More

    ನಮ್ಮೂರಿಗೆ ಹೊರಗಿನವರು ಬರಬೇಡಿ

    ಶಿರಸಿ: ಹೊರ ಊರುಗಳಿಂದ ಬರುವವರ ಜತೆ ಕರೊನಾ ವೈರಸ್ ತಮ್ಮ ಹಳ್ಳಿಗಳಿಗೆ ಪ್ರವೇಶಿಸದಂತೆ ಮುನ್ನೆಚ್ಚರಿಕಾ ಕ್ರಮವಾಗಿ ತಾಲೂಕಿನ ಹಲವು ಗ್ರಾಮಗಳಿಗೆ ಸ್ವತಃ ಗ್ರಾಮಸ್ಥರೇ ದಿಗ್ಬಂಧನ ಹಾಕಿದ್ದಾರೆ. ಇಂಥ ಗ್ರಾಮಗಳಿಗೆ ಏಪ್ರಿಲ್ 14ರವರೆಗೂ ಹೊರ ಜನರ ಪ್ರವೇಶ ನಿಷೇಧಿಸಲಾಗಿದೆ.

    ನಗರಗಳಿಂದ ಒಂದೇ ಸಮನೆ ಹಳ್ಳಿಗಳಿಗೆ ಜನರು ಬರುತ್ತಿರುವುದರಿಂದ ಹಳ್ಳಿಗರು ತೀವ್ರ ಆತಂಕಗೊಂಡಿದ್ದಾರೆ.

    ಹಳ್ಳಿಗಳಲ್ಲಿ ಈಗ ಇದೇ ಚರ್ಚೆಯ ವಿಷಯವಾಗಿದೆ. ಹೊರ ಊರುಗಳಿಂದ ಬಂದ ಜನರು ತಮ್ಮೂರು ಪ್ರವೇಶಿಸಿದರೆ ಅವರ ಜತೆ ಕರೊನಾ ವೈರಸ್ ಸೋಂಕು ತಗಲಬಹುದೆಂಬ ಭೀತಿ ಇದೀಗ ಹಳ್ಳಿಗರನ್ನು ಆವರಿಸಿದೆ. ಈ ಹಿನ್ನೆಲೆಯಲ್ಲಿ ತಾಲೂಕಿನ ದೊಡ್ಡಬೈಲ್, ಬೆಂಗಳೆ, ಉಪ್ಪಳೇಕೊಪ್ಪ, ಕಲಕರಡಿ, ಹಾಡಲಗಿ, ಮರಗುಂಡಿ, ಮಳಲಗಾಂವ ಮೊದಲಾದ ಹಳ್ಳಿಗಳಲ್ಲಿ ಅಲಿಖಿತ ದಿಗ್ಬಂಧನ ಚಾಲ್ತಿಯಲ್ಲಿದೆ. ‘ನಮ್ಮೂರಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ. ಇಡೀ ಊರಿಗೆ ದಿಗ್ಬಂಧನ ಹಾಕಲಾಗಿದೆ. ಹಾಗಾಗಿ ಹೊರ ಊರುಗಳ ಜನರು ಬರಬಾರದು’ ಎಂದು ಗ್ರಾಮವನ್ನು ಪ್ರವೇಶಿಸುವ ರಸ್ತೆಯಲ್ಲಿ ದೊಡ್ಡ ಫಲಕ ಹಾಕಲಾಗಿದೆ. ಕೆಲವೆಡೆಗಳಲ್ಲಿ ಗ್ರಾಮಕ್ಕೆ ಬರುವ ಮುಖ್ಯ ರಸ್ತೆಗೆ ತಡೆ ಹಾಕಿ ಸಂಪರ್ಕವನ್ನೇ ಕಡಿತಗೊಳಿಸಲಾಗಿದೆ. ಹೀಗಾಗಿ ಇಂಥ ಹಳ್ಳಿಗಳು ಇದೀಗ ಜನಸಂಚಾರ ಮುಕ್ತವಾಗಿವೆ.

    ನಮ್ಮ ಊರಿನಲ್ಲಿ ಸದ್ಯ ವಿದೇಶದಿಂದ ಬಂದವರು ಯಾರೂ ಇಲ್ಲ. ಬೆಂಗಳೂರಿನಿಂದ ಕೆಲವರು ಬಂದಿದ್ದಾರೆ. ಅವರು ಆರೋಗ್ಯ ತಪಾಸಣೆ ಮಾಡಿಸಿಕೊಂಡು ಬಂದಿದ್ದಾರೆ. ಆದರೂ ಕರೊನಾ ವೈರಸ್ ಭೀತಿಗೆ ಪ್ರಶಾಂತವಾಗಿದ್ದ ಗ್ರಾಮೀಣ ಪ್ರದೇಶದ ನಿವಾಸಿಗಳು ಭಯಭೀತರಾಗಿದ್ದಾರೆ. ಕ್ವಾರಂಟೈನ್​ನಲ್ಲಿರುವ ಕೆಲವರು ಹಳ್ಳಿಗಳಲ್ಲಿ ನಿರಾತಂಕವಾಗಿ ಓಡಾಡುತ್ತಾರೆ. ಇಂಥವರು ನಮ್ಮ ಗ್ರಾಮಗಳಿಗೆ ಪ್ರವೇಶಿಸಿ ಆತಂಕ ಸೃಷ್ಟಿಸಬಾರದೆಂಬ ಉದ್ದೇಶದಿಂದ ದಿಗ್ಬಂಧನ ಹಾಕಲಾಗಿದೆ. ಜತೆ, ಅಪರಿಚಿತರು, ವ್ಯಾಪಾರಿಗಳು, ಹೊರದೇಶದಿಂದ ಬಂದವರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. | ಮಹಾಬಲೇಶ್ವರ ಮರಾಠಿ ದೊಡ್ಡಬೈಲ್ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts