡುವುದು, ಕೆರೆ ಅಭಿವೃದ್ಧಿ ಸೇರಿ ವಿವಿಧ ಕಾಮಗಾರಿ ಕೈಗೊಳ್ಳುವ ಮೂಲಕ ದೇಶದಲ್ಲೇ ಕರ್ನಾಟಕ ಹೆಚ್ಚು ಕೆಲಸ ಮಾಡಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ಪಟ್ಟಣದ ಪದ್ಮಾ ಕಾರ್ಯಾಲಯದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಅಬ್ದುಲ್ ನಜೀರಸಾಬ್ ರಾಜ್ಯ ಗ್ರಾಮೀಣ ಅಭಿವೃದ್ಧಿ, ಪಂಚಾಯತ್ ರಾಜ್ ಸಂಸ್ಥೆ ಮೈಸೂರು, ಜಿಪಂ ಬೆಳಗಾವಿ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗ್ರಾಪಂ ಅಧ್ಯಕ್ಷರು, ಪಿಡಿಒಗಳ ಒಂದು ದಿನದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.

    ಗ್ರಾಮದ ಅಭಿವೃದ್ಧಿಯಲ್ಲಿ ಗ್ರಾಪಂ ಅಧ್ಯಕ್ಷರ ಕಾರ್ಯ ಮಹತ್ವದ್ದಾಗಿದ್ದು, ನ್ಯಾಯ ಒದಗಿಸಲು ಪ್ರಾಮಾಣಿಕ ಕೆಲಸ ಮಾಡಬೇಕು. ಗ್ರಾಮಗಳಲ್ಲಿರುವ ಕೆರೆ ಅಭಿವೃದ್ಧಿ ಮಾಡಲು ಆಸಕ್ತಿ ವಹಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಸಸಿ ನೆಡಬೇಕು. ಅಂತರ್ಜಲ ಮಟ್ಟ ಹೆಚ್ಚಿಸಲು ನೀರು ಇಂಗಿಸುವ ಯೋಜನೆ ಅನುಷ್ಠಾನ ಮಾಡಬೇಕು ಎಂದ ಅವರು, ಚುನಾವಣೆ ಬಂದಾಗ ರಾಜಕೀಯ ಮಾಡೋಣ. ಚುನಾಯಿತರಾದ ಬಳಿಕ ಎಲ್ಲರೂ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.

    ಅಸಡ್ಡೆ ತೋರಿದರೆ ಕಠಿಣ ಕ್ರಮ: ಕೋವಿಡ್ ನಿರ್ವಹಣೆಯಲ್ಲಿ ರಾಜ್ಯ ಮೊದಲ ಸ್ಥಾನದಲ್ಲಿದೆ. ಗ್ರಾಪಂ ಕಾರ್ಯಪಡೆ, ವೈದ್ಯರು, ಅಂಗನವಾಡಿ, ಆಶಾ ಕಾರ್ಯಕರ್ತೆಯರ ಶ್ರಮದಿಂದ ಕೋವಿಡ್ ನಿರ್ವಹಣೆ ಆಗಿದೆ. ಗ್ರಾಪಂ ಮಟ್ಟದಲ್ಲಿ ಶೌಚಗೃಹ, ಕುಡಿಯುವ ನೀರು, ಚರಂಡಿ ವ್ಯವಸ್ಥೆ ನಿರ್ವಹಿಸುವುದರ ಜತೆಗೆ ಅಂಗನವಾಡಿ ಹಾಗೂ ಕನ್ನಡ ಶಾಲೆಗಳ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದರು.

    ಪಿಡಿಒಗಳು ಕಡ್ಡಾಯವಾಗಿ ಕಚೇರಿಯಲ್ಲಿದ್ದುಕೊಂಡು ಕೆಲಸ ನಿರ್ವಹಿಸಬೇಕು. ಅಸಡ್ಡೆ ತೋರಿದರೆ ಕಠಿಣ ಕ್ರಮ ಅನಿವಾರ್ಯ ಎಂದ ಅವರು, ಪ್ರವಾಹದಲ್ಲಿ ಮನೆ ಕುಸಿಯದೇ ಇದ್ದರೂ ಬೇಕು ಅಂತಲೇ ಮನೆ ಕೆಡವಿದವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಗ್ರಾಪಂ ಅಧ್ಯಕ್ಷರು, ಪಿಡಿಒಗಳು ಅಭಿವೃದ್ಧಿಗೆ ಮುನ್ನುಡಿ ಬರೆಯಬೇಕು ಎಂದರು.
    ಶಾಸಕ ಗಣೇಶ ಹುಕ್ಕೇರಿ ಮಾತನಾಡಿ, ಪ್ರವಾಹದಿಂದ ಗಡಿಭಾಗದಲ್ಲಿ ರಸ್ತೆಗಳು ಹಾಳಾಗಿದ್ದು, ಬೆಳಗಾವಿ ಜಿಲ್ಲೆಗೆ ಅದರಲ್ಲೂ ಕೃಷ್ಣಾ ತೀರದ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಿ ಅನುದಾನ ನೀಡಬೇಕು ಎಂದು ಕೋರಿದರು.

    ಕೆರೊನಾ ಸೇನಾನಿಗಳಾಗಿ ಪರಿಗಣನೆ ಶ್ಲಾಘನೀಯ: ಎಂಎಲ್‌ಸಿ ಮಹಾಂತೇಶ ಕವಟಗಿಮಠ ಮಾತನಾಡಿ, ಉಭಯ ಸರ್ಕಾರದ ಯೋಜನೆಗಳ ಮಾಹಿತಿಯನ್ನು ಗ್ರಾಪಂ ಅಧ್ಯಕ್ಷರಿಗೆ ತಿಳಿಸಿಕೊಡಲು ಕಾರ್ಯಾಗಾರ ಅನುಕೂಲವಾಗಿದೆ. ಕೋವಿಡ್ 2ನೇ ಅಲೆ ಸಂದರ್ಭದಲ್ಲಿ ಗ್ರಾಪಂ ಕಾರ್ಯಪಡೆ ಸದಸ್ಯರು ಜೀವದ ಹಂಗು ತೊರೆದು ಶ್ರಮಿಸಿದ್ದಾರೆ. ಅವರನ್ನು ಕೋವಿಡ್ ವಾರಿಯರ್ಸ್ ಆಗಿ ಸರ್ಕಾರ ಗುರುತಿಸಿರುವುದು ಶ್ಲಾಘನೀಯ. ಕೇರಳದ ಗ್ರಾಮೀಣಾಭಿವೃದ್ಧಿ ವ್ಯವಸ್ಥೆಯನ್ನು ರಾಜ್ಯದಲ್ಲೂ ಅನುಷ್ಠಾನಕ್ಕೆ ತರಲು ಸಚಿವ ಈಶ್ವರಪ್ಪ ಶ್ರಮಿಸಲಿದ್ದಾರೆ. ಚಿಕ್ಕೋಡಿ ತಾಲೂಕಿನಲ್ಲಿ 25 ಬ್ಯಾರೇಜ್ ನಿರ್ಮಾಣ ಮಾಡಿ, ನೀರು ಇಂಗಿಸಲು ಕ್ರಮ ವಹಿಸಲಾಗಿದೆ ಎಂದರು.

    ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್, ಪರಿಸರವಾದಿ ಶಿವನಾಂದ ಕಳವೆ, ಕೆರೆ ಪುನಶ್ಚೇತನ ಹಾಗೂ ರಾಜ್ಯ ವಿಕೇಂದ್ರಿಕರಣ ಯೋಜನಾ ಆರೋಗ್ಯ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ, ಮಾಜಿ ಶಾಸಕ ಸಂಜಯ ಪಾಟೀಲ, ಜಿಲ್ಲಾ ಪಂಚಾಯಿತಿ ಸಿಇಒ ಎಚ್.ವಿ.ದರ್ಶನ, ಸಿದ್ದು ಧೂಪದಾಳ, ಭೀಮಪ್ಪ ಲಾಳಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts