More

    ನಮ್ಮ ನಾಡಿನ ಕಲೆ, ಸಂಸ್ಕೃತಿಯ ಪ್ರತೀಕ

    ನಾಗಮಂಗಲ: ವಿಶ್ವಕರ್ಮವೆಂಬುದು ಒಂದು ಜಾತಿಯಲ್ಲ. ಅದು ನಮ್ಮ ನಾಡಿನ ಕಲೆ ಮತ್ತು ಸಂಸ್ಕೃತಿಯ ಪ್ರತೀಕ ಎಂದು ಶಾಸಕ ಸುರೇಶ್‌ಗೌಡ ಬಣ್ಣಿಸಿದರು.

    ಪಟ್ಟಣದ ತಾಲೂಕು ಆಡಳಿತ ಸೌಧದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿಶ್ವಕರ್ಮ ಎಂದರೆ ಕೇವಲ ಚಿನ್ನಬೆಳ್ಳಿ ಹಾಗೂ ವಿಗ್ರಹಗಳನ್ನು ಮಾಡುವವರು ಎಂಬ ತಪ್ಪು ಭಾವನೆ ಇದೆ. ಆದರೆ ಪ್ರತಿಯೊಬ್ಬ ಕುಶಲಕರ್ಮಿ ಕೂಡ ವಿಶ್ವಕರ್ಮನಾಗಿದ್ದಾನೆ. ವಿಶ್ವಕರ್ಮ ಇತರ ಎಲ್ಲ ಜನಾಂಗಗಳಿಗಿಂತ ಅತ್ಯಂತ ಶ್ರೇಷ್ಠ ಜನಾಂಗವಾಗಿದೆ. ಇಡೀ ಬ್ರಹ್ಮಾಂಡ ನಿರ್ಮಿಸಿದವರು ವಿಶ್ವಕರ್ಮರಾಗಿದ್ದಾರೆ. ಈ ಜನಾಂಗವಿಲ್ಲದೆ ಮನುಕುಲ ಬದುಕಲು ಸಾಧ್ಯವಿಲ್ಲ ಎಂಬಂತೆ ಜಗತ್ತು ನಿರ್ಮಾಣವಾಗಿದೆ. ಆದರೀಗ ವಿವಿಧ ಹೆಸರಿನ ಸಂಘಟನೆಗಳ ಹೆಸರಿನಲ್ಲಿ ಜನಾಂಗ ಹರಿದು ಹಂಚಿಹೋಗಿದೆ. ಹೀಗಾಗಿ ಎಲ್ಲರನ್ನೂ ಒಗ್ಗೂಡಿಸುವ ಮೂಲಕ ವಿಶ್ವಕರ್ಮ ಎಂಬ ಪರಂಪರೆಗಿರುವ ಪ್ರಸಿದ್ಧಿಯನ್ನು ಉಳಿಸಬೇಕಿದೆ ಎಂದರು.

    ಭಾರತೀಯ ವಿಶ್ವಕರ್ಮ ಸೇವಾ ಪರಿಷತ್ ರಾಜ್ಯಾಧ್ಯಕ್ಷ ಈಶ್ವರ್‌ವಿಶ್ವಕರ್ಮ ಮಾತನಾಡಿ, ವಿಶ್ವಕರ್ಮರ ಪಂಚವೃತ್ತಿಗಳಿಂದ ಇಂದು ವಿಜ್ಞಾನ ಬೆಳೆಯುತ್ತಿದೆ. ಆದರೆ ನಮ್ಮ ಸಮಾಜವನ್ನು ಸರ್ಕಾರ ಕಡೆಗಣಿಸಿದೆ. ನಮ್ಮಿಂದ ಕೋಟ್ಯಂತರ ರೂಪಾಯಿ ಗಳಿಸುತ್ತಿದ್ದರೂ ಭಿಕ್ಷುಕರಂತೆ ಕಾಣುತ್ತಿದೆ. ವಿಶ್ವಕರ್ಮ ಅಭಿವೃದ್ಧಿ ನಿಗಮ ಮಂಡಳಿಗೆ 20 ಕೋಟಿ ರೂ. ನೀಡುತ್ತಿದೆ. ಅದು ಒಂದು ತಾಲೂಕಿಗೆ ಸಾಕಾಗುವುದಿಲ್ಲ. ಹೀಗಾಗಿ 200 ಕೋಟಿ ರೂ. ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದರು.

    ಡಾ.ನಿರಂಜನ ಸ್ವಾಮೀಜಿ ಆಶೀರ್ವಚನ ನೀಡಿದರು. ವಿಶ್ವಕರ್ಮ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ತೆರೆದ ವಾಹನದಲ್ಲಿ ವಿಶ್ವಕರ್ಮ ಮಹರ್ಷಿಯ ಭಾವಚಿತ್ರವನ್ನಿರಿಸಿ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಮಾಡಲಾಯಿತು.

    ಉಪತಹಸೀಲ್ದಾರ್ ಮಲ್ಲಿಕಾರ್ಜುನ್, ಪುರಸಭೆ ಅಧ್ಯಕ್ಷೆ ಆಶಾ ವಿಜಯ್‌ಕುಮಾರ್, ತಾಲೂಕು ಎಸ್‌ಎಸ್‌ಕೆ ವಿಶ್ವಕರ್ಮ ಸಂಘದ ಅಧ್ಯಕ್ಷ ಕೃಷ್ಣಾಚಾರ್, ಮುಖಂಡರಾದ ತಿಲಕೇಶಮೂರ್ತಿ, ಕೆಂಪೇಗೌಡ, ಶ್ರೀನಿವಾಸ್, ರಮೇಶ್, ಲಕ್ಷ್ಮೀಸಾಗರ್ ಮತ್ತಿತರಿದ್ದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts