More

    ನನ್ನ ರಾಜಕೀಯ ಬದುಕಿಗೆ ನಾಂದಿ ಹಾಡಿದ್ದೇ ಕೋಣಂದೂರು: ಆರಗ ಜ್ಞಾನೇಂದ್ರ

    ತೀರ್ಥಹಳ್ಳಿ: ನನಗೆ ರಾಜಕೀಯ ಬದುಕು ನೀಡಿದ್ದೇ ಕೋಣಂದೂರು ಗ್ರಾಪಂ. ಹಾಗಾಗಿ ಈ ಅವ„ಯಲ್ಲಿ ಕೋಣಂದೂರಿಗೆ 70 ಕೋಟಿ ರೂ. ಅನುದಾನ ನೀಡಿದ್ದೇನೆ. ಇದರಲ್ಲಿ 25 ಕೋಟಿ ರೂ. ವೆಚ್ಚದ ಚತುಷ್ಪಥ ಹೆದ್ದಾರಿ ನಿರ್ಮಾಣ ಮತ್ತು 9.50 ಕೋಟಿ ರೂ. ವೆಚ್ಚದ ಆಸ್ಪತ್ರೆ ವಿಸ್ತರಣಾ ಕಟ್ಟಡ ಗ್ರಾಪಂನ ಭವಿಷ್ಯವನ್ನೇ ಬದಲಾಯಿಸಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
    ಕೋಣಂದೂರಿನಲ್ಲಿ ಸೋಮವಾರ ಆಯೋಜಿಸಿದ್ದ ಸಮಾರಂಭದಲ್ಲಿ ಚತುಷ್ಪಥ ಹೆದ್ದಾರಿ ನಿರ್ಮಾಣ ಮತ್ತು ಸರ್ಕಾರಿ ಆಸ್ಪತ್ರೆ ವಿಸ್ತರಣಾ ಕಟ್ಟಡ, 40 ಕೋಟಿ ರೂ. ವೆಚ್ಚದ ರಸ್ತೆ, ಅಂಗನವಾಡಿ ಮುಂತಾದ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
    ಚತುಷ್ಪಥ ನಿರ್ಮಾಣಕ್ಕೆ ಯಾರೂ ಅರ್ಜಿ ಸಲ್ಲಿಸಿಲ್ಲ. ಆದರೂ 25 ಕೋಟಿ ರೂ. ಮಂಜೂರು ಮಾಡಿಸಿದ್ದೇನೆ. ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಇಲ್ಲಿನ ಪವರ್ ಸಬ್‍ಸ್ಟೇಷನ್ ಆರಂಭಕ್ಕೆ ಮಾಡಿದ ಪ್ರಯತ್ನ ಸಂತಸ ತಂದಿದೆ. ಇದನ್ನು ಪಪಂ ಮಾಡುವ ಪ್ರಯತ್ನಕ್ಕೆ ಜನಸಂಖ್ಯೆ ಕೊರತೆಯಿಂದ ಹಿನ್ನಡೆಯಾಗಿದೆ ಎಂದರು.
    ಕಳೆದೆರಡು ದಶಕಗಳಿಂದ ಅಡಕೆ ಬೆಳೆಗಾರರ ಪರವಾಗಿದ್ದೇನೆ. ಹೀಗಾಗಿ ಅಡಕೆ ಎಂದರೆ ಆರಗ ಎಂಬಂತಾಗಿದೆ. ಕಾಂಗ್ರೆಸ್ ಆಡಳಿತದಲ್ಲಿ ಸುಪ್ರೀಂ ಕೋರ್ಟಿಗೆ ನೀಡಿದ್ದ ಅಫಿಡವಿಟ್ ಪರಿಣಾಮ ಅಡಕೆ ಮರಗಳನ್ನೇ ಕಡಿಯುವ ಸ್ಥಿತಿ ನಿರ್ಮಾಣವಾಗಿತ್ತು. ಪ್ರಸ್ತುತ ವಿದೇಶದಿಂದ ಅಡಕೆ ಆಮದಾಗುತ್ತಿದ್ದು ಅದನ್ನು ನಿಯಂತ್ರಿಸಲು ಅಡಕೆ ಮೇಲಿನ ತೆರಿಗೆ ಹೆಚ್ಚಿಸಲಾಗಿದೆ. ಹಾಗಾಗಿ ಇಂದು ಪೂರ್ಣ ನಿಯಂತ್ರಣಕ್ಕೆ ಬಂದಿದ್ದು ಈಚಿನ ದಿನಗಳಲ್ಲಿ ಒಂದು ಕಾಳು ಅಡಕೆ ಕೂಡಾ ಬಂದಿಲ್ಲ ಎಂದು ತಿಳಿಸಿದರು.
    ಕನಿಷ್ಠ ಅರಿವಿಲ್ಲದವರು, ಅಡಕೆ ಆಮದು ಹಾಗೂ ಕಸ್ತೂರಿ ರಂಗನ್ ವರದಿ ಬಗ್ಗೆ ಅಧ್ಯಯನ ಇಲ್ಲದೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅಂಥವರ ಹೇಳಿಕೆಗೆ ಮನ್ನಣೆ ನೀಡಬೇಕಾದ ಅಗತ್ಯವಿಲ್ಲ ಎಂದರು.

    ಜನರ ಋಣ ನನ್ನ ಮೇಲಿದೆ: ನನ್ನ ಮೇಲಿನ ವಿಶ್ವಾಸದಿಂದಾಗಿ ಇಲ್ಲಿನ ಜನರು ನಾಲ್ಕನೇ ಬಾರಿ ಆಯ್ಕೆ ಮಾಡಿದ್ದು, ಅವರ ಋಣ ನನ್ನ ಮೇಲಿದೆ. ಕ್ಷೇತ್ರಕ್ಕೆ 3,254 ಕೋಟಿ ರೂ. ಅನುದಾನದ ಜತೆ ಎರಡು ದಿನಗಳ ಹಿಂದೆ 15 ಕೋಟಿ ರೂ. ಹೆಚ್ಚುವರಿ ಅನುದಾನ ಬಂದಿದೆ. ಗೃಹ ಸಚಿವನಾಗಿ ಹೊಸ ಹೆಜ್ಜೆಯನ್ನು ಮೂಡಿಸಿದ್ದು ಪಿಎಸ್‍ಐ ಹಗರಣದಲ್ಲಿ ದೇಶದಲ್ಲಿ ಮೊದಲ ಬಾರಿಗೆ ಐಪಿಎಸ್ ಅ„ಕಾರಿಯನ್ನೇ ಜೈಲಿಗಟ್ಟಿದ್ದೇನೆ. 117 ಹೊಸ ಠಾಣೆಯನ್ನು ಪ್ರಾರಂಭಿಸಿದ್ದೇನೆ. ನನ್ನ ಕ್ಷೇತ್ರದಲ್ಲಿ ಇಲಾಖೆಗೆ 23 ಕೋಟಿ ರೂ. ಅನುದಾನದಲ್ಲಿ ಹೊಸ ಠಾಣೆ ಮತ್ತು ವಸತಿ ಗೃಹಗಳ ನಿರ್ಮಾಣಕ್ಕೂ 23 ಕೋಟಿ ರೂ. ಅನುದಾನ ಬಂದಿದೆ. ಕೋಣಂದೂರು ಉಪ ಠಾಣೆಯನ್ನು ಮೇಲ್ದರ್ಜೆಗೆ ಏರಿಸುವ ಪ್ರಯತ್ನ ನಡೆದಿದೆ ಎಂದು ಗೃಹ ಸಚಿವರು ತಿಳಿಸಿದರು.

    ಕೋಣಂದೂರು ಗ್ರಾಪಂ ಅಧ್ಯಕ್ಷೆ ಶಾಂತಮ್ಮ, ಉಪಾಧ್ಯಕ್ಷೆ ಅನ್ನಪೂರ್ಣಾ, ಎಎಸ್ಪಿ ಅನಿಲ್‍ಕುಮಾರ್,  ಕಾಂತರಾಜ್, ಟಿಎಚ್‍ಒ ಡಾ. ನಟರಾಜ್, ಡಾ. ಮಂಜುನಾಥ್, ತಾಪಂ ಮಾಜಿ ಸದಸ್ಯ ಟಿ.ಮಂಜುನಾಥ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts