More

    ನಮ್ಮ ನಡೆ ಅಂಗವಿಕಲ ಮಕ್ಕಳ ಮನೆ ಕಡೆ

    ಹಾವೇರಿ: ಕರೊನಾದಿಂದಾಗಿ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತವಾಗಬಾರದು ಎಂದು ಶಿಕ್ಷಣ ಇಲಾಖೆ ವಿದ್ಯಾಗಮ ಯೋಜನೆ ಜಾರಿಗೊಳಿಸಿದೆ. ಈ ಮಹತ್ವದ ಯೋಜನೆಯ ಲಾಭ ತಾಲೂಕಿನಲ್ಲಿರುವ 612 ಅಂಗವಿಕಲ ವಿದ್ಯಾರ್ಥಿಗಳಿಗೂ ದೊರೆಯಲಿ ಎಂಬ ಸದುದ್ದೇಶದಿಂದ ಸ್ವತಃ ಬಿಇಒ ವಿದ್ಯಾರ್ಥಿಗಳ ಮನೆ ಕಡೆಗೆ ಹೆಜ್ಜೆ ಹಾಕುತ್ತಿದ್ದಾರೆ.

    ‘ನಮ್ಮ ನಡೆ ಅಂಗವಿಕಲ ಮಕ್ಕಳ ಮನೆ ಕಡೆ’ ಎಂಬ ಕಾರ್ಯಕ್ರಮ ರೂಪಿಸಿ ಬಿಇಒ ನೇತೃತ್ವದಲ್ಲಿ 32 ಸಮನ್ವಯಾಧಿಕಾರಿಗಳ ಮೇಲುಸ್ತುವಾರಿಯಲ್ಲಿ ತಾಲೂಕಿನಲ್ಲಿರುವ ಎಲ್ಲ ಅಂಗವಿಕಲ ಮಕ್ಕಳ ಮನೆಗೆ ಭೇಟಿ ನೀಡಲಾಗುತ್ತಿದೆ. ವಿದ್ಯಾಗಮ ಯೋಜನೆಯ ಮಾಹಿತಿಯ ಜೊತೆಗೆ ಆರೋಗ್ಯ ಜಾಗೃತಿ ಕುರಿತು ಅರಿವು ಮೂಡಿಸಲಾಗುತ್ತಿದೆ.

    ಹಾವೇರಿ ತಾಲೂಕಿನಲ್ಲಿ ದೃಷ್ಟಿದೋಷ, , ದೈಹಿಕ ವಿಕಲತೆ, ಬುದ್ಧಿ ಮಾಂದ್ಯತೆ, ಬಹುವಿಕಲತೆ, ಆಟಿಸಂ ಸೇರಿ ಅನೇಕ ವಿಕಲತೆಗಳಿಂದ ಮಕ್ಕಳು ಬಳಲುತ್ತಿದ್ದಾರೆ. ಅದರಲ್ಲಿ 64 ಮಕ್ಕಳು ಶಾಲೆಗೆ ಬರಲು ಆಗದೇ ಮನೆಯಲ್ಲಿಯೇ ಉಳಿದಿದ್ದು, ಅವರಿಗೆ ಗೃಹಾಧಾರಿತ ಶಿಕ್ಷಣವನ್ನು ನೀಡಲಾಗುತ್ತಿದೆ. ಇದರಿಂದ ಅಂಗವಿಕಲ ಮಕ್ಕಳಿಗೂ ನಿರಂತರ ಕಲಿಕೆಯ ಪ್ರಯೋಜನ ದೊರೆಯಲಿದೆ. ಅವಶ್ಯವಿರುವ ಮಕ್ಕಳಿಗೆ ವೈದ್ಯಕೀಯ ಸೌಲಭ್ಯದ ಕುರಿತೂ ಶಿಕ್ಷಕರು ಮಾರ್ಗದರ್ಶನ ಮಾಡಲಿದ್ದಾರೆ ಎಂದು ಬಿಇಒ ಎಂ.ಎಚ್. ಪಾಟೀಲ ತಿಳಿಸಿದರು.

    ಶುಕ್ರವಾರ ಎಂ.ಎಚ್. ಪಾಟೀಲ ಅವರೇ ಗುತ್ತಲ ಭಾಗದ ಅನೇಕ ಗ್ರಾಮಗಳಿಗೆ ಭೇಟಿ ನೀಡಿ ಗೃಹಾಧಾರಿತ ಶಿಕ್ಷಣ ಪಡೆಯುವ ಕುರಿತು 16 ಅಂಗವಿಕಲ ಮಕ್ಕಳಿಗೆ ಮಾಹಿತಿ ನೀಡಿದರು. ಹಾಗೆಯೇ ಪಾಲಕರು ಹಾಗೂ ಮಕ್ಕಳಿಗೆ ಸ್ವಚ್ಛತೆ, ಕರೊನಾ ನಿಯಂತ್ರಣ ಕ್ರಮ ಸೇರಿದಂತೆ ಆರೋಗ್ಯ ವೃದ್ಧಿಯ ಮಾರ್ಗದರ್ಶನ ನೀಡಿದರು.

    ಅಂಗವಿಕಲ ವಿದ್ಯಾರ್ಥಿಗಳ ಆರೋಗ್ಯ ರಕ್ಷಣೆಗೆ ನಿಯಮಿತವಾಗಿ ಸ್ಥಳೀಯ ಆರೋಗ್ಯ ಕೇಂದ್ರಗಳಿಗೆ ಹೋಗಿ ತಪಾಸಣೆ ಮಾಡಿಸಿಕೊಳ್ಳಲೂ ಈ ಕಾರ್ಯಕ್ರಮದಡಿ ಅನುಕೂಲ ಕಲ್ಪಿಸಿಕೊಡಲಾಗಿದೆ. ತಾಲೂಕಿನಲ್ಲಿ ನೇಮಿಸಿರುವ ಎಲ್ಲ ಮೇಲುಸ್ತುವಾರಿ ಅಧಿಕಾರಿಗಳು, ಮುಖ್ಯಶಿಕ್ಷಕರು, ಶಿಕ್ಷಕರು ಈಗಾಗಲೇ 228 ಅಂಗವಿಕಲ ಮಕ್ಕಳ ಮನೆಗೆ ಭೇಟಿ ನೀಡಿ ಮಾರ್ಗದರ್ಶನ ನೀಡಿದ್ದಾರೆ.

    ಪ್ರಸ್ತುತ ಪರಿಸ್ಥಿತಿಯಲ್ಲಿ ಅಂಗವಿಕಲ ಮಕ್ಕಳು ಶಾಲೆಗೆ ಬರಲು ಸಾಧ್ಯವಾಗದ ಕಾರಣ ವಿದ್ಯಾಗಮ ನಿರಂತರ ಕಲಿಕಾ ಯೋಜನೆಯ ಲಾಭ ಅವರಿಗೂ ದೊರೆಯಲಿ ಎಂಬ ಸದುದ್ದೇಶದಿಂದ ‘ನಮ್ಮ ನಡೆ ಅಂಗವಿಕಲ ಮಕ್ಕಳ ಮನೆ ಕಡೆಗೆ’ ಕಾರ್ಯಕ್ರಮ ರೂಪಿಸಲಾಗಿದೆ. ಮೇಲುಸ್ತುವಾರಿ ಅಧಿಕಾರಿಗಳು ಅಂಗವಿಕಲ ಮಕ್ಕಳಿಗೆ ಶೈಕ್ಷಣಿಕ ಹಾಗೂ ವೈದ್ಯಕೀಯ ಮಾರ್ಗದರ್ಶನ ನೀಡಲಿದ್ದಾರೆ. 32 ಮೇಲುಸ್ತುವಾರಿ ಅಧಿಕಾರಿಗಳನ್ನಾಗಿ ಇಸಿಒ, ಬಿಆರ್​ಪಿ, ಬಿಐಇಆರ್​ಟಿಗಳನ್ನು ನೇಮಿಸಲಾಗಿದೆ. ಅವರು ಸ್ಥಳೀಯ ಶಿಕ್ಷಕರೊಂದಿಗೆ ಅಂಗವಿಕಲ ಮಕ್ಕಳ ಮನೆಗೆ ಹೋಗಿ ಶೈಕ್ಷಣಿಕ ಬೆಳವಣಿಗೆ ಜೊತೆಗೆ ಆರೋಗ್ಯ ವೃದ್ಧಿಗೂ ಮಾಹಿತಿ ನೀಡಲಿದ್ದಾರೆ.

    | ಎಂ.ಎಚ್. ಪಾಟೀಲ ಬಿಇಒ ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts