More

    ನರಗುಂದದಲ್ಲಿ ಹುತಾತ್ಮ ರೈತರಿಗೆ ನಮನ

    • ನರಗುಂದ: 40ನೇ ರೈತ ಹುತಾತ್ಮ ದಿನಾಚರಣೆ ಪ್ರಯುಕ್ತ ಪಟ್ಟಣದಲ್ಲಿ ರೈತ ವೀರಪ್ಪ ಕಡ್ಲಿಕೊಪ್ಪ ಅವರ ವೀರಗಲ್ಲಿಗೆ ವಿವಿಧ ಸಂಘಟನೆಗಳು, ರಾಜಕೀಯ ಪಕ್ಷದ ಮುಖಂಡರು ಮಂಗಳವಾರ ಮಾಲಾರ್ಪಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು.

    ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಾಧ್ಯಕ್ಷ ಕೆ.ಜೆ. ಶಾಂತಸ್ವಾಮಿಮಠ ಹಾಗೂ ಗದಗ ಜಿಲ್ಲಾಧ್ಯಕ್ಷ ಬಸವರಾಜ ಸಾಬಳೆ ಮಾತನಾಡಿ, ‘1980ರಲ್ಲಿ ರೈತರು ನೀರಿನ ಕರ ಆಕರಣೆ ರದ್ದತಿಗೆ ಆಗ್ರಹಿಸಿ ನಡೆಸಿದ್ದ ಹೋರಾಟಕ್ಕೆ ಅಂದಿನ ತಹಸೀಲ್ದಾರ್ ಎಸ್.ಎಫ್. ವರೂರ ಕಿಮ್ಮತ್ತು ಕೊಡಲಿಲ್ಲ. ಬದಲಾಗಿ ರೈತರ ಮೇಲೆಯೇ ಗೋಲಿಬಾರ್ ಮಾಡಲು ಸೂಚಿಸಿದ್ದರಿಂದ ವೀರಪ್ಪ ಕಡ್ಲಿಕೊಪ್ಪ ಹಾಗೂ ಮೂವರು ಪೊಲೀಸರು ಹುತಾತ್ಮರಾದರು ಎಂದರು.

    ಎಪಿಎಂಸಿ, ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಸೇರಿ ವಿವಿಧ ರೈತ ವಿರೋಧಿ ಕಾಯ್ದೆಗಳನ್ನು ಸರ್ಕಾರ ಕೈಬಿಡಬೇಕು. ಕರೊನಾತಂಕ ಮುಗಿದ ಬಳಿಕ ತಕ್ಷಣವೇ ಕಳಸಾ-ಬಂಡೂರಿ ಕಾಮಗಾರಿ ಆರಂಭಿಸಬೇಕು ಎಂದರು.

    ಮಹದಾಯಿಗಾಗಿ ಮಹಾವೇದಿಕೆ ಅಧ್ಯಕ್ಷ ಶಂಕರಪ್ಪ ಅಂಬಲಿ ಮಾತನಾಡಿ, ಮಹದಾಯಿ ಯೋಜನೆಯನ್ನು ಸರ್ಕಾರ ತೀವ್ರಗತಿಯಲ್ಲಿ ಕೈಗೆತ್ತಿಕೊಳ್ಳಬೇಕು. ರಾಜ್ಯ ಸರ್ಕಾರ ಈ ಮಹತ್ವದ ಯೋಜನೆಗೆ ನೀಡಿರುವ 500 ಕೋಟಿ ರೂಪಾಯಿ ಬದಲಿಗೆ 1,675 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಕ್ಕೆ ಶ್ರಮಿಸಬೇಕು. 2019ನೇ ಸಾಲಿನ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಹಣ ಜಮೆ ಮಾಡಬೇಕು ಎಂದು ಒತ್ತಾಯಿಸಿದರು.

    ನರಗುಂದ ಪೊಲೀಸ್ ಠಾಣೆಯಲ್ಲಿ ನಿರ್ವಿುಸಿರುವ ಹುತಾತ್ಮ ಪೊಲೀಸರ ಸ್ಮಾರಕಕ್ಕೆ ಕಳಸಾ-ಬಂಡೂರಿ ಕೇಂದ್ರ ಯುವ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಅವರು ಮಾಲಾರ್ಪಣೆ ಮಾಡಿದರು. ‘ಮಹದಾಯಿ ಹೋರಾಟದಲ್ಲಿ ಗಲಾಟೆಗಳು ನಡೆದಿರಬಹುದು. ಇದು ಅನಿವಾರ್ಯ. ಆದರೆ, ಈ ಹೋರಾಟಕ್ಕೆ ಪೊಲೀಸರು ನೀಡಿರುವ ಸಹಾಯ, ಸಹಕಾರ ಬಣ್ಣಿಸಲಾಗದು. ಆದ್ದರಿಂದ ಇಂದಿನಿಂದ ನಾವೆಲ್ಲರೂ ಪರಸ್ಪರ ಅಣ್ಣ-ತಮ್ಮಂದಿರಂತೆ ಸರ್ಕಾರದ ವಿರುದ್ಧ ಹೋರಾಟ ನಡೆಸಿ ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕಿದೆ ಎಂದರು.

    ಕೂಡಲಸಂಗಮದ ಜಯ ಮೃತ್ಯುಂಜಯ ಸ್ವಾಮೀಜಿ, ನವಲಗುಂದದ ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ ಅವರು ಹುತಾತ್ಮ ರೈತರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು.

    ತಹಸೀಲ್ದಾರ್ ಎ.ಎಚ್. ಮಹೇಂದ್ರ, ರೈತ ಸೇನಾ ಕರ್ನಾಟಕ, ಎಬಿವಿಪಿ, ಜಯ ಕರ್ನಾಟಕ, ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣಶೆಟ್ಟಿ ಹಾಗೂ ನಾರಾಯಣ ಗೌಡರ ಬಣದ ಸದಸ್ಯರು, ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಆಮ್ ಆದ್ಮಿ ಪಕ್ಷಗಳ ಮುಖಂಡರು, ಕಾರ್ಯಕರ್ತರು ವೀರಗಲ್ಲಿಗೆ ಗೌರವ ನಮನ ಸಲ್ಲಿಸಿದರು.

    ಪ್ರವೀಣ ಯಾವಗಲ್ಲ, ರಾಜು ಕಲಾಲ, ವಿಠ್ಠಲ ಜಾಧವ, ಸಿ.ಎಸ್. ಪಾಟೀಲ, ಪಿ.ಸಿ. ಹಿರೇಮನಿ, ವೀರೇಶ ಸೊಬರದಮಠ, ಚನ್ನು ನಂದಿ, ಹನಮಂತ ಮಜ್ಜಿಗುಡ್ಡ, ನಬೀಸಾಬ್ ಕಿಲ್ಲೇದಾರ, ಸಿದ್ದಪ್ಪ ನರಗುಂದ, ನಾಗೇಶ ಅಪ್ರೋಜಿ, ಶಂಕರಗೌಡ ಪಾಟೀಲ, ವೀರಣ್ಣ ಸೊಪ್ಪಿನ, ಚನ್ನಪ್ಪ ಪೂಜಾರ, ರಾಘವೇಂದ್ರ ನಾಯಕ, ಸಿದ್ದಪ್ಪ ಗುಡದರಿ, ಆರ್.ಎನ್. ಪಾಟೀಲ, ಶ್ರೀಪಾದ ಆನೇಗುಂದಿ, ಲೀಲಕ್ಕ ಹಸಬಿ, ಚನ್ನಬಸಪ್ಪ ಕಂಠಿ, ಶಂಕ್ರಣ್ಣ ವಾಳದ, ಎಸ್.ಬಿ. ಜೋಗಣ್ಣವರ, ಆನಂದ ಹೂಗಾರ, ಅಭಿಷೇಕ ಹಡಪದ, ಡಾ.ಎಚ್.ಆರ್.ಹಿರೇಹಾಳ, ಎಚ್.ಎನ್. ಹಳಕಟ್ಟಿ, ಮಂಜುನಾಥ ಪೂಜಾರ, ಬಸಪ್ಪ ಹಡಪದ ಇತರರು ಉಪಸ್ಥಿತರಿದ್ದರು.

    ಪುರಸಭೆಯಿಂದ ಮೆರವಣಿಗೆ

    ಕರೊನಾ ವೈರಸ್ ಹರಡುವ ಭೀತಿ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮವಾಗಿ ಸಾರ್ವಜನಿಕ ಮೆರವಣಿಗೆ ನಿಷೇಧಿಸಲಾಗಿತ್ತು. ಆದರೆ, ಮಹದಾಯಿಗಾಗಿ ಮಹಾವೇದಿಕೆ ಸಂಘಟನೆಯ ಸದಸ್ಯರು ಪರಸ್ಪರ ಅಂತರ ಕಾಪಾಡಿಕೊಂಡು ಬಾಬಾಸಾಹೇಬ ಭಾವೆ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಪುರಸಭೆಯಿಂದ ವೇದಿಕೆವರೆಗೆ ಮೆರವಣಿಗೆ ನಡೆಸಿದರು.

    ಈ ಮೊದಲು ಮಹದಾಯಿ ಹೋರಾಟಕ್ಕೆ ಬೆಂಬಲವಾಗಿ ನಿಂತಿದ್ದ ಕೂಡಲಸಂಗಮದ ಜಯ ಮೃತ್ಯುಂಜಯ ಸ್ವಾಮೀಜಿ ಕೆಲವೊಂದು ಘಟನಾವಳಿಗಳ ಬಳಿಕ ಹೋರಾಟದಿಂದ ದೂರ ಉಳಿದಿದ್ದರು. ಆದರೆ, ಮಂಗಳವಾರ ನಡೆದ ರೈತ ಹುತಾತ್ಮ ದಿನಾಚರಣೆಯಲ್ಲಿ ಕಾಣಿಸಿಕೊಂಡರು.

    ಮಹಾ ಯೋಜನೆ ಅನುಷ್ಠಾನಕ್ಕೆ ಸರ್ಕಾರ ಬದ್ಧ

    ನರಗುಂದ: ಮಹದಾಯಿ ಕಳಸಾ-ಬಂಡೂರಿ ನಾಲಾ ಜೋಡಣೆಗೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹೇಳಿದರು.

    40ನೇ ರೈತ ಹುತಾತ್ಮ ದಿನಾಚರಣೆ ಪ್ರಯುಕ್ತ ಪಟ್ಟಣದಲ್ಲಿರುವ ಹುತಾತ್ಮ ರೈತ ವೀರಪ್ಪ ಕಡ್ಲಿಕೊಪ್ಪ ಸ್ಮಾರಕಕ್ಕೆ ಮಂಗಳವಾರ ಗೌರವ ನಮನ ಸಲ್ಲಿಸಿ ಅವರು ಮಾತನಾಡಿದರು. 1980ರಲ್ಲಿ ನಡೆದ ನರಗುಂದದ ರೈತ ಬಂಡಾಯ ಚಾರಿತ್ರಿಕ, ಐತಿಹಾಸಿಕ ಹೋರಾಟವಾಗಿ ಅಂದಿನ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಗಮನವನ್ನು ಸೆಳೆದಿದೆ. ಕರೊನಾ ಹಾಗೂ ಮಹದಾಯಿ ಕಳಸಾ-ಬಂಡೂರಿ ನಾಲಾ ಜೋಡಣೆ ಯೋಜನೆಗೆ ಸಂಬಂಧಿಸಿದ ಕೆಲ ವ್ಯಾಜ್ಯಗಳು ಸದ್ಯದಲ್ಲೇ ಬಗೆಹರಿಯಲಿದ್ದು, ತಕ್ಷಣವೇ ಕಾಮಗಾರಿ ಆರಂಭಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಜಿಲ್ಲಾ ಬಿಜೆಪಿ ಅಧ್ಯಕ್ಷ ಮೋಹನ ಮಾಳಶೆಟ್ಟಿ, ಪ್ರಧಾನ ಕಾರ್ಯದರ್ಶಿ ಮಂಜು ಮೆಣಸಗಿ, ಎ.ಎಂ. ಹುಡೇದ, ಶಿವಾನಂದ ಮುತವಾಡ, ಗುರಪ್ಪ ಅದೆಪ್ಪನವರ, ಅನಿಲ ಧರೆಯಣ್ಣವರ, ಸಿದ್ದೇಶ ಹೂಗಾರ, ಹನುಮಂತ ಹವಾಲ್ದಾರ, ಬಸು ಪಾಟೀಲ, ರಾಚನಗೌಡ ಪಾಟೀಲ, ಚಂದ್ರಗೌಡ ಪಾಟೀಲ, ಉಮೇಶಗೌಡ ಪಾಟೀಲ, ಪ್ರಕಾಶ ಹಾದಿಮನಿ, ಸಂತೋಷ ಹಂಚಿನಾಳ, ನಾಗರಾಜ ನೆಗಳೂರ, ಚನ್ನಯ್ಯ ಸಂಗಳಮಠ, ಬಸವರಾಜ ಹುಲಕುಂದ, ವಿಠ್ಠಲ ಹವಾಲ್ದಾರ, ರಿಯಾಜ್ ಕೊಣ್ಣೂರ, ಹಸನ್ ನವದಿ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts