More

    ನನಸಾಗದ ಗ್ರಂಥಾಲಯ ಸಯ್ಯದ್ ಇಸಾಕ್ ಕನಸು

    ಅವಿನಾಶ್ ಜೈನಹಳ್ಳಿ ಮೈಸೂರು
    ಕನ್ನಡ ಪ್ರೇಮಿ ಸಯ್ಯದ್ ಇಸಾಕ್ ಅವರ ಹೊಸ ಗ್ರಂಥಾಲಯದ ಕನಸು ಆರು ತಿಂಗಳಾದರೂ ಕನಸಾಗಿಯೇ ಉಳಿದಿದ್ದು, ನಿರ್ಮಾಣಕ್ಕೆ ಸ್ಥಳೀಯ ಸಂಸ್ಥೆ ಮತ್ತು ಗ್ರಂಥಾಲಯ ಇಲಾಖೆಯೇ ಅಡ್ಡಿಯಾಗಿವೆ. ಹೀಗಾಗಿ, ಇಸಾಕ್ ಅವರು ದಾನಿಗಳು ನೀಡಿರುವ ಹಣದಿಂದ ಸ್ವತಃ ಗ್ರಂಥಾಲಯ ನಿರ್ಮಿಸಿಕೊಳ್ಳುತ್ತಿದ್ದಾರೆ.
    ಕನ್ನಡ ಭಾಷೆ ಎಂದರೆ ಮೂಗು ಮುರಿಯುವ ಈ ಕಾಲದಲ್ಲಿ ಕನ್ನಡ ಭಾಷಿಕರು ವಿರಳವಾಗಿರುವ ಮೈಸೂರಿನ ರಾಜೀವ್‌ನಗರದ 2ನೇ ಹಂತದಲ್ಲಿ ಕನ್ನಡ ಭಾಷಾಜ್ಞಾನ ಬೆಳೆಸಲು, ಅಕ್ಷರ ಪ್ರೀತಿ ಮೂಡಿಸಲು ಹತ್ತಾರು ವರ್ಷಗಳಿಂದ ಖಾಲಿ ಜಾಗದಲ್ಲಿ ಗುಡಿಸಲು ಹಾಕಿ ಸ್ವಂತ ಖರ್ಚಿನಲ್ಲೇ ಸಣ್ಣದೊಂದು ಗ್ರಂಥಾಲಯ ನಡೆಸುತ್ತಿದ್ದ ಸಯ್ಯದ್ ಇಸಾಕ್ ಅವರ ಗ್ರಂಥಾಲಯಕ್ಕೆ ಕಿಡಿಗೇಡಿಗಳು ಕಳೆದ ಏಪ್ರಿಲ್ 9 ರಂದು ಮಧ್ಯರಾತ್ರಿ ಬೆಂಕಿಯಿಟ್ಟು 11 ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಭಸ್ಮಮಾಡಿ ಗ್ರಂಥಾಲಯವನ್ನು ನಾಶ ಮಾಡಿದ್ದರು.
    ಕನ್ನಡ ಪುಸ್ತಕದ ಮನೆಗೆ ಕೊಳ್ಳಿಯಿಟ್ಟು ಐದಾರು ತಿಂಗಳು ಕಳೆದರೂ ಸುಟ್ಟು ಕರಕಲಾದ ಪುಸ್ತಕಗಳ ಬೂದಿ ಎದುರಲ್ಲೇ ಒಂದಿಷ್ಟು ದಿನ ಪತ್ರಿಕೆ, ಪುಸ್ತಕವನ್ನಿಟ್ಟು ತನ್ನ ಕಾಯಕ ಮುಂದುವರಿಸಿರುವ ಅಕ್ಷರಪ್ರೇಮಿ ಸಯ್ಯದ್ ಇಸಾಕ್ ಅವರ ಕನಸನ್ನು ಅವರೇ ಮತ್ತೆ ಸಾಕಾ ರಗೊಳಿಸುಕೊಳ್ಳುತ್ತಿದ್ದಾರೆ. ಆದರೆ, ಲಕ್ಷಾಂತರ ಪುಸ್ತಕ ನೀಡುವ, ಕಟ್ಟಡ ಕಟ್ಟಿಸಿಕೊಡುವ ಹಲವು ಮಂದಿಯ ತೋರ್ಪಡಿಕೆಯ ಆಶ್ವಾಸ ನೆಗಳು ಇಸಾಕ್ ಅವರನ್ನು ಆಕಾಶ ತೋರಿಸಿ ಪಾತಾಳಕ್ಕಿಳಿಸಿದವು. ಹಾಗಾಗಿ ಈ ನಡುವೆ ದಾನಿಗಳು ನೀಡಿದ್ದ 2.80 ಲಕ್ಷ ರೂ.ಗಳನ್ನು ಬಳಸಿ ಸಣ್ಣದಾಗಿ ಗ್ರಂಥಾಲಯ ನಿರ್ಮಿಸುತ್ತಿದ್ದಾರೆ. ಮೂರು ವಾರದಿಂದ ನಿರ್ಮಾಣ ನಡೆಯುತ್ತಿದ್ದು, ಇನ್ನೆರಡು ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಈಗಾಗಲೇ ಗ್ರಂಥಾಲಯದ ಶೆಡ್ ನಿರ್ಮಾಣ ಮಾಡಿದ್ದಾರೆ. ಪುಸ್ತಕಗಳಿಗೆ ರ‌್ಯಾಕ್ ಮಾಡಬೇಕಾಗಿದೆ. ಈ ಬಾರಿ ಸಿಸಿ ಕ್ಯಾಮರಾವನ್ನು ಅಳವಡಿಸಿಕೊಳ್ಳಲು ಮುಂದಾಗಿದ್ದಾರೆ. ಇದನ್ನು ಜನವರಿ 15ರ ಸಂಕ್ರಾಂತಿ ಹಬ್ಬದಂದು ಉದ್ಘಾಟನೆ ಮಾಡುವುದಾಗಿ ಇಸಾಕ್ ತಿಳಿಸಿದ್ದಾರೆ.
    ದೇಣಿಗೆಯೂ ವಾಪಸ್:
    ಗ್ರಂಥಾಲಯ ಬೆಂಕಿಗಾಹುತಿಯಾದ ನಂತರ ಕುಗ್ಗಿಹೋಗಿದ್ದ ಇಸಾಕ್, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ನೋವನ್ನು ಹಂಚಿ ಕೊಂಡಿದ್ದರು. ಘಟನೆಯಿಂದ ಮರುಗಿದ ಕೆಲವರು ಇಸಾಕ್ ಅವರಿಗೆ ನೆರವಾಗಲು ಸಾರ್ವಜನಿಕ ನಿಧಿ ಸ್ಥಾಪಿಸಿ ದೇಣಿಗೆ ಸಂಗ್ರಹಿಸುವ ಅಭಿಯಾನವನ್ನೂ ಆರಂಭಿಸಿದ್ದರು. ಇದಕ್ಕೆ ರಾಜ್ಯ ಸೇರಿದಂತೆ ನೆರೆ ರಾಜ್ಯ ಹಾಗೂ ವಿದೇಶಗಳಿಂದಲೂ ಸಾವಿರಾರು ಮಂದಿ ದೇಣಿಗೆ ನೀಡಿದ್ದರು. ಈ ನಿಧಿಯಲ್ಲಿ ಬರೋಬ್ಬರಿ 29 ಲಕ್ಷ ರೂ. ದೇಣಿಗೆ ಸಂಗ್ರಹವೂ ಆಗಿತ್ತು. ಈ ವಿಚಾರ ತಿಳಿದ ಇಸಾಕ್ ಕೂಡ ತನ್ನ ಹೊಸ ಗ್ರಂಥಾಲಯ ಕನಸು ಸಾಕಾರಗೊಳ್ಳುವ ಇರಾದೆಯಲ್ಲಿದ್ದರು. ಈ ನಡುವೆ, ಸಾಮಾಜಿಕ ಜಾಲತಾಣದಲ್ಲಿ ಗ್ರಂಥಾಲಯಕ್ಕೆ ಬೆಂಕಿ ಇಟ್ಟ ಘಟನೆ ಚರ್ಚೆಗೆ ಗ್ರಾಸವಾದಾಗ ಸರ್ಕಾರ ನಿವೇಶನದೊಂದಿಗೆ ಗ್ರಂಥಾಲಯ ಕಟ್ಟಡವನ್ನು ಕಟ್ಟಿಸಿಕೊಡುವುದಾಗಿ ಘೋಷಿಸಿತು. ಅಲ್ಲಿಯವರೆಗೆ ಸುಮ್ಮನಿದ್ದ ಸಾರ್ವಜನಿಕ ನಿಧಿಗೆ ದೇಣಿಗೆ ನೀಡಿದ್ದ ಮಂದಿ ಭಿನ್ನರಾಗ ತೆಗೆದರು. ಇದರಿಂದ ವಿಚಲಿತರಾದ ಸಾರ್ವಜನಿಕ ನಿಧಿ ಸ್ಥಾಪಕರು ಮರುದಿನವೇ ಸಂಗ್ರಹವಾದ ಹಣವನ್ನು ಅವರವರ ಖಾತೆಗೆ ಮರು ಜಮೆ ಮಾಡಿದರು. ಇಷ್ಟೆಲ್ಲ ಘಟನೆ ನಡೆದು ಹೋಗಿದ್ದು ಏಪ್ರಿಲ್ ತಿಂಗಳಲ್ಲೇ. ಆದರೆ, ಸರ್ಕಾರ ನೀಡಿದ ಭರವಸೆ ಇನ್ನೂ ಈಡೇರಿಲ್ಲ. ಆದರೂ, ಇಸಾಕ್ ಛಲ ಬಿಡದೆ ಮತ್ತೆ ನೂರಾರು ಮಂದಿ ಸಾಹಿ ತ್ಯಾಸಕ್ತರು, ಪುಸ್ತಕ ಪ್ರೇಮಿಗಳ ಓದಿನ ದಾಹ ನೀಗಿಸುವ ಕೆಲಸ ಮಾಡುತ್ತಿದ್ದಾರೆ.
    ಮುಡಾದಿಂದ ನಿವೇಶನ:
    ಜನತೆಗೆ ಓದಿನ ದಾಹ ನೀಗಿಸುತ್ತಾ, ಅಕ್ಷರ ಪ್ರೀತಿ ಹಂಚುವ ಸಲುವಾಗಿ ನಡೆಸುತ್ತಿದ್ದ ಗ್ರಂಥಾಲಯಕ್ಕೆ ಬೆಂಕಿ ಬಿದ್ದ ಸುದ್ದಿಗೆ ಮರುಗಿದ ಸರ್ಕಾರ, ಗ್ರಂಥಾಲಯಕ್ಕೆ ಬೇಕಾಗುವ ನಿವೇಶನ ಹಾಗೂ ಕಟ್ಟಡ ಕಟ್ಟಿಕೊಡುವ ಭರವಸೆ ನೀಡಿತ್ತು. ಅದರಂತೆ ಮುಡಾ ಅಧ್ಯಕ್ಷರ ಮುತು ವರ್ಜಿಯಿಂದ ಗ್ರಂಥಾಲಯ ಸುಟ್ಟು ಕರಕಲಾದ ಸ್ಥಳವಾದ ಮೂಲೆ ನಿವೇಶನವನ್ನು ಸಯ್ಯದ್ ಇಸಾಕ್ ಅವರಿಗೆ ಗ್ರಂಥಾಲಯ ನಡೆಸು ವುದಕ್ಕಾಗಿ ನೀಡಿದೆ. ಆದರೆ, ಕಟ್ಟಡ ನಿರ್ಮಿಸಿಕೊಡುವ ಜವಾಬ್ದಾರಿ ಹೊತ್ತ ಪಾಲಿಕೆ ಮತ್ತು ಗ್ರಂಥಾಲಯ ಇಲಾಖೆ ಮೌನಕ್ಕೆ ಶರಣಾಗಿವೆ. ಹಿಂದಿನ ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತರು ಮತ್ತು ಗ್ರಂಥಾಲಯ ಅಧಿಕಾರಿಗಳು ಭೇಟಿ ನೀಡಿ ಹೊಸ ಕಟ್ಟಡ ಮಾಡಿಕೊಡುತ್ತೇವೆ ಎಂದು ಹೇಳಿಹೋದರು. ಆದರೆ, ಆರು ತಿಂಗಳಾದರೂ ಇತ್ತ ಯಾರೂ ಬಂದಿಲ್ಲ. ಈ ಬಗ್ಗೆ ಗ್ರಂಥಾಲಯ ಅಧಿಕಾರಿಗಳನ್ನು ವಿಚಾರಿಸಿದರೆ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಂದಿಲ್ಲ. ಪಾಲಿಕೆ ಅಧಿಕಾರಿಗಳನ್ನು ವಿಚಾರಿಸಿ ಎನ್ನುತ್ತಾರೆ. ನನ್ನ ಗ್ರಂಥಾಲಯ ಕನಸು ಈಡೇರುವವರೆಗೂ ಇಸಾಕ್ ಅವರೇ ಗ್ರಂಥಾಲಯ ನಿರ್ಮಾಣ ಮಾಡಿಕೊಳ್ಳುತ್ತಿದ್ದಾರೆ.

    ಇಲಾಖೆ ಹೇಳುವುದೇನು?:
    ಗ್ರಂಥಾಲಯ ಸುಟ್ಟುಹೋದ ಸ್ಥಳವನ್ನು ಮುಡಾ ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಹಸ್ತಾಂತರಿಸಿದೆ. ಇಲಾಖೆಯಿಂದ ಗ್ರಂಥಾ ಲಯ ನಿರ್ಮಿಸಿ ಕಟ್ಟಡದ ಒಂದು ಕೊಠಡಿಯಲ್ಲಿ ಇಸಾಕ್ ಅವರು ತಮ್ಮ ಪುಸ್ತಕ ಮತ್ತು ಪತ್ರಿಕೆಗಳನ್ನು ಇಡಬಹುದು. ಮತ್ತೊಂದು ಭಾಗ ದಲ್ಲಿ ನಮ್ಮ ಇಲಾಖೆ ಗ್ರಂಥಾಲಯ ಕಾರ್ಯನಿರ್ವಹಿಸಲಿದೆ. ಜತೆಗೆ ಇಸಾಕ್ ಅವರ ಮನೆಯ ಒಬ್ಬ ಸದಸ್ಯರಿಗೆ ತಾತ್ಕಾಲಿಕ ಕೆಲಸ ನೀಡ ಲಾಗುವುದು. ಕಟ್ಟಡ ನಿರ್ಮಾಣಕ್ಕೆ 25ರಿಂದ 30 ಲಕ್ಷ ರೂ. ಯೋಜನೆ ರೂಪಿಸಲಾಗಿದ್ದು, ಆಯುಕ್ತರು ಒಪ್ಪಿಗೆ ಸೂಚಿಸಿ ಅನುದಾನ ಬಿಡುಗಡೆ ಮಾಡಿದರೆ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದು ಗ್ರಂಥಾಲಯ ಅಧಿಕಾರಿಗಳು ಹೇಳುತ್ತಾರೆ.

    ನಿತ್ಯ 200 ಓದುಗರ ಭೇಟಿ
    ಪುಸ್ತಕಗಳನ್ನು ಬಯಲಲ್ಲೇ ಜೋಡಿಸಿಟ್ಟಿದ್ದೇನೆ. ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಸೇರಿ ನಿತ್ಯ 200 ಕ್ಕೂ ಅಧಿಕ ಮಂದಿ ಗ್ರಂಥಾಲಯಕ್ಕೆ ಭೇಟಿ ಕೊಡುತ್ತಿದ್ದಾರೆ. ಓದಲು ಪುಸ್ತಕ ಇಲ್ಲ ಎಂದು ನಿರಾಸೆಯಾಗದಂತೆ ನೋಡಿಕೊಂಡಿದ್ದೇನೆ. ದಾನಿಗಳಿಂದ ದೊರೆತ 10 ಸಾವಿರದಷ್ಟು ಪುಸ್ತಕಗಳಿವೆ. ಕೆಲವರು ಈಗಲೂ ಕೊಡುತ್ತಿದ್ದಾರೆ ಎಂದು ಸೈಯದ್ ಇಸಾಕ್ ಹೇಳಿದರು.

    ಕೋಟ್…
    ದಾನಿಗಳು ನೀಡಿದ್ದ 2.80 ಲಕ್ಷ ರೂ.ಗಳನ್ನು ಬಳಸಿ ಸಣ್ಣದಾಗಿ ಗ್ರಂಥಾಲಯ ನಿರ್ಮಿಸುತ್ತಿದ್ದೇನೆ. ಈಗಾಗಲೇ ಗ್ರಂಥಾಲಯದ ಶೆಡ್ ನಿರ್ಮಾಣ ಮಾಡಿದ್ದಾರೆ. ಪುಸ್ತಕಗಳಿಗೆ ರ‌್ಯಾಕ್ ಮಾಡಬೇಕಾಗಿದೆ. ಈ ಬಾರಿ ಸಿಸಿ ಕ್ಯಾಮರಾವನ್ನು ಅಳವಡಿಸಲಾಗುತ್ತದೆ. ಇದನ್ನು ಜನವರಿ 15ರ ಸಂಕ್ರಾಂತಿ ಹಬ್ಬದಂದು ಉದ್ಘಾಟನೆ ಮಾಡಲಾಗುವುದು.
    ಸಯ್ಯದ್ ಇಸಾಕ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts