More

    ನರಗುಂದದಲ್ಲಿ ರೈತರ ಸಮಾವೇಶ 21ಕ್ಕೆ -ಕುರುವ ಗಣೇಶ್ ಮಾಹಿತಿ 

    ದಾವಣಗೆರೆ: ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ನರಗುಂದ-ನವಲಗುಂದ 43ನೇ ರೈತ ಹುತಾತ್ಮರ ದಿನಾಚರಣೆ ಪ್ರಯುಕ್ತ ಜುಲೈ 21 ರಂದು ನರಗುಂದದಲ್ಲಿ ರೈತರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ರಾಜ್ಯ ಕಾರ್ಯಾಧ್ಯಕ್ಷ ಕುರುವ ಗಣೇಶ್ ತಿಳಿಸಿದರು.
    ಅಂದು ಬೆಳಗ್ಗೆ 11 ಗಂಟೆಗೆ ಹುತಾತ್ಮ ರೈತರ ವೀರಗಲ್ಲಿನ ಹತ್ತಿರ ನಡೆಯುವ ಸಮಾವೇಶದಲ್ಲಿ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದು ಸೇರಿ ಸರ್ಕಾರದ ವಿರುದ್ಧ ಮುಂದಿನ ಹೋರಾಟ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ರಾಜ್ಯ ಸರ್ಕಾರ ಬಡವರ ಪರ ಐದು ಗ್ಯಾರಂಟಿ ಯೋಜನೆ ಜಾರಿಗೊಳಿಸಿರುವುದು ಸ್ವಾಗತಾರ್ಹ. ಇವುಗಳ ಅನುಷ್ಠಾನಕ್ಕೆ ಯಾವುದೇ ಹೊಸ ತೆರಿಗೆ ಹೇರಬಾರದು ಮತ್ತು ಸಾಲ ಮಾಡಬಾರದು. ಅನ್ನಭಾಗ್ಯ ಯೋಜನೆಗೆ ಹೊರ ರಾಜ್ಯದಿಂದ ಅಕ್ಕಿ ತರಿಸದೆ ರಾಜ್ಯದ ರೈತರಿಂದಲೇ ಭತ್ತ ಖರೀದಿಸಬೇಕು ಹಾಗೂ ಪಡಿತರ ಅಕ್ಕಿಗೆ ಹಣ ನೀಡುವ ಬದಲು ರಾಗಿ, ಜೋಳ ವಿತರಣೆ ಮಾಡಬೇಕು ಎಂದು ಒತ್ತಾಯಿಸಿದರು.
    ರೈತರಿಗೆ ಬಡ್ಡಿರಹಿತ ಸಾಲ ನೀಡುವ ಗ್ಯಾರಂಟಿಯನ್ನು ಸರ್ಕಾರ ಘೋಷಿಸಬೇಕು. ಟನ್ ಕಬ್ಬಿಗೆ 4500 ರೂ. ಬೆಲೆ ನಿಗದಿ ಮಾಡಬೇಕು, ಕಾರ್ಖಾನೆಗಳ ಬಾಕಿ ಹಣವನ್ನು ರೈತರಿಗೆ ತಕ್ಷಣ ಕೊಡಿಸಬೇಕು. ಮಹದಾಯಿ, ಕಳಸ ಬಂಡೂರಿ ಯೋಜನೆಯನ್ನು ಶೀಘ್ರ ಕಾರ್ಯಗತಗೊಳಿಸಬೇಕು. ಡಾ.ಸ್ವಾಮಿನಾಥನ್ ವರದಿ ಪ್ರಕಾರ ಎಂಎಸ್‌ಪಿ ನಿಗದಿಪಡಿಸಿ ಶಾಸನಬದ್ಧಗೊಳಿಸಬೇಕು ಎಂದು ಆಗ್ರಹಿಸಿದರು.
    ಅತಿವೃಷ್ಟಿ ಹಾಗೂ ಅನಾವೃಷ್ಟಿ ಸಮರ್ಥವಾಗಿ ನಿಭಾಯಿಸದ ಕಾರಣ ರೈತರ ಸಾಲ ಮನ್ನಾ ಮಾಡಬೇಕು. ಬೆಳೆವಿಮೆ ಪದ್ಧತಿ ಅಮೂಲಾಗ್ರ ತಿದ್ದುಪಡಿ ಮಾಡಬೇಕು. ತುಂಗಾ ಜಲಾಶಯ ಭರ್ತಿಯಾಗಿದ್ದು, ನ್ಯಾಮತಿ, ಹೊನ್ನಾಳಿ ಹಾಗೂ ಶಿವಮೊಗ್ಗ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ಭತ್ತ ಬೆಳೆಯಲು ನೀರು ಹರಿಸಬೇಕು. ದಾವಣಗೆರೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಅಡಕೆ ಕಟ್ಟುವ ರೈತರಿಗೆ ನರೇಗಾ ಯೋಜನೆ ಹಾಗೂ ಹನಿ ನೀರಾವರಿ ಸಹಾಯಧನ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.
    ರೈತ ಸಂಘದ ರಾಜ್ಯ ಉಪಾಧ್ಯಕ್ಷ ಹೊನ್ನೂರು ಮುನಿಯಪ್ಪ, ಜಿಲ್ಲಾಧ್ಯಕ್ಷ ಮರುಳಸಿದ್ದಯ್ಯ, ಮಾಯಕೊಂಡ ಬೀರಪ್ಪ, ಬಿಜೋಗಟ್ಟೆ ಷಣ್ಮುಖಪ್ಪ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts