More

    ನರೇಗಲ್ಲ ಆಸ್ಪತ್ರೆಯಲ್ಲಿ ರೋಗಿಗಳಿಗಿಲ್ಲ ಚಿಕಿತ್ಸೆ

    ನರೇಗಲ್ಲ: ಪಟ್ಟಣದ 10 ಹಾಸಿಗೆಯುಳ್ಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ ಹತ್ತು ದಿನಗಳಿಂದ ವೈದ್ಯರಿಲ್ಲದೆ ರೋಗಿಗಳು ಪರದಾಡುತ್ತಿದ್ದಾರೆ. ಹೀಗಾಗಿ, ತುರ್ತು ಚಿಕಿತ್ಸೆಗೆ ಬಡ ರೋಗಿಗಳು ಖಾಸಗಿ ಆಸ್ಪತ್ರೆಗಳ ಮೊರೆ ಹೋಗುವುದು ಅನಿವಾರ್ಯವಾಗಿದೆ.

    ಪಟ್ಟಣ ಹಾಗೂ ಸುತ್ತಲಿನ ಜಕ್ಕಲಿ, ಹಾಲಕೆರೆ, ಬೂದಿಹಾಳ, ಮಾರನಬಸರಿ, ಕೋಡಿಕೊಪ್ಪ, ಕೋಚಲಾಪುರ, ತೋಟಗಂಟಿ, ದ್ಯಾಂಪೂರ, ಮಲ್ಲಾಪುರ, ಗದಗ ತಾಲೂಕಿನ ಕೋಟುಮಚಗಿ, ಯಲಬುರ್ಗಾ ತಾಲೂಕಿನ ಬಂಡಿಹಾಳ, ತೊಂಡಿಹಾಳ ಗ್ರಾಮಸ್ಥರು ಈ ಆಸ್ಪತ್ರೆಯನ್ನು ಅವಲಂಬಿಸಿದ್ದಾರೆ.

    ಅಗತ್ಯಕ್ಕೆ ತಕ್ಕಷ್ಟು ಸಿಬ್ಬಂದಿ ಇಲ್ಲದೆ, ಹೆಸರಿಗೆ ಮಾತ್ರ 24*7 (ನಿರಂತರವಾಗಿ ತೆರೆದಿರುವ) ಆಸ್ಪತ್ರೆ ಎನ್ನುವಂತಾಗಿದೆ. ಇರುವ ಇಬ್ಬರು ವೈದ್ಯರಲ್ಲಿ ಒಬ್ಬರನ್ನು ಗಜೇಂದ್ರಗಡದ ಕೋವಿಡ್ ಆಸ್ಪತ್ರೆಗೆ ಹಾಗೂ ಮತ್ತೊಬ್ಬರನ್ನು ಅಬ್ಬಿಗೇರಿ ಆಸ್ಪತ್ರೆಗೆ ನಿಯೋಜಿಸಲಾಗಿದೆ. ಹಿರಿಯ ಮಹಿಳಾ ಆರೋಗ್ಯ ಸಹಾಯಕಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ, ಎಸ್​ಡಿಸಿ ಹುದ್ದೆ ಖಾಲಿ ಇವೆ. ಇರುವ ಸಿಬ್ಬಂದಿ ಮೇಲೆ ಕೆಲಸದ ಒತ್ತಡ ಹೆಚ್ಚಾಗಿದೆ. ಐವರು ಮಹಿಳಾ ಆರೋಗ್ಯ ಸಹಾಯಕಿಯರು, ಕ್ಲರ್ಕ್, ಲ್ಯಾಬ್ ಟೆಕ್ನಿಷಿಯನ್, ಫಾರ್ವಸಿಸ್ಟ್ ಸೇರಿ 10 ಸಿಬ್ಬಂದಿ ಇದ್ದಾರೆ.

    11 ಕರೊನಾ ಪ್ರಕರಣಗಳು:

    ನರೇಗಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಒಟ್ಟು 11 ಕರೊನಾ ಪಾಸಿಟಿವ್ ಪ್ರಕರಣಗಳು ಕಂಡುಬಂದಿವೆ. ಪಾಸಿಟಿವ್ ಬಂದವರ ಪ್ರಾಥಮಿಕ, ದ್ವಿತೀಯ ಸಂರ್ಪತರ ಪರೀಕ್ಷೆ ಸೇರಿದಂತೆ ಆರೋಗ್ಯ ಇಲಾಖೆಗೆ ಸಂಬಂಧಿಸಿದ ಕೆಲಸ ಕಾರ್ಯಗಳನ್ನು ಲಭ್ಯವಿರುವ ಸಿಬ್ಬಂದಿಯೇ ನಿರ್ವಹಿಸುತ್ತಿದ್ದಾರೆ. ತುರ್ತು ಚಿಕಿತ್ಸೆ, ಹೇರಿಗೆಗಾಗಿ ಬರುವ ರೋಗಿಗಳನ್ನು ರೋಣ, ಗಜೇಂದ್ರಗಡ ಅಥವಾ ಗದಗ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಡಲಾಗುತ್ತಿದೆ.

    ತಪ್ಪದ ವಾಗ್ವಾದ:

    ಆಸ್ಪತ್ರೆಯಲ್ಲಿ ವೈದ್ಯರಿಲ್ಲದ್ದರಿಂದ ಬಡರೋಗಿಗಳು, ಅವರ ಸಂಬಂಧಿಕರು ಮತ್ತು ಆಸ್ಪತ್ರೆ ಸಿಬ್ಬಂದಿ ಮಧ್ಯೆ ನಿತ್ಯ ವಾಗ್ವಾದ ನಡೆಯುತ್ತಿದೆ. ಸಾವಿರಾರು ಜನರ ಆರೋಗ್ಯ ಕಾಪಾಡಬೇಕಾದ ಆಸ್ಪತ್ರೆಗೆ ವೈದ್ಯರಿಲ್ಲ ಎಂದರೆ ಹೇಗೆ? ಆಸ್ಪತ್ರೆಗೆ ಬೀಗ ಹಾಕಿ ಎಂದು ಸಾರ್ವಜನಿಕರು ಜಗಳಕ್ಕೆ ನಿಲ್ಲುತ್ತಾರೆ ಎಂದು ಹೆಸರು ಹೇಳಲು ಇಚ್ಛಿಸದ ಆಸ್ಪತ್ರೆ ಸಿಬ್ಬಂದಿ ಬೇಸರ ವ್ಯಕ್ತಪಡಿಸುತ್ತಾರೆ.

    ರೋಣ, ಗಜೇಂದ್ರಗಡ ತಾಲೂಕಿನ ಕರೊನಾ ರೋಗಿಗಳ ಚಿಕಿತ್ಸೆಗಾಗಿ ಕೋವಿಡ್ ಆಸ್ಪತ್ರೆಗಳನ್ನು ಪ್ರಾರಂಭಿಸಲಾಗಿದೆ. ಅಲ್ಲಿಗೆ ತಾಲೂಕಿನ ವಿವಿಧ ಆಸ್ಪತ್ರೆಗಳ ವೈದ್ಯರನ್ನು ಸರತಿಯ ಮೇಲೆ ನಿಯೋಜಿಸಲಾಗುತ್ತಿದೆ. 10 ದಿನಗಳ ಕಾಲ ಕೋವಿಡ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಿ, 4 ದಿನ ರಜೆ ಮುಗಿದ ಮೇಲೆ ವೈದ್ಯರು ತಮ್ಮ ಮೂಲ ಸ್ಥಾನಗಳಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.

    | ಡಾ. ಬಿ.ಎಸ್. ಭಜಂತ್ರಿ, ತಾಲೂಕು ವೈದ್ಯಾಧಿಕಾರಿ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts